ಕೋವಿಡ್ ನಂತರ ಜಾಗತಿಕ ವಾತಾವರಣವನ್ನು ಗಮನಿಸಿದರೆ ಇಡೀ ವಿಶ್ವ ಹೆಚ್ಚು ಹಿಂಸಾತ್ಮಕ ಮಾನಸಿಕ ಸ್ಥಿತಿಯನ್ನು ಅಳವಡಿಸಿಕೊಳ್ಳುತ್ತಿರಬೇಕು ಎನಿಸುತ್ತಿದೆ. ವಿಶ್ವಮಟ್ಟದಲ್ಲಿ ಹೇಗಾದರೂ ಆಗಲಿ ಭಾರತ ಮಾತ್ರ ಮೌಲ್ಯಯುತವಾಗಿ ಮುನ್ನಡೆಯುತ್ತಿತ್ತು. ಆದರೆ ಕಳೆದ ಐದಾರು ವರ್ಷಗಳಿಂದ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಎಲ್ಲಿ ನೋಡಿದರಲ್ಲಿ ಹಿಂಸೆ ತನ್ನ ವಿರಾಟ್ ರೂಪ ಪ್ರದರ್ಶಿಸುತ್ತಿದೆ.
ಮೊದಲು ಎಲ್ಲೋ ಅಪರೂಪವಾಗುತ್ತಿದ್ದ ಜಗಳ, ಕೊಲೆ, ಗಲಭೆಗಳು ಈಗ ಎಲ್ಲೆಂದರಲ್ಲಿ ವ್ಯಾಪಿಸಿದೆ. ಮೊದಲು ಹೊಡೆದಾಟಗಳು ಶತ್ರುಗಳ ನಡುವೆ, ವೈರಿಗಳ ನಡುವೆ ನಡೆಯುತ್ತಿತ್ತು. ಅದಕ್ಕೂ ಬಲವಾದ ಕಾರಣಗಳಿರುತ್ತಿದ್ದವು. ಆದರೆ ಈಗ ಅಂತಹ ಪ್ರಬಲ ಕಾರಣಗಳೇ ಇಲ್ಲದೆ ರಕ್ತ ಸಂಬಂಧಿಗಳು, ಕೌಟುಂಬಿಕ ಸಂಬಂಧಿಗಳು, ತೀರಾ ಆತ್ಮೀಯ ಸ್ನೇಹಿತರು, ಒಳ್ಳೆಯ ಪಾಲುದಾರರು ಇವರುಗಳ ನಡುವೆಯೇ ಗಂಭೀರ ಭಿನ್ನಾಭಿಪ್ರಾಯಗಳು ತಲೆದೋರಿ ಅವು ಹಿಂಸಾತ್ಮಕ ರೂಪ ಪಡೆಯುತ್ತಿದೆ. ಇದೇ ಹೆಚ್ಚು ಆತಂಕಕಾರಿಯಾಗಿರುವುದು.
ಆ ಹಿಂಸೆಗಳು ಸಹ ಭೀಕರವಾಗಿ ಕಾಣುತ್ತಿವೆ. ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಂತೆ, ಮನುಷ್ಯತ್ವದ ಯಾವ ಲಕ್ಷಣಗಳು ಇಲ್ಲದ ಪಶು ಸದೃಶವಾಗಿ ಕೊಲೆಗಳಾಗುತ್ತಿರುವುದು ತೀರಾ ಆಘಾತಕಾರಿ. ಕೆಲವಾರು ಅಪ್ಪ ಮಕ್ಕಳು, ಅಣ್ಣ ತಮ್ಮಂದಿರು, ಅಕ್ಕತಂಗಿಯರು, ಗಂಡ ಹೆಂಡತಿ ಒಬ್ಬರಿಗೊಬ್ಬರು ಕೊಂದುಕೊಳ್ಳುತ್ತಿದ್ದಾರೆ. ಎಲ್ಲಿಂದ ಎಲ್ಲಿಗೆ ತಲುಪುತ್ತಿದ್ದೇವೆ ನಾವು. ಯುಗಾಂತ್ಯದ ಅವಸಾನದ ಲಕ್ಷಣಗಳು ಈಗಾಗಲೇ ಪ್ರಾರಂಭವಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ.
ಸಾವುಗಳು ಸಹಜವಾಗುತ್ತಾ,
ಸಂವೇದನೆಗಳು ಸರ್ವನಾಶವಾಗುತ್ತಾ,
ಭಾವನೆಗಳು ಬರಿದಾಗುತ್ತಾ,
ಮಾತುಗಳು ಕೃತಕವಾಗುತ್ತಾ,
ಅಕ್ಷರಗಳು ಅಸಹನೀಯವಾಗುತ್ತಾ,
ಮನಸುಗಳು ಮಲಿನವಾಗುತ್ತಾ,
ಸಂಬಂಧಗಳು ಶಿಥಿಲವಾಗುತ್ತಾ,
ಮೌಲ್ಯಗಳು ಮಸುಕಾಗುತ್ತಾ,
ಆಡಳಿತ ಅರಾಜಕತೆಯಾಗುತ್ತಾ,
ಬದುಕು ಬರಡಾಗುತ್ತಾ,
ಸಮಾಜ ಅಸ್ತವ್ಯಸ್ಥವಾಗುತ್ತಾ,
ಪರಿಸರ ಕಲ್ಮಶವಾಗುತ್ತಾ,
ವಿದ್ಯೆ ವ್ಯಾಪಾರವಾಗುತ್ತಾ,
ವಿವೇಚನೆ ವಿಕಾರವಾಗುತ್ತಾ,
ಆರೋಗ್ಯ ಅನಾರೋಗ್ಯವಾಗುತ್ತಾ,
ಗಂಡನ್ನು ಅನುಮಾನಿಸುತ್ತಾ,
ಹೆಣ್ಣನ್ನು ಅವಮಾನಿಸುತ್ತಾ,
ಹಣವನ್ನು ಪೂಜಿಸುತ್ತಾ,
ಅಧಿಕಾರವನ್ನು ಆರಾಧಿಸುತ್ತಾ,
ಭ್ರಮೆಗಳನ್ನು ಸೃಷ್ಟಿಸುತ್ತಾ,
ಅಮಾಯಕರನ್ನು ಶೋಷಿಸುತ್ತಾ,
ಅಸಹಾಯಕರನ್ನು ವಂಚಿಸುತ್ತಾ,
ಭ್ರಷ್ಟರನ್ನು ಚುನಾಯಿಸುತ್ತಾ,
ವಿಧಿಯನ್ನು ಅಳಿಯುತ್ತಾ,
ಕಾಣದ ಶಕ್ತಿಯನ್ನು ನಂಬುತ್ತಾ,
ಆತ್ಮ ಶಕ್ತಿಯನ್ನು ನಿರ್ಲಕ್ಷಿಸುತ್ತಾ,
ಆತ್ಮವಂಚನೆಗೆ ಬಲಿಯಾಗುತ್ತಾ,
ಆಡಂಬರಕೆ ಆಕರ್ಷಿತವಾಗುತ್ತಾ,
ಪ್ರೀತಿಗೆ ಹಂಬಲಿಸುತ್ತಾ,
ದ್ವೇಷಕ್ಕೆ ಬಲಿಯಾಗುತ್ತಾ,
ಒಳ್ಳೆಯದನ್ನು ಹುಡುಕುತ್ತಾ,
ಕೆಟ್ಟದ್ದನ್ನು ಅನುಸರಿಸುತ್ತಾ,
ಮುನ್ನಡೆಯುತ್ತಿರುವುದೇ,
ಆಧುನಿಕ ನಾಗರಿಕ ಸಮಾಜ…….
ನಾವು – ನೀವು – ಅವರು – ಇವರು,
ಎಲ್ಲರೂ ಪಾತ್ರಧಾರಿಗಳು,
ನಿಜ ಸೂತ್ರಧಾರಿಗಳನ್ನು ಹುಡುಕುತ್ತಾ……
ಬದಲಾವಣೆ ಬಯಸುತ್ತಾ,…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
