ಚುನಾವಣಾ ಹೊಸ್ತಿಲಿನಲ್ಲಿ ಕೆಲವು ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಯೋಜನೆಗಳ ಪರ ಮತ್ತು ವಿರೋಧವಾಗಿ ಚರ್ಚೆಗಳನ್ನು ಹುಟ್ಟು ಹಾಕಿದೆ. ಇದನ್ನು ಸಾರಾಸಗಟಾಗಿ ಬೆಂಬಲಿಸುವ ಅಥವಾ ವಿರೋಧಿಸುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಮಹತ್ವದ ಅಂಶಗಳು…….
ಮೊದಲಿಗೆ ಉಚಿತವಾಗಿ ನೀಡುತ್ತೇವೆ ಎಂದು ಹೇಳುವ ಯೋಜನೆಗಳ ಬಗ್ಗೆ ನೋಡುವುದಾದರೆ ಮುಖ್ಯವಾಗಿ, ಒಂದಷ್ಟು ಆಹಾರ ಪದಾರ್ಥಗಳು, ಶೈಕ್ಷಣಿಕವಾಗಿ ಉಚಿತ ಬಟ್ಟೆ, ಸೈಕಲ್, ಲ್ಯಾಪ್‌ಟಾಪ್ ಇತ್ಯಾದಿ, ಒಂದಷ್ಟು ನೀರು, ವಿದ್ಯುತ್, ಸಾರಿಗೆ, ಗ್ಯಾಸ್ ಮುಂತಾದವು ಹೀಗೆ ಜೀವನಾವಶ್ಯಕ ವಸ್ತುಗಳನ್ನು ಅಧಿಕಾರಕ್ಕೆ ಬಂದರೆ ಬಡವರಿಗೆ ನೀಡುವುದಾಗಿ ಭರವಸೆ ನೀಡುತ್ತಾರೆ ಮತ್ತು ಅಧಿಕಾರಕ್ಕೆ ಬಂದರೆ ನೆರವೇರಿಸುವ ಸಾಧ್ಯತೆಯೂ ಇದೆ….
ಈ ರೀತಿ ಉಚಿತ ಸೇವೆಗಳನ್ನು ನೀಡುವ ಮೂಲಕ ಜನರನ್ನು ಸೋಮಾರಿಗಳನ್ನಾಗಿ ಮಾಡಲಾಗುತ್ತದೆ ಮತ್ತು ಆರ್ಥಿಕ ದುಸ್ಥಿತಿ ಉಂಟಾಗಿ ಭವಿಷ್ಯದಲ್ಲಿ ದಿವಾಳಿತನದತ್ತ ಸಾಗಬಹುದು ಎಂಬ ಆತಂಕವನ್ನು ಸಹ ವ್ಯಕ್ತಪಡಿಸಲಾಗುತ್ತದೆ…
ಹಾಗೆಯೇ ಈ ದೇಶದ ಸಾಮಾಜಿಕ ವ್ಯವಸ್ಥೆ ಜಾತಿ ಆಧಾರಿತವಾಗಿ ನಿರ್ಮಾಣವಾಗಿದೆ. ಅದರ ಪರಿಣಾಮವಾಗಿ ಆರ್ಥಿಕ ಅಸಮಾನತೆ ದೊಡ್ಡ ಪ್ರಮಾಣದ ಕಂದಕ ಸೃಷ್ಟಿಸಿದೆ. ಜಮೀನ್ದಾರಿ ಪದ್ಧತಿಯಲ್ಲಿ ಭೂ ಸಂಪತ್ತು ಕೆಲವೇ ಜನರ ಬಳಿ ಮತ್ತು ಜಾಗತೀಕರಣದ ನಂತರ ಕೆಲವೇ ಕಾರ್ಪೊರೇಟ್ ಸಂಸ್ಥೆಗಳ ಕೈಯಲ್ಲಿ ಸಂಪತ್ತು ಕೇಂದ್ರೀಕೃತವಾಗಿದೆ. ಈ ದೊಡ್ಡ ಕಂದಕವನ್ನು ಕನಿಷ್ಠ ಪ್ರಮಾಣದಲ್ಲಿಯಾದರೂ ಸರಿಪಡಿಸಲು ಜೀವನಾವಶ್ಯಕ ವಸ್ತುಗಳ ಉಚಿತ ಯೋಜನೆ ಅತ್ಯಂತ ಅವಶ್ಯಕ ಮತ್ತು ಅನಿವಾರ್ಯ ಎಂಬ ಮತ್ತೊಂದು ವಾದವೂ ಇದೆ…
ವಿಷಯವನ್ನು ಪೂರ್ವಾಗ್ರಹ ಪೀಡಿತರಾಗದೆ ಇಡೀ ದೇಶದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕು…..
ಜೀವನಾವಶ್ಯಕ ವಸ್ತುಗಳು ಬಡವರಿಗೆ ಉಚಿತವಾಗಿ ದೊರಕಿದಾಗ ಸ್ವಲ್ಪ ಮಟ್ಟಿಗೆ ಸೋಮಾರಿತನ ಬರಬಹುದಾದ ಸಾಧ್ಯತೆ ಇದ್ದರೂ ಅದಕ್ಕಿಂತ ಹೆಚ್ಚಾಗಿ ಸ್ವಾಭಿಮಾನ ಅವರಲ್ಲಿ ಜಾಗೃತವಾಗುತ್ತದೆ. ಅವರ ಶೋಷಣೆ ಕಡಿಮೆಯಾಗುತ್ತದೆ. ಅತ್ಯಂತ ಕಡಿಮೆ ಕೂಲಿ ಅಥವಾ ಸಂಬಳ ನೀಡಿ ಅವರನ್ನು ತಮ್ಮ ಅಡಿಯಾಳಾಗಿ ಮಾಡಿಕೊಳ್ಳುವುದು ನಿಲ್ಲುತ್ತದೆ. ತಮ್ಮ ಬೇಡಿಕೆಯ ಜೀವನಾವಶ್ಯಕ ವಸ್ತುಗಳು ಸಿಕ್ಕ ನಂತರ ಬದುಕಿನಲ್ಲಿ ಮತ್ತೊಂದು ದೊಡ್ಡ ಹೆಜ್ಜೆ ಇಡಲು ಕೆಲವರಾದರೂ ಪ್ರಯತ್ನಿಸುತ್ತಾರೆ.
ಇದಕ್ಕೆ ವಿರುದ್ಧವಾಗಿ ಬಹಳಷ್ಟು ಶ್ರೀಮಂತರ ಮಕ್ಕಳು ಮತ್ತು ಕುಟುಂಬದವರು ತಮ್ಮ ಬಳಿ ಇರುವ ಆಸ್ತಿ ಮತ್ತು ನಿರಂತರವಾಗಿ ಬೇರೆ ಬೇರೆ ಮೂಲಗಳಿಂದ ಹಣ ಬರುವ ಕಾರಣದಿಂದಾಗಿ ಯಾವುದೇ ಕೆಲಸ ಮಾಡದೆ ಸೋಮಾರಿಗಳಾಗಿರುವುದನ್ನು ಕಾಣುತ್ತೇವೆ. ಅಷ್ಟು ಮಾತ್ರವಲ್ಲದೆ ಇವರಿಗೆ ನಿಶ್ಚಿತ ಸುಲಭ ಆದಾಯ ಬರುವುದರಿಂದ ಸಮಾಜಕ್ಕೆ ಮಾರಕವಾದ ಚಟುವಟಿಕೆಗಳಲ್ಲಿ ಸಹ ತೊಡಗಿಕೊಂಡಿರುವುದನ್ನು ಗಮನಿಸಬಹುದು.
ತಮಗೆ ಇರುವ ಜಮೀನಿನಲ್ಲಿ ಮದುವೆ ಮಂಟಪ, ಅಪಾರ್ಟ್‌ಮೆಂಟ್, ಕಮರ್ಷಿಯಲ್ ಕಾಂಪ್ಲೆಕ್ಸ್, ಬಾಡಿಗೆ ಮನೆಗಳು, ಬಡ್ಡಿ ವ್ಯವಹಾರ ಮುಂತಾದ ಆದಾಯಗಳನ್ನು ಮಾಡಿಕೊಂಡು ಯಾವುದೇ ಕೆಲಸ ಮಾಡದೇ ಸೋಮಾರಿಗಳಾಗುವುದು ಮತ್ತು ಕೆಲವರು ಈ ಹಣವನ್ನೇ ಉಪಯೋಗಿಸಿಕೊಂಡು ರಾಜಕೀಯ ಪ್ರವೇಶಿಸಿ ಚುನಾವಣಾ ವ್ಯವಸ್ಥೆಯನ್ನೇ ಭ್ರಷ್ಟ ಗೊಳಿಸುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ.
ಈ ಎರಡರಲ್ಲಿ ಸ್ವಲ್ಪ ವ್ಯತ್ಯಾಸ ಇರುವುದು ನಿಜ. ಮೊದಲನೆಯದರಲ್ಲಿ ಸರ್ಕಾರವೇ ಉಚಿತವಾಗಿ ಜೀವನಾವಶ್ಯಕ ವಸ್ತುಗಳನ್ನು ನೀಡುವುದು, ಎರಡನೆಯದರಲ್ಲಿ ಪರೋಕ್ಷವಾಗಿ ವ್ಯವಸ್ಥೆಯೇ ಉಚಿತವಾಗಿ ಶ್ರೀಮಂತಿಕೆ ಸಿಗುವಂತೆ ಸೃಷ್ಟಿಯಾಗಿರುವುದು.
ಹೀಗೆ ಅನೇಕ ವೈರುಧ್ಯಮಯ ವಾದ ಸರಣಿಗಳನ್ನು ಇದು ಒಳಗೊಂಡಿದೆ. ಆದರೆ ಮಾನವೀಯತೆಯ ದೃಷ್ಟಿಯಿಂದ, ಸಾಮಾಜಿಕ ನ್ಯಾಯದ ಹಿತಾಸಕ್ತಿಯಿಂದ, ದುರ್ಬಲ ವರ್ಗಗಳನ್ನು ಮೇಲ್ದರ್ಜೆಗೆ ಏರಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಬೇಕು. ಕೇವಲ ಈ ಕ್ಷಣದ ಲಾಭ ನಷ್ಟಗಳು ಅಥವಾ ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತೀರ್ಮಾನ ಕೈಗೊಳ್ಳಬಾರದು….
ಅವಶ್ಯಕತೆ ಇರುವವರಿಗೆ ಸರ್ಕಾರಗಳು ಉಚಿತವಾಗಿ ನೀಡುವುದರಲ್ಲಿ ತಪ್ಪಿಲ್ಲ. ಆದರೆ ಅವಶ್ಯಕತೆ ಇಲ್ಲದವರು ಅದನ್ನು ತಿರಸ್ಕರಿಸದೆ ನಮಗೂ ಇರಲಿ ಎಂದು ಸ್ವೀಕರಿಸುವುದು ಸ್ವಾರ್ಥ, ಕೆಟ್ಟತನ ಮತ್ತು ಪರೋಕ್ಷ ಅಪರಾಧ ಹಾಗು ವಂಚನೆ. ಉದಾಹರಣೆಗೆ ಸರ್ಕಾರ ಬಡವರಿಗೆ 10 ಕೆಜಿ ಗೋದಿ ಅಥವಾ ಅಕ್ಕಿ ನೀಡುತ್ತದೆ. ಕಡು ಬಡವರು ಅದನ್ನು ಉಪಯೋಗಿಸಿಕೊಳ್ಳಲಿ. ಆದರೆ ಉಚಿತ ಎಂಬ ಕಾರಣದಿಂದ ಮಧ್ಯಮ ವರ್ಗದವರು ಸಹ ಅದನ್ನು ಪಡೆದು ದುರುಪಯೋಗ ಪಡಿಸಿಕೊಳ್ಳುವುದು ತಪ್ಪಲ್ಲವೇ. ಶಾಲಾ ಮಕ್ಕಳಿಗೆ ಉಚಿತ ಯೂನಿಫಾರ್ಮ್ ಕೊಟ್ಟರೆ ಅದರ ಅವಶ್ಯಕತೆ ಇಲ್ಲದವರು ಸಹ ಅದನ್ನು ಪಡೆದು ಮನೆಯ ನೆಲ ಸ್ವಚ್ಛ ಗೊಳಿಸಲು ಉಪಯೋಗಿಸುತ್ತಾರೆಯೇ ಹೊರತು ನಿರಾಕರಿಸುವುದಿಲ್ಲ.
ಅಂದರೆ ಒಳ್ಳೆಯ ಯೋಜನೆಗಳನ್ನು ಅದರ ಮೂಲ ಆಶಯಕ್ಕೆ ಅನುಗುಣವಾಗಿ ಜಾರಿಯಾಗಲು ಬಿಡದೆ ದುರುಪಯೋಗ ಮಾಡಿಕೊಂಡು ಇಡೀ ಯೋಜನೆಯನ್ನೇ ರದ್ದುಪಡಿಸುವಂತೆ ಒತ್ತಾಯಿಸುವುದು ಮತ್ತು ಸಾಮಾಜಿಕ ಕಂದಕ ಹಾಗೇ ಉಳಿಯುವಂತೆ ಮಾಡುವುದು ನಮ್ಮೆಲ್ಲರ ವೈಯಕ್ತಿಕ ಅಜ಼್ಞಾನ ಮತ್ತು ಸ್ವಾರ್ಥ.
ಆದ್ದರಿಂದ ನಮ್ಮದೇ ದೇಶದ, ನಮ್ಮದೇ ಜನರಿಗೆ ಸಿಗಬೇಕಾದ ಜೀವನಾವಶ್ಯಕ ವಸ್ತುಗಳನ್ನು ಸರ್ಕಾರಗಳು ಉಚಿತವಾಗಿ ನೀಡುವುದು ಅವುಗಳ ಕರ್ತವ್ಯ. ಆದರೆ ಅದನ್ನು ಅವಶ್ಯಕತೆ ಇಲ್ಲದವರು ಸಹ ನಾಚಿಕೆ, ಮಾನ, ಮರ್ಯಾದೆ ಜವಾಬ್ದಾರಿ ಇಲ್ಲದೇ ಪಡೆದುಕೊಳ್ಳುವುದು ಮೋಸ ವಂಚನೆ…….
ಹಾಗೆಯೇ ಇದು ಚುನಾವಣಾ ಸಂದರ್ಭದ ಮತಗಳಿಕೆಯ ಗಿಮಿಕ್ ಆಗಬಾರದು. ಇದೊಂದು ಎಲ್ಲರೂ ನಿರ್ವಹಿಸಬೇಕಾದ ಸಾಮಾಜಿಕ ಜವಾಬ್ದಾರಿ.
ಕೊನೆಯದಾಗಿ,
ಒಮ್ಮೆ ಸುಪ್ರೀಂ ಕೋರ್ಟ್ ಯಾವುದೇ ವಯಸ್ಕ ಗಂಡು ಹೆಣ್ಣಿನ, ಯಾವುದೇ ರೀತಿಯ ಸಂಬಂಧ ಅಪರಾಧವಲ್ಲ ಎಂದು ತೀರ್ಪು ನೀಡಿದೆ. ಅದರ ಅರ್ಥ ಅನೈತಿಕ ಸಂಬಂಧಗಳನ್ನು ಬೆಳೆಸಿ ಎಂದಲ್ಲ. ಹಾಗೆಯೇ ಉಚಿತ ಯೋಜನೆ ಎಂದರೆ ಎಲ್ಲರೂ ಅದನ್ನು ಸ್ವೀಕರಿಸಬೇಕು ಎಂಬುದು ಕಡ್ಡಾಯವಲ್ಲ. ಅವಶ್ಯಕತೆ ಇಲ್ಲದವರು ಅದನ್ನು ನಿರಾಕರಿಸಿ ಸ್ವಾಭಿಮಾನ ಮೆರೆಯುವ ಅವಕಾಶವೂ ಇದೆ. ಆ ಮುಖಾಂತರ ಸಾಮಾಜಿಕ ಜವಾಬ್ದಾರಿ ನಿರ್ವಹಿಸಬಹುದು ಮತ್ತು ಆರ್ಥಿಕ ಒತ್ತಡ ತಡೆಯಬಹುದು. ಆಯ್ಕೆ ನಮ್ಮ ಮುಂದಿದೆ………
ಇದರಲ್ಲಿ ಇನ್ನೂ ಸಾಕಷ್ಟು ವಿಷಯಗಳು ಚರ್ಚೆಗೆ ಉಳಿದಿವೆ……..
ಕರ್ನಾಟಕದ ವಿಷಯದಲ್ಲಿ…..
{ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂದರ್ಭದಲ್ಲಿ ಬರೆದ ಲೇಖನ 2023….)
ಮಾನ್ಯ ಮುಖ್ಯಮಂತ್ರಿಗಳೇ,
ನಿಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೀಗೆ ಆಯ್ಕೆ ನೀಡಿ ಜಾರಿ ಮಾಡಬಹುದೇ ಒಮ್ಮೆ ಯೋಚಿಸಿ……
ಉಚಿತ ಯೋಜನೆಗಳ ಬಗ್ಗೆ ವ್ಯಂಗ್ಯ ಅಥವಾ ಅಸೂಯೆ ಬೇಡ. ಸಹಾನುಭೂತಿ ಇರಲಿ. ಆದರೆ………….
ಇದೊಂದು ಸಂಕೀರ್ಣ ವಿಷಯ. ಹೆಚ್ಚು ಕಡಿಮೆ ಎಷ್ಟು ಜನ ಉಚಿತ ಕೊಡುಗೆಗಳನ್ನು ಬೆಂಬಲಿಸುತ್ತಾರೋ ಅಷ್ಟೇ ಜನ ಅದನ್ನು ವಿರೋಧಿಸುತ್ತಾರೆ ಸಹ. ಕರ್ನಾಟಕದ ಅಸಮಾನತೆಯ ಸಮಾಜದಲ್ಲಿ ಇದನ್ನು ಸ್ವಲ್ಪ ಆಳವಾಗಿ ಎಲ್ಲಾ ಕೋನಗಳಿಂದ ಯೋಚಿಸಿ ಅಭಿಪ್ರಾಯ ರೂಪಿಸಿಕೊಳ್ಳಬೇಕು…….
ತೆರಿಗೆ ಹಣವನ್ನು ವಿವೇಚನೆ ಇಲ್ಲದೇ ಬಳಸಿ ದುರುಪಯೋಗ ಮಾಡುವುದು ಮತ್ತು ಜನರನ್ನು ಸೋಮಾರಿಯಾಗಿ ಮಾಡುವ ಕಾರಣದಿಂದ ಉಚಿತ ಯೋಜನೆಗಳನ್ನು ಮುಖ್ಯವಾಗಿ ವಿರೋಧಿಸಲಾಗುತ್ತದೆ ಎಂಬ ಒಂದು ವಾದ ಮತ್ತು ಸಂಪತ್ತಿನ ಅಸಮಾನ ಹಂಚಿಕೆಯ ಕಾರಣ ಇನ್ನೂ ಬಹಳಷ್ಟು ಜನ ಬಡತನದಲ್ಲಿಯೇ ಇರುವುದರಿಂದ ಅವರಿಗೆ ಸರ್ಕಾರದ ಬೆಂಬಲದ ಅವಶ್ಯಕತೆ ಇದೆ. ಜೊತೆಗೆ ಇದು ಭಿಕ್ಷೆಯಲ್ಲ ಒಂದು ಸಾಮಾಜಿಕ ನ್ಯಾಯ ಮತ್ತು ಜವಾಬ್ದಾರಿ ಎಂಬ ಇನ್ನೊಂದು ವಾದ……
ಎರಡು ಅತಿರೇಕಗಳ ನಡುವೆ ಸಮನ್ವಯದ ಹಾದಿಯೂ ಇರುತ್ತದೆ. ಅದೆಂದರೆ ಅವಶ್ಯಕತೆ ಇರುವವರಿಗೆ ಉಚಿತ ಯೋಜನೆಗಳು ದೊರೆಯಲೂ ಬೇಕು. ಹಾಗೆಯೇ ಅದರ ದುರುಪಯೋಗವನ್ನೂ ತಡೆಯಬೇಕು…..
ಅದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಒಂದು ಮನವಿ…….
ಆಯ್ಕೆ –
1) ” ನಾನು ಅತ್ಯಂತ ಕಡು ಬಡವ. ನಿಮ್ಮ ಎಲ್ಲಾ ಉಚಿತ ಯೋಜನೆಗಳು ನನಗೆ ಅವಶ್ಯಕತೆ ಇದೆ. ಆದ್ದರಿಂದ ನನಗೆ ಈ ಸರ್ಕಾರ ಘೋಷಿಸಿರುವ ಎಲ್ಲಾ ಗ್ಯಾರಂಟಿಗಳಿಗೆ ನಾನು ಅರ್ಹ. ನನಗೆ ಗ್ಯಾರಂಟಿ ಕಾರ್ಡ್ ನೀಡಿ. ಮುಂದೆ ನನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ ನಾನು ಇದನ್ನು ತಿರಸ್ಕರಿಸುವೆನು ……”
ಆಯ್ಕೆ –
2) ” ನಾನು ಈಗಿನ ಪರಿಸ್ಥಿತಿಯಲ್ಲಿ ಸ್ವಲ್ಪ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿ ಇದ್ದೇನೆ. ನನಗೆ ಈಗ ಘೋಷಿಸಿರುವ ಯಾವ ಉಚಿತ ಯೋಜನೆಗಳ ಅವಶ್ಯಕತೆ ಇಲ್ಲ. ಮುಂದೆ ಅವಶ್ಯಕತೆ ಬಂದರೆ ಅದರ ಉಪಯೋಗ ಪಡೆಯುವೆ. ಅಲ್ಲಿಯವರೆಗೂ ನನಗೆ ಗ್ಯಾರಂಟಿ ಕಾರ್ಡ್ ಅವಶ್ಯಕತೆ ಇಲ್ಲ….”
ರೇಷನ್ ಅಂಗಡಿಗಳಲ್ಲಿ ಅವಶ್ಯಕತೆ ಇರುವವರಿಗೆ ಒಂದು ಡಿಜಿಟಲ್ ಕಾರ್ಡ್ ನೀಡಿ ಯೋಜನೆಯನ್ನು ಜಾರಿ ಮಾಡಬಹುದು.
ಹೀಗೆ ಎಲ್ಲರಿಗೂ ಒಂದು ಅವಕಾಶ ನೀಡಬೇಕು. ಇದು ಸ್ವ ಇಚ್ಛೆಯಿಂದ ಮಾಡುವ ಘೋಷಣೆ. ಯಾವುದೇ ಒತ್ತಾಯ ಇರುವುದಿಲ್ಲ. ಜನರ ಆತ್ಮಸಾಕ್ಷಿಗೆ ಒಂದು ಕರೆ. ಏಕೆಂದರೆ ಏನೇ ಷರತ್ತುಗಳು ವಿಧಿಸಿದರು ಅವಶ್ಯಕತೆ ಇರುವವರು ಮತ್ತು ಇಲ್ಲದವರು ಎಂಬ ಎರಡು ವಿಭಾಗ ಇರುವುದು ಕಟು ವಾಸ್ತವ.
ಸಾಮಾನ್ಯವಾಗಿ ನಾನು ಕಂಡಂತೆ ಶ್ರೀಮಂತ ಮತ್ತು ಮಧ್ಯಮ ವರ್ಗದ ಬಹುತೇಕರು ರೇಷನ್ ಅಂಗಡಿಯ ಅಕ್ಕಿ ಮತ್ತು ಇತರ ಪದಾರ್ಥಗಳನ್ನು ಉಪಯೋಗಿಸುವುದಿಲ್ಲ. ಅಸಲಿಗೆ ತೆಗೆದುಕೊಳ್ಳುವುದೇ ಇಲ್ಲ ಅಥವಾ ಸಣ್ಣ ಹೋಟೆಲ್‌ಗಳಿಗೆ ಮಾರುತ್ತಾರೆ ಅಥವಾ ತಮ್ಮ ಕೆಲಸದವರಿಗೆ ಕೊಡುತ್ತಾರೆ ಅಥವಾ ಸಾಕು ಪ್ರಾಣಿಗಳಿಗೆ ಆಹಾರವಾಗಿ ಬಳಸುತ್ತಾರೆ. ಅಂತಹವರು ಈ ಯೋಜನೆ ಬಿಟ್ಟು ಕೊಡಬಹುದು. ಅವಶ್ಯಕತೆ ಇರುವವರು ಖಂಡಿತ ಉಪಯೋಗಿಸಲಿ.
ಅನೇಕ ಮನೆಯ ಕಡು ಬಡವ ಗೃಹಿಣಿಯರಿಗೆ 2000 ಒಂದು ದೊಡ್ಡ ಮೊತ್ತ ಮತ್ತು ಜೀವನ ಭದ್ರತೆ ಮತ್ತು ಸ್ವಾಭಿಮಾನದ ರಕ್ಷಾ ಕವಚವೂ ಹೌದು. ಹಾಗೆಯೇ ಬಹಳಷ್ಟು ಕುಟುಂಬದವರಿಗೆ 2000 ಅತ್ಯಂತ ಚಿಲ್ಲರೆ ಹಣ. ಉದ್ಯಮಿಗಳು, ಸರ್ಕಾರಿ ನೌಕರರು, ದೊಡ್ಡ ಕಂಪನಿಯ ಖಾಸಗಿ ಉದ್ಯೋಗಿಗಳು, ದೊಡ್ಡ ವ್ಯಾಪಾರಿಗಳು, ಮನೆಗಳನ್ನು ಬಾಡಿಗೆ ಕೊಟ್ಟಿರುವವರು ಮುಂತಾದವರು ಸ್ವ ಇಚ್ಛೆಯಿಂದ ಗೃಹಿಣಿಯರಿಗೆ ಕೊಡುವ 2000 ಮಾಸಿಕ ಭತ್ಯೆ ತಿರಸ್ಕರಿಸುವುದು.
ಅನೇಕ ಯುವಕರಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲೇ ಹಣದ ಕೊರತೆ ಇರುತ್ತದೆ. ಅಂತಹವರು ನಿರುದ್ಯೋಗ ಭತ್ಯೆ ಪಡೆಯಲಿ. ಉಳಿದಿರುವ ಅಷ್ಟು ಸಣ್ಣ ತಾತ್ಕಾಲಿಕ ನೆರವನ್ನು ತಿರಸ್ಕರಿಸಿ ಸ್ವಾಭಿಮಾನ ಮೆರೆಯಲಿ ಮತ್ತು ದೇಶ ಕಟ್ಟುವಲ್ಲಿ ಸಹಕರಿಸಲಿ…..
ಸಾಮಾನ್ಯವಾಗಿ ಒಂದೆರಡು ವಿದ್ಯುತ್ ಬಲ್ಬ್ ಮತ್ತು ಟಿವಿ ಉಪಯೋಗಿಸುವ ಕಡು ಬಡವರು ಮಾತ್ರ 200 ಯೂನಿಟ್ ಒಳಗೆ ವಿದ್ಯುತ್ ಉಪಯೋಗಿಸಬಹುದು. ಫ್ಯಾನ್, ಫ್ರಿಟ್ಜ್, ಮಿಕ್ಸಿ, ವಾಷಿಂಗ್ ಮಿಷನ್, ಮೊಬೈಲ್ ಚಾರ್ಜಿಂಗ್ ಮುಂತಾದವುಗಳನ್ನು ಉಪಯೋಗಿಸುವವರು 200 ಯೂನಿಟ್ ಗಿಂತ ಹೆಚ್ಚೇ ಉಪಯೋಗಿಸುತ್ತಾರೆ. ಆದ್ದರಿಂದ ಈ ಯೋಜನೆ ಸಹಜವಾಗಿ ಬಡವರಿಗೆ ಮಾತ್ರ ಅನುಕೂಲ ಆಗುತ್ತದೆ. ಉಳಿದವರ ಬಿಲ್ ಎಂದಿನಂತೆ ಇರುತ್ತದೆ.
ಹಾಗೆಯೇ ಸರ್ಕಾರಿ ಬಸ್ಸುಗಳಲ್ಲಿ ಓಡಾಡುವವರು ಬಡವರು, ದಿನಗೂಲಿ ನೌಕರರು, ಗಾರ್ಮೆಂಟ್ಸ್ ಉದ್ಯೋಗಿಗಳು, ಚಿಲ್ಲರೆ ಅಂಗಡಿ, ಹಣ್ಣು ಮತ್ತು ತರಕಾರಿ ಮಾರುವವರೇ ಹೆಚ್ಚಾಗಿರುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಕಡಿಮೆಯೇ. ಮಧ್ಯಮ ವರ್ಗದವರು ಕಾರು ಮತ್ತು ದ್ವಿಚಕ್ರ ವಾಹನ ಬಳಸುತ್ತಾರೆ. ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳು ಸುಮ್ಮನೆ ಹೊರಗಡೆ ತಿರುಗಾಡುವುದು ಕಡಿಮೆಯೇ. ಉಚಿತವಾದಾಗ ಸ್ವಲ್ಪ ಹೆಚ್ಚು ದೇವ ಮಂದಿರಗಳಿಗೆ ಹೋಗಬಹುದು. ಅದರಿಂದ ಅಂತಹ ಹೆಚ್ಚಿನ ನಷ್ಟ ಇಲ್ಲ.
ಇನ್ನು ಸೋಮಾರಿಗಳಾಗುತ್ತಾರೆ ಎಂಬುದು ಸಂಪೂರ್ಣ ವಾಸ್ತವವಲ್ಲ. ತಾತ್ಕಾಲಿಕವಾಗಿ ಸ್ವಲ್ಪ ಮಟ್ಟಿಗೆ ನಿಜವಿದ್ದರೂ ಬೇಡಿಕೆಯ ಕಾರಣದಿಂದ ಕೃಷಿ ಕೆಲಸದ ಕೂಲಿ ಹೆಚ್ಚಾಗಿ ಅವರ ಜೀವನಮಟ್ಟ ಉತ್ತಮವಾಗಬಹುದು. ಅನೇಕ ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರು ಹಾಗು ಸಾಪ್ಟ್ ವೇರ್ ಉದ್ಯೋಗಿಗಳ ಕೆಲಸ ಮತ್ತು ಸಂಬಳ ನೋಡಿದಾಗ ನಿಜಕ್ಕೂ ಅತ್ಯಂತ ಶ್ರಮದಾಯಕ ಕೂಲಿಗಳ ಸಂಬಳ ಹೆಚ್ಷಾದರೆ ಉತ್ತಮ. ಅದಕ್ಕೆ ಪೂರಕವಾಗಿ ರೈತರ ಆದಾಯವೂ ಹೆಚ್ಚಾಗಬೇಕಾಗುತ್ತದೆ.
ಏನೇ ಆಗಲಿ ಎಲ್ಲವೂ ಒಂದಕ್ಕೊಂದು ಪೂರಕ ಮತ್ತು ಬೆಸೆದು ಕೊಂಡಿದೆ. ಇದು ಒಂದು ರೀತಿಯ ಚಕ್ರ. ಅತಿಯಾದ ಉಚಿತಗಳ ಬಗ್ಗೆ ಎಚ್ಚರವಿರಲಿ ಹಾಗೆಯೇ ನಮ್ಮದೇ ಕಡು ಬಡವರ ಬಗ್ಗೆ ಅಸೂಯೆ ಪಟ್ಟು ಈ ಸಮಾಜವನ್ನು ಇನ್ನೂ ಒಡೆಯಬೇಡಿ. ಅನಾವಶ್ಯಕವಾಗಿ ಯೋಜನೆಯನ್ನು ವಿರೋಧಿಸುವ ಬದಲು ಸ್ವಾಭಿಮಾನದಿಂದ ಗ್ಯಾರಂಟಿಗಳನ್ನು ತಿರಸ್ಕರಿಸಿ ಬಡವರ ಬಗ್ಗೆ ಅನುಕಂಪ ತೋರಿಸಿ. ಹಾಗೆಯೇ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಅನೇಕ ದುಂದು ವೆಚ್ಚ ಕಡಿಮೆ ಮಾಡಿದರೆ ಈ ಯೋಜನೆಗಳು ಆರ್ಥಿಕ ಹೊರೆಯಾಗುವುದಿಲ್ಲ.
ಅನೇಕ ಶ್ರೀಮಂತರು ಸರ್ಕಾರದಿಂದ ಪಡೆಯುವ ಬೃಹತ್ ಮೊತ್ತದ ಪ್ರತ್ಯಕ್ಷ ಮತ್ತು ಪರೋಕ್ಷ ಸಹಾಯಗಳ ನಡುವೆ ಬಡವರಿಗೆ ತಲುಪುವ ಉಚಿತ ಯೋಜನೆಗಳ ಮೊತ್ತ ಕಡಿಮೆಯೇ ಮತ್ತು ಸರ್ಕಾರ ಕಾರ್ಯನಿರ್ವಹಿಸಬೇಕಾಗಿರುವುದೇ ಬಡವರ ಪರವಾಗಿ ಎಂದು ನೆನಪಿಸುತ್ತಾ……
ಶೋಷಿತರ ಪರವಾಗಿ ಸದಾ ಆಲೋಚಿಸಿ ಕಾರ್ಯೋನ್ಮುಖವಾಗುವುದು ಸಹ ಮಾನವೀಯ ಮೌಲ್ಯವೇ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
