ದಿನಾಂಕ:01-03-2026(ಹಾಯ್ ಉಡುಪಿ ನ್ಯೂಸ್)
ಶಿವಮೊಗ್ಗ: ಇರಾನ್ ನ ಪರಮೋಚ್ಛ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯನ್ನು ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದ್ವಂದ ನೀತಿಯ ವಿರುದ್ಧ ಕಿಡಿಕಾರಿದ್ದಾರೆ.
ಊರಗಡೂರಿನಲ್ಲಿ ಕೊಲೆಯಾದ ಬಾಲಕನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇರಾನ್ ನ ಖಮೇನಿ ಸಾವಿನ ಹಿನ್ನಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಖಮೇನಿ ಸಾವು ಖಂಡನೀಯವಾದದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದೆಡೆ ಶಾಂತಿ ಮಂತ್ರ ಹೇಳುತ್ತಾ ಮತ್ತೊಂದೆಡೆ ಯುದ್ಧ ಮಾಡುತ್ತಿದ್ದಾರೆ. ಹೀಗೆ ದ್ವಂದ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಈ ಯುದ್ಧ ಅಗತ್ಯ ಇರಲಿಲ್ಲ ಎಂದರು.
ಇರಾಕ್ ಮೇಲೆ ಯುದ್ಧ ಆರಂಭವಾದ ಹಿನ್ನಲೆಯಲ್ಲಿ ರಾಜ್ಯದ ಕನ್ನಡಿಗರು ಸಿಲುಕಿಕೊಂಡಿದ್ಥಾರೆ. ಅವರ ರಕ್ಷಣೆಗೆ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಟೀಕೆ ಮಾಡುವುದೇ ವಿಪಕ್ಷ ಗಳ ಕೆಲಸ ಎಂದು ಹೇಳಿದರು.
