IMG_20260220_135046.jpg
Spread the love

ಉಡುಪಿ: ದಿನಾಂಕ: 20-02-2026 (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕರು ಸರ್ಕಾರಕ್ಕೆ ಭರಿಸಲು ನೀಡಿದ ತೆರಿಗೆ ಹಣವನ್ನು ಸರ್ಕಾರಕ್ಕೆ ಕಟ್ಟದೆ ನಕಲಿ ಬ್ಯಾಂಕ್ ಮೊಹರನ್ನು ಒತ್ತಿ ಹಣವನ್ನು ಲಪಟಾಯಿಸಿರುವ ನಗರಸಭೆಯ ನೌಕರಳ ಮೇಲೆ ಪೌರಾಯುಕ್ತ ಮಹಾಂತೇಶ್ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಡುಪಿ ನಗರಸಭೆಯ ಪೌರಾಯುಕ್ತರಾಗಿ ಮಹಾಂತೇಶ್ ಅವರು ಕರ್ತವ್ಯವನ್ನು ನಿರ್ವಹಿಸಿಕೊಂಡಿದ್ದು, ದಿನಾಂಕ:  16/02/2026 ರಂದು ಆನಂದ ಸುವರ್ಣ ಎಂಬುವವರು ಉಡುಪಿ ನಗರ ಸಭೆಗೆ ಹೋಗಿ ಮಹಾಂತೇಶ್ ರನ್ನು ಭೇಟಿ ಆಗಿ ತಾವು ಅವರ ಆಸ್ತಿ ಕಲ್ಮಾಡಿಯಲ್ಲಿರುವ ಕಟ್ಟಡ ಕ್ಕೆ ಸಂಬಂದಪಟ್ಟಂತೆ 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ಒಟ್ಟು ರೂಪಾಯಿ 34,730/- ನ್ನು ಕಚೇರಿಯಲ್ಲಿ ಹೊರಗಡೆ ಕೆಲಸ ಮಾಡಿಕೊಂಡಿರುವ ಶಾಲಿನಿ ಎಂಬುವವರಿಗೆ ನೀಡಿದ್ದು, ಅದಕ್ಕೆ ಶಾಲಿನಿ ರವರು ದಿನಾಂಕ 16/10/2025 ರಂದು ತೆರಿಗೆ ಸ್ವೀಕೃತಿ ಆದ ಬಗ್ಗೆ ಸ್ವೀಕೃತಿಯನ್ನು ನೀಡಿರುತ್ತಾರೆ.

ಇತ್ತೀಚಿಗೆ ದಿನ ಪತ್ರಿಕೆಯಲ್ಲಿ ತೆರಿಗೆ ವಂಚನೆ ಮಾಡಿದವರ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ಓದಿದ್ದು, ಅದರಂತೆ ಆನಂದ ಸುವರ್ಣ ರವರು ಅವರ ಮಗಳಾದ ಅಶ್ವಿನಿ ರವರೊಂದಿಗೆ ಆಸ್ತಿ ತೆರಿಗೆ ಪೋರ್ಟಲ್ ನಲ್ಲಿ ತೆರಿಗೆ ಪಾವತಿಯಾದ ಬಗ್ಗೆ ತಪಾಸಣೆ ನಡೆಸಿದಾಗ ತೆರಿಗೆ ಪಾವತಿ ಆಗದೇ ಪೆಂಡಿಂಗ್ ಇರುವ ಬಗ್ಗೆ ತಿಳಿದು ಬಂದಿರುತ್ತದೆ ಎಂದು ತಿಳಿಸಿರುತ್ತಾರೆ.

ಪೌರಾಯುಕ್ತ ಮಹಾಂತೇಶ ರು ಕೂಡ ಆಸ್ತಿ ತೆರಿಗೆ ಪಾವತಿ ಮಾಡಿದ ಬಗ್ಗೆ ಆನ್ ಲೈನ್ ನಲ್ಲಿ ಚೆಕ್ ಮಾಡಿದಾಗ ಪೆಂಡಿಂಗ್ ಇರುವುದು ಕಂಡು ಬಂದಿರುತ್ತದೆ. ನಂತರ ಕಚೇರಿಯಲ್ಲಿ ಕೆಲಸವನ್ನು ಮಾಡಿಕೊಂಡಿರುವ ಶಾಲಿನಿ ಯನ್ನು ಕರೆದು ವಿಚಾರಿಸಿದಾಗ ಅವರು ಆನಂದ ಸುವರ್ಣ ಎಂಬುವವರಿಂದ ತೆರಿಗೆ ಹಣವನ್ನು ಪಡೆದಿರುವುದು ನಿಜ ಎಂದು ಒಪ್ಪಿಕೊಂಡಿದ್ದು, ಅವರ ತೆರಿಗೆ ಹಣವನ್ನು ಪುನಃ ಕಟ್ಟುವುದಾಗಿ ಹೇಳಿರುತ್ತಾಳೆ. ನಂತರ ಶಾಲಿನಿ ರವರು ದಿನಾಂಕ 16/02/2026 ರಂದು ಆನಂದ ಸುವರ್ಣ ರವರ ಹೆಸರಿನಲ್ಲಿ ಹೊಸ ಚಲನ್ ಜನರೇಟ್ ಮಾಡಿ ಒಟ್ಟು ರೂಪಾಯಿ 35,213/- ನ್ನು ಭರಿಸಿರುತ್ತಾರೆ.

ಶಾಲಿನಿ ರವರು ಆನಂದ ಸುವರ್ಣ ಎಂಬುವವರು ನೀಡಿದ ತೆರಿಗೆ ಹಣವನ್ನು ಸರ್ಕಾರಕ್ಕೆ ಕಟ್ಟದೇ ಚಲನ್ ನಲ್ಲಿ ಯೂನಿಯನ್ ಬ್ಯಾಂಕ್ ನ ಮೊಹರನ್ನು ಹಾಕಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಇನ್ನಿತರರೊಂದಿಗೆ ಸೇರಿ ಸರ್ಕಾರಕ್ಕೆ ವಂಚನೆ ಮಾಡಿದ್ದಾಳೆ ಎಂದು ಪೌರಾಯುಕ್ತ ಮಹಾಂತೇಶ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪೌರಾಯುಕ್ತರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 336(2), 336(3), 340(2), 318(4) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!