ದಿನಾಂಕ: 05-03-2026 (ಹಾಯ್ ಉಡುಪಿ ನ್ಯೂಸ್)
ಪುತ್ತೂರು: ನಗರದ ರಿಲಯನ್ಸ್ ಮಾಲ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕಾರೊಂದನ್ನು ಅಡ್ಡಗಟ್ಟಿ ಪಿಸ್ತೂಲ್ ತೋರಿಸಿ ಗುಂಡು ಹಾರಿಸಲು ಯತ್ನಿಸಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ನಿವಾಸಿ ಮಹಮ್ಮದ್ ಶಫಿಕ್ (19) ಬಂಧಿತ ಆರೋಪಿ.
ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ (42) ಎಂಬವರು ಮಾರ್ಚ್ 2 ರಂದು ಮಧ್ಯಾಹ್ನ ಪುತ್ತೂರಿನಿಂದ ಕೂರ್ನಡ್ಕಕ್ಕೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಿಲಯನ್ಸ್ ಮಾಲ್ ಸಮೀಪ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಸುಮಾರು 30 ವರ್ಷ ಪ್ರಾಯದಂತೆ ಕಾಣುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಅಬ್ದುಲ್ ಹಕೀಂ ಅವರ ಕಾರನ್ನು ತಡೆದಿದ್ದಾನೆ. ಬಳಿಕ ತನ್ನ ಬಳಿಯಿದ್ದ ಪಿಸ್ತೂಲ್ ಹೊರತೆಗೆದು ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾನೆ.ತಕ್ಷಣ ಎಚ್ಚೆತ್ತುಕೊಂಡ ಅಬ್ದುಲ್ ಹಕೀಂ ಹಾಗೂ ಅಲ್ಲಿದ್ದ ಸಾರ್ವಜನಿಕರು ಆರೋಪಿಯನ್ನು ಹಿಡಿಯಲು ಯತ್ನಿಸಿದಾಗ, ಆತ ತನ್ನ ಮೋಟಾರು ಸೈಕಲ್‌ನಲ್ಲಿ ಅಲ್ಲಿಂದ ಪರಾರಿಯಾಗಿದ್ದನು.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಹಕೀಂ ಅವರು ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡು, ಕೇವಲ ಎರಡೇ ದಿನಗಳಲ್ಲಿ ಆರೋಪಿ ಮಹಮ್ಮದ್ ಶಫಿಕ್‌ನನ್ನು ಪತ್ತೆಹಚ್ಚಿ ಬಂಧಿಸಿ ವಶಕ್ಕೆ ಪಡೆದು ಕೊಂಡಿದ್ದಾರೆ.
ಆರೋಪಿಯ ವಿರುದ್ಧ ಬಿ.ಎನ್.ಎಸ್ 2023ರ ಕಲಂ 351(3) ಹಾಗೂ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 3, 25, 27ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
