cartoon-little-boy-thinking-with-question-mark_29190-7911.jpg
Spread the love

ಅಂಕಲ್,
” ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ, ಅದು ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ ” ಅಂತ ಎಲ್ಲಾ ಕಡೆ ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ?

ಆಂಟಿ,
” ಮದ್ಯಪಾನದಿಂದ ಮನೆಗಳು ಸರ್ವನಾಶ ಆಗುತ್ತದೆ. ದೇಹ ರೋಗಗಳ ಗೂಡಾಗುತ್ತದೆ ” ಎಂದು ಪ್ರತಿನಿತ್ಯ ಮಾಧ್ಯಮಗಳಲ್ಲಿ ಹೇಳುತ್ತಾರೆ. ಆದರೂ ಪ್ರತಿ ಬೀದಿಗಳಲ್ಲೂ ಬಾರುಗಳಿವೆ.
ಏಕೆ ?

ಅಣ್ಣ,
ನಮ್ಮ ದೇಶದಲ್ಲಿ ಬಹಳಷ್ಟು ವಿನಾಶಕಾರಿಯಾದ ಮತ್ತು ಕೆಲ ದೇಶಗಳಲ್ಲಿ ನಿಷೇಧಿಸಲಾದ ಆರೋಗ್ಯಕ್ಕೆ ಮಾರಕವಾದ ಔಷಧಿಗಳನ್ನು ಮೆಡಿಕಲ್ ಸ್ಟೋರುಗಳಲ್ಲಿ ಈಗಲೂ ಮಾರಲಾಗುತ್ತಿದೆ. ಏಕೆ ಯಾರೂ ಏನೂ ಮಾಡುತ್ತಿಲ್ಲ.

ಅಕ್ಕ,
ತನ್ನದಲ್ಲದ ಇನ್ನೊಬ್ಬರ ಹಣ, ಆಸ್ತಿ ಹೇಸಿಗೆಗೆ ಸಮಾನ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಆದರೆ ಭ್ರಷ್ಟಾಚಾರ ಇಲ್ಲದ ಕ್ಷೇತ್ರವೇ ಇಲ್ಲ. ಹಾಗಾದರೆ ಹೇಳುವುದಕ್ಕೂ ಮಾಡುವುದಕ್ಕೂ ಸಂಬಂಧವಿಲ್ಲವೇ ?

ಅಮ್ಮ,
ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ದೇವರು ನೋಡುತ್ತಲೇ ಇರುತ್ತಾನೆ. ಆತನಿಗೆ ತಿಳಿಯದಂತೆ ಇಲ್ಲಿ ಏನೂ ನಡೆಯುವುದಿಲ್ಲ ಎಂದು ಹೇಳಿದೆಯಲ್ಲ. ಆದರೆ ಇಲ್ಲಿ ಪ್ರತಿನಿತ್ಯ ಕೊಲೆ, ಸುಲಿಗೆ, ವಂಚನೆ, ಅತ್ಯಾಚಾರ ನಡೆಯುತ್ತಲೇ ಇದೆಯಲ್ಲ. ಹಾಗಾದರೆ ದೇವರು ಇರುವುದು ಸುಳ್ಳೇ ?

ಅಪ್ಪ,
ವಿದ್ಯೆ ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಮಾಡುತ್ತದೆ ಎಂದು ಹೇಳಿದೆ. ಈಗ ಬಹುತೇಕ ಎಲ್ಲರೂ ವಿದ್ಯಾವಂತರೆ. ಆದರೆ ಸಂಸ್ಕಾರ ಮಾತ್ರ ಮಾಯವಾಗಿದೆ. ಹಾಗಾದರೆ ನೀವು ಹೇಳಿದ್ದು ಸುಳ್ಳೇ ?

ಸಾರ್,
ನಾವು ತಿನ್ನುವ ಆಹಾರ, ಉಸಿರಾಡುವ ಗಾಳಿ, ಕುಡಿಯುವ ನೀರು, ಮಾನವೀಯ ಮೌಲ್ಯಗಳು ಸಂಪೂರ್ಣ ಮಲಿನವಾಗುತ್ತಿದೆ. ಆದರೂ ಎಚ್ಚೆತ್ತುಕೊಳ್ಳದೆ ಮೈಮರೆತಿದ್ದೇವೆ ಎಚ್ಚರಗೊಳ್ಳುವುದು ಯಾವಾಗ ?

ಆ ಬಾಲಕನಿಗೆ ಸರಿಯಾದ ಉತ್ತರ ಹೇಳಬೇಕಿದೆ.

ಇಲ್ಲ, ಸಮಾಜ ಇರುವುದೇ ಹೀಗೆ. ನೀನು ಇನ್ನೂ ಚಿಕ್ಕವನು. ನಿನಗೆ ಅರ್ಥವಾಗುವುದಿಲ್ಲ. ಇದು ಅವರವರ ಪಾಪ ಕರ್ಮದ ಫಲ ಹಾಗೆ ಹೀಗೆ ಎಂದು ಮತ್ತೆ ಸುಳ್ಳಿನ ಭ್ರಮಾಲೋಕದ, ಪಲಾಯನವಾದದ ಉತ್ತರ ಬೇಡ.
ಆತ್ಮಸಾಕ್ಷಿಯ ವಾಸ್ತವ ನೆಲೆಯ ಉತ್ತರ ಹೇಳಬೇಕಿದೆ.

ಬಹುಶಃ ಈ ಪ್ರಶ್ನೆಗಳಿಗೆ ನಿಜವಾದ ಉತ್ತರ ಸಿಕ್ಕಲ್ಲಿ ನಮ್ಮ ಜನರ ಜೀವನಮಟ್ಟ – ಸಮಾಜದ ನೆಮ್ಮದಿಯ ಮಟ್ಟ – ವ್ಯಕ್ತಿತ್ವದ ಉನ್ನತ ಮಟ್ಟ ಸಾಧ್ಯವಾಗಬಹುದು.

ಅಪ್ಪ ಹೇಳುತ್ತಿದ್ದರು,
ಬೇಡುವ ಕೈ ನಿನ್ನದಾಗುವುದು ಬೇಡ,
ಕೊಡುವ ಕೈ ನಿನ್ನದಾಗಲಿ…..

ಅಮ್ಮ ಹೇಳುತ್ತಿದ್ದರು,
ಅವಮಾನ ಸಹಿಸಬೇಡ,
ಸ್ವಾಭಿಮಾನದ ಬದುಕು ನಿನ್ನದಾಗಲಿ,….

ಗುರುಗಳು ಹೇಳುತ್ತಿದ್ದರು,
ದೇಶದ್ರೋಹಿ, ಸ್ವಾರ್ಥಿ ಆಗಬೇಡ,
ದೇಶಪ್ರೇಮಿ, ತ್ಯಾಗ ಜೀವಿ ನೀನಾಗು……

ಮಾರ್ಗದರ್ಶಿಗಳು – ಹಿತೈಷಿಗಳು ಹೇಳುತ್ತಿದ್ದರು,
ದ್ವೇಷ ಭಾವನೆ ತೊಡೆದು ಹಾಕು,
ಪ್ರೀತಿಯ ಭಾಷೆ ನಿನ್ನದಾಗಲಿ…..

ನೀತಿ ಕಥೆಗಳಲ್ಲಿ ಓದುತ್ತಿದ್ದೆ,
ಪರರ ಸ್ವತ್ತು, ಪರ ಸ್ತ್ರೀ ಮೇಲಿನ ಮೋಹ, ಅನೈತಿಕ, ಅಸಹ್ಯಕ್ಕೆ ಸಮಾನ, ದುಡಿದ ಶ್ರಮದ ಫಲ ಮಾತ್ರ ನಿನ್ನದಾಗಲಿ……

ಹಿರಿಯರು ಹೇಳುತ್ತಿದ್ದರು,
ಮೋಸ ವಂಚನೆ ಕಳ್ಳತನ ನಿನ್ನ ಬಳಿ ಸುಳಿಯದಿರಲಿ,
ಸ್ನೇಹ, ವಿಶ್ವಾಸ, ತಾಳ್ಮೆ ನಿನ್ನಿಂದ ಅಳಿಯದಿರಲಿ……

ಪುಸ್ತಕಗಳಲ್ಲಿ ಬರೆದಿದ್ದರು,
ನಿನ್ನಲ್ಲಿರುವ ಹಣ ಆಸ್ತಿ ಯಾವಾಗ ಬೇಕಾದರೂ ನಾಶವಾಗಬಹುದು.
ಆದರೆ, ನೀನು ಕಲಿತಿರುವ ವಿದ್ಯೆ ನಿನ್ನನ್ನು ಕೊನೆಯವರೆಗೂ ಕಾಪಾಡುತ್ತದೆ……

ಈಗಲೂ ಇದು ಪ್ರಸ್ತುತವೇ ?
ನಮ್ಮ ಮಕ್ಕಳಿಗೆ ಇದನ್ನು ಈಗಲೂ ಕಲಿಸುತ್ತಿದ್ದೇವೆಯೇ ?
ಇದು ಸಾರ್ವಕಾಲಿಕ ಸತ್ಯವೇ ?
ಬದಲಾವಣೆ ಅವಶ್ಯವೇ ?
ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದನ್ನು ನಮ್ಮ ಮಕ್ಕಳಿಗೆ ಕಲಿಸುವುದರಿಂದ ಅವರಿಗೆ ಯಶಸ್ಸು ಸಿಗುವುದೆ ? ಅಥವಾ ವಾಸ್ತವದಲ್ಲಿ ಗೊಂದಲಕ್ಕೆ ಒಳಗಾಗುವರೆ ?,……

ಒಳ್ಳೆಯ ಮನಸ್ಸಿನವರಿಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ನಿಜವೇ?…..,

ನಾವು ಏನು ದಾನ ಮಾಡುತ್ತೇವೆಯೋ ಅದರ ಎರಡು ಪಟ್ಟು ನಮಗೆ ವಾಪಸ್ಸು ಬರುತ್ತದೆ,
ಸತ್ಯವೆ ?…..,

ಒಳ್ಳೆಯವರಿಗೆ ಒಳ್ಳೆಯದು ಕೆಟ್ಟವರಿಗೆ ಕೆಟ್ಟದ್ದು ಆಗುತ್ತದೆ. ವಾಸ್ತವವೇ ?……,

ನಾವು ಬದಲಾದರೆ ಜಗತ್ತೇ ಬದಲಾಗುತ್ತದೆ, ಇದು ಪ್ರಾಯೋಗಿಕವೇ ?…..,

ಇಂದಿನ ಎಲ್ಲಾ ಕಷ್ಟ ಸುಖಗಳಿಗೂ ಹಿಂದಿನ ಜನ್ಮದ ಪಾಪ ಪುಣ್ಯಗಳೇ ಕಾರಣ ನಂಬಬಹುದೇ ?…..,

ಗಂಡು ಹೆಣ್ಣಿನ ಸಂಬಂಧ ಪೂರ್ವ ನಿಯೋಜಿತ ಋಣಾನುಬಂಧ, ಸರಿಯೇ ?…..,

ಗಂಡ ಹೆಂಡತಿ ಸಂಬಂಧ ಏಳು ಜನುಮಗಳ ಅನುಭಂದ, ಹೌದೇ ?…..,

ಅನ್ನದ ಪ್ರತಿ ಅಗುಳಿನ ಮೇಲೂ ತಿನ್ನುವವನ ಹೆಸರು ಬರೆದಿರುತ್ತದೆ, ಗೊತ್ತೇ ?…..,

ಅಪಘಾತ, ಆಕಸ್ಮಿಕ, ಅನಾರೋಗ್ಯದ ಸಾವು ನಮ್ಮ ಹಣೆಬರಹ, ಒಪ್ಪೋಣವೇ ?……,

ಬದುಕಿನ ಎಲ್ಲಾ ಘಟನೆಗಳೂ ಪೂರ್ವ ನಿರ್ಧಾರಿತ, ಪ್ರಶ್ನಿಸಬಾರದೇ ?…….,

ನಮ್ಮನ್ನು ಕಾಡುವ ಈ ಮನಸ್ಥಿತಿಗೆ ಸಮಾಧಾನಕರ ಉತ್ತರಬೇಕಿದೆ……………

ಹೊಟ್ಟೆ ತುಂಬಿದ ಶ್ರೀಮಂತರು,
ವೇದಾಧ್ಯಯನ ಪಂಡಿತರು,
ಬೈಬಲ್ ಪ್ರಚಾರಕರು,
ಖುರಾನ್ ಆರಾಧಕರು,
ವಿಭೂತಿ ಮಠಾಧೀಶರು,
ಪುನರ್ಜನ್ಮ ಸೃಷ್ಟಿಕರ್ತರು,
ಜ್ಯೋತಿಷಿಗಳು,
ವಿಚಾರವಾದಿಗಳು,
ವಿಜ್ಞಾನಿಗಳ ಉತ್ತರಗಳು ನನಗೆ ಬೇಡ,…..,

ಬೀದಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯಿಂದ ಉತ್ತರ ಬೇಕಿದೆ……,

ಹುತಾತ್ಮ ಯೋಧನ ಹೆಂಡತಿಯಿಂದ ಉತ್ತರ ಬೇಕಿದೆ,……,

ಆತ್ಮಹತ್ಯೆ ಮಾಡಿಕೊಂಡ ರೈತನ ಮಗನಿಂದ ಉತ್ತರ ಬೇಕಿದೆ,…..,

ಬಸ್ ನಿಲ್ದಾಣದಲ್ಲಿ ದಿನ ಕಳೆಯುವ ಅನಾಥನಿಂದ ಉತ್ತರ ಬೇಕಿದೆ,……,

ಗಂಡನಿಂದಲೇ ಏಡ್ಸ್ ಬಂದು ಈಗ ಆತನಿಂದಲೇ ಪರಿತ್ಯಕ್ತಳಾದ ಮಹಿಳೆಯಿಂದ ಉತ್ತರ ಬೇಕಿದೆ,…..,

ಮಾನವೀಯತೆಯಿಂದ ವಿಧವೆಗೆ ಬದುಕು ನೀಡಿ ಈಗ ವರದಕ್ಷಿಣೆ ಆರೋಪದಲ್ಲಿ ಜೈಲಿನಲ್ಲಿ ದಿನದೂಡುತ್ತಿರುವ ಯುವಕನಿಂದ ಉತ್ತರ ಬೇಕಿದೆ,….,

ತನ್ನದೆಲ್ಲವನ್ನೂ ಗಲಭೆಯಲ್ಲಿ ಕಳೆದುಕೊಂಡ ವ್ಯಕ್ತಿಯ ಉತ್ತರ ಬೇಕಿದೆ,…..,

ತಮ್ಮ ಸರ್ವಸ್ವವನ್ನೂ ತಮ್ಮ ನಾಲ್ಕು ಮಕ್ಕಳಿಗಾಗಿ ತ್ಯಾಗಮಾಡಿ ಈಗ ಅವರಿಂದ ತಿರಸ್ಕೃತರಾಗಿ ವೃಧ್ಧಾಶ್ರಮದಲ್ಲಿ ಬದುಕುತ್ತಿರುವ ತಂದೆಯಿಂದ ಉತ್ತರ ಬೇಕಿದೆ,….,

ಪ್ರಾಮಾಣಿಕರಾಗಿದ್ದುದರಿಂಲೇ ತನ್ನ ಸಹಚರರಿಂದ ಕಿರುಕುಳಕ್ಕೊಳಗಾಗಿ ಸೇವೆಯಿಂದ ವಜಾಗೊಂಡ ಸರ್ಕಾರಿ ಅಧಿಕಾರಿಯಿಂದ ಉತ್ತರ ಬೇಕಿದೆ,……,

ಅವರ ಉತ್ತರಗಳು ಆಶಾದಾಯಕವಾಗಿದ್ದರೆ ಇವನ್ನೆಲ್ಲಾ ಮತ್ತೊಮ್ಮೆ ವಾಸ್ತವದ ವಿಮರ್ಶೆಗೊಳಪಡಿಸಬಹುದು……,

ಇಲ್ಲದಿದ್ದರೆ ಇನ್ನೆಷ್ಟು ದಿನ ಈ ಭ್ರಮೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದುವರಿಯುವುದು……,

ಅಥವಾ,

ಮೇಲೆ ಹೇಳಿದ ಎಲ್ಲವೂ ಸತ್ಯ. ಆದರೆ ಅದನ್ನು ಅರ್ಥಮಾಡಿಕೊಳ್ಳಲು ನಿಮಗೆ ತಿಳಿವಳಿಕೆಯ ಕೊರತೆಯಿದೆ ಎನ್ನುವುದಾದರೆ ನಿಮಗೆ ಧನ್ಯವಾದಗಳು….

ನಿಮ್ಮ ಅದೃಷ್ಟ ನಮಗಿಲ್ಲ….

ಒಳ್ಳೆಯದೆಲ್ಲವೂ ಒಳ್ಳೆಯದಾಗಿ ಇನ್ನೂ ಉಳಿದಿದೆಯೇ ?….,

ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಮಕ್ಕಳಿಗೆ ನಾವು ನೈತಿಕ ಶಿಕ್ಷಣದ ಪಾಠಗಳಲ್ಲಿ ಏನು ಹೇಳಿಕೊಡಬೇಕು ?…..,

ಹಳೆಯದು ಮತ್ತು ಹೊಸದರ ಸಮ್ಮಿಲನ ಸಾಧಿಸುವುದು ಹೇಗೆ ?,…….,

ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಸಾಗಲಿ……,

ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಇದು ಅತ್ಯಾವಶ್ಯಕ………………,

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!