images-17.jpeg
Spread the love

” ಕರ್ನಾಟಕ ಸರ್ಕಾರಿ ನೌಕರರ ವಿರುದ್ಧದ ಹಿಂಸಾಚಾರ ಮತ್ತು ಸರ್ಕಾರಿ ಕಚೇರಿಗಳಲ್ಲಿ ಆಸ್ತಿ ಹಾನಿ ನಿಷೇಧ ಕಾಯ್ದೆ – 2026 ” ಕರಡು ಸಿದ್ಧಪಡಿಸಿದ ಸರ್ಕಾರ…..

ಹಾಗೆಯೇ ದ್ವೇಷ ಭಾಷಣ ವಿರುದ್ದದ ಮಸೂದೆಯೂ ರಾಜ್ಯಪಾಲರ ಸಹಿಗಾಗಿ ಕಾದಿದೆ…..

ಜೊತೆಗೆ ಇತ್ತೀಚೆಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರಮುಖವಾಗಿ
” ಕರ್ನಾಟಕ ರಾಷ್ಟ್ರ ಸಮಿತಿ ” ಪಕ್ಷದ ಕಾರ್ಯಕರ್ತರ ಪ್ರಶ್ನಿಸುವ ಅಧಿಕಾರವನ್ನೇ ಮೊಟಕುಗೊಳಿಸಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವ ಅಧಿಸೂಚನೆ ಹೊರಡಿಸಿರುವುದು ಮಾಧ್ಯಮಗಳಲ್ಲಿ ಪ್ರಚಾರವಾಯಿತು.

ಸಾಮಾನ್ಯವಾಗಿ ಸಾಂಪ್ರದಾಯಿಕ ಚಿಂತನೆಯ ಬಲಪಂಥೀಯ ಚಿಂತನೆಯ ಸರ್ಕಾರಗಳು ಈ ರೀತಿ ಜನರ ಮೇಲೆ ಪ್ರಭುತ್ವ ಸಾಧಿಸಿ ಅವರ ಪ್ರಶ್ನಿಸುವ ಅಧಿಕಾರವನ್ನು ಮೊಟಕುಗೊಳಿಸುವ ರೀತಿಯಲ್ಲಿ ವರ್ತಿಸುತ್ತದೆ. ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಅವರ ಮೇಲೆ ನಿಯಂತ್ರಣ ಹೊಂದಲು ಪ್ರಯತ್ನಿಸುತ್ತದೆ. ಸದ್ಯ ಕೇಂದ್ರದಲ್ಲಿ ಬಲಪಂಥೀಯ ಚಿಂತನೆಯ ಸರ್ಕಾರವೇ ಇದೆ.

ಆದರೆ ರಾಜ್ಯದಲ್ಲಿರುವ ಸಮಾಜವಾದಿ ಚಿಂತನೆಯ ಕಾಂಗ್ರೆಸ್ ಸರ್ಕಾರ ಈ ರೀತಿಯ ಜನರ ಪ್ರಶ್ನಿಸುವ ಅಧಿಕಾರವನ್ನೇ ಮೊಟಕುಗೊಳಿಸುವ, ನಿಯಂತ್ರಿಸುವ, ಪ್ರಜಾಪ್ರಭುತ್ವದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾಶಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿರುವುದು ನಿಜಕ್ಕೂ ಆಶ್ಚರ್ಯಕರ.

ಇದೇನಿದು ಸಮಾಜವಾದಿ ನಾಯಕರಾದ ಮಾನ್ಯ ಸಿದ್ದರಾಮಯ್ಯನವರೇ ಮತ್ತು ಸ್ವಲ್ಪಮಟ್ಟಿಗೆ ಸಾತ್ವಿಕ ಮನೋಭಾವದ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರೇ ನಿಮ್ಮ ಚಿಂತನೆಗೆ, ಯೋಗ್ಯತೆಗೆ ಇದು ಖಂಡಿತ ಒಳ್ಳೆಯ ನಡೆಯಲ್ಲ.

ಸರ್ಕಾರವನ್ನು, ವ್ಯವಸ್ಥೆಯನ್ನು ಸಾಮಾನ್ಯವಾಗಿ ಎಲ್ಲರೂ ಪ್ರಶ್ನಿಸುವುದಿಲ್ಲ, ಸಾಮಾನ್ಯ ಜನ ಪ್ರವಾಹದ ಜೊತೆಗೆ ಈಜುತ್ತಾ ಸಾಗುತ್ತಾರೆ. ಆದರೆ ಎಲ್ಲೋ ಕೆಲವರು ಮಾತ್ರ ಪ್ರವಾಹದ ವಿರುದ್ಧ ಈಜಲು ಮನಸ್ಸು ಮಾಡಿ ಸರ್ಕಾರವನ್ನು ಪ್ರಶ್ನಿಸುತ್ತಾರೆ. ಅಂತಹ ಕೆಲವು ಧ್ವನಿಗಳನ್ನೇ ಅಡಗಿಸಲು ಹೊರಟಿರುವುದು ನಾಚಿಕೆಗೇಡಿನ ವಿಷಯ.

ಸರ್ಕಾರಿ ಅಧಿಕಾರಿಗಳೇ ಆಗಿರಲಿ ಅಥವಾ ಬೇರೆ ಯಾರೇ ಆಗಿರಲಿ ವ್ಯಕ್ತಿ ಗೌರವವನ್ನು ಎಲ್ಲರೂ ಕೊಡಲೇಬೇಕು. ಯಾರನ್ನೂ ಅವಮಾನಿಸಬಾರದು, ಯಾರ ಮೇಲೆಯೂ ಹಲ್ಲೆ ಮಾಡಬಾರದು. ಅದು ಅಪರಾಧ. ಇದು ಈಗಾಗಲೇ ಸ್ಥಾಪಿತ ಕಾನೂನಿನಲ್ಲಿ ಇದೆ. ಆದರೆ ಅದನ್ನು ಹೊರತುಪಡಿಸಿ ವಿಶೇಷ ಕಾನೂನು ಅವಶ್ಯಕತೆ ಇದೆಯೇ ? ಯಾರ ಪರವಾಗಿ, ಯಾರ ವಿರುದ್ಧವಾಗಿ ಈ ಕಾನೂನನ್ನು ಮಾಡಿದ್ದೀರಿ ? ಜನರಿಗೆ ಪ್ರಶ್ನಿಸಲು, ಅಭಿಪ್ರಾಯ ವ್ಯಕ್ತಪಡಿಸಲು ಬಿಡಿ. ಅದನ್ನು ಮೀರಿ ಹಿಂಸಾತ್ಮಕವಾಗಿ ನಡೆದುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಿ .

ಇಡೀ ದೇಶದ ಆಡಳಿತ ವ್ಯವಸ್ಥೆಯ ಯೋಗ್ಯತೆಯನ್ನು ಅಳೆಯುವ ಒಂದು ಮಾಪನ ಇಲ್ಲಿದೆ ನೋಡಿ

ಭಾರತದ 10 ಅತ್ಯಂತ ಭ್ರಷ್ಟ ಇಲಾಖೆಗಳ ಪಟ್ಟಿ ಬಹಿರಂಗ.

ಈ ಪಟ್ಟಿಯು ಸಾರ್ವಜನಿಕ ದೂರುಗಳು, ಮಾಧ್ಯಮ ವರದಿಗಳು ಮತ್ತು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಮತ್ತು ಲೋಕಪಾಲ್/ಲೋಕಾಯುಕ್ತದಂತಹ ಸಂಸ್ಥೆಗಳ ವರದಿಗಳನ್ನು ಆಧರಿಸಿದೆ. ಭ್ರಷ್ಟ ಇಲಾಖೆಗಳ ಪಟ್ಟಿಯನ್ನು NCIB ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿಯೂ ಹಂಚಿಕೊಂಡಿದೆ.

  1. ಪೊಲೀಸ್ ಇಲಾಖೆ

ಪೊಲೀಸ್ ಇಲಾಖೆ ಮೊದಲ ಸ್ಥಾನದಲ್ಲಿದೆ. ಪೊಲೀಸ್ ಇಲಾಖೆಯು ಲಂಚ, ಸುಳ್ಳು ಪ್ರಕರಣಗಳು, FIR ಗಳನ್ನು ನೋಂದಾಯಿಸುವಲ್ಲಿ ವಿಫಲತೆ, ರಸ್ತೆಬದಿಯ ಚೆಕ್‌ಪೋಸ್ಟ್‌ಗಳ ಮೂಲಕ ಅಕ್ರಮ ಸುಲಿಗೆ, ನ್ಯಾಯಕ್ಕಾಗಿ ಬಲಿಪಶುಗಳಿಂದ ಹಣ ಸುಲಿಗೆ ಮತ್ತು ಭೂ ವಿವಾದಗಳಲ್ಲಿ ಪಕ್ಷಪಾತದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ.

  1. ಕಂದಾಯ ಇಲಾಖೆ

ನಕಲಿ ಭೂ ನೋಂದಣಿ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆ ಲಂಚ ಪಡೆದಿದೆ, ರೂಪಾಂತರ, ತಹಸಿಲ್ ಮತ್ತು ಭೂ ದಾಖಲೆಗಳಲ್ಲಿ ಭೂಮಿಯ ಪ್ರಮಾಣೀಕೃತ ಪ್ರತಿ/ಖಾಟೌನಿ ಪಡೆಯುವುದು ಮತ್ತು ರೂಪಾಂತರ ಪ್ರಕ್ರಿಯೆಯಲ್ಲಿ ಲಂಚ ಪಡೆದಿದೆ ಎಂಬ ಆರೋಪವಿದೆ.

  1. ನಗರಸಭೆ/ಪುರಸಭೆ

ಕಟ್ಟಡ ಯೋಜನೆಗಳನ್ನು ಅನುಮೋದಿಸುವುದು, ನೈರ್ಮಲ್ಯೀಕರಣ, ಅಕ್ರಮ ನಿರ್ಮಾಣವನ್ನು ನಿರ್ಲಕ್ಷಿಸುವುದು ಮತ್ತು ಲಂಚ ಸ್ವೀಕರಿಸುವ ಮೂಲಕ ಅಕ್ರಮ ನಿರ್ಮಾಣವನ್ನು ಪ್ರೋತ್ಸಾಹಿಸುವ ಆರೋಪವನ್ನು ಪುರಸಭೆ ಹೊಂದಿದೆ.

  1. ಗ್ರಾಮ ಪಂಚಾಯತ್

ನಾಲ್ಕನೇ ಭ್ರಷ್ಟ ಇಲಾಖೆ ಗ್ರಾಮ ಪಂಚಾಯತ್/ಬ್ಲಾಕ್ ಮಟ್ಟದಲ್ಲಿದೆ. ಪ್ರಧಾನ ಮಂತ್ರಿ ವಸತಿ ಯೋಜನೆ, ಶೌಚಾಲಯ ಯೋಜನೆ, ಪಡಿತರ ಚೀಟಿ ಅಕ್ರಮಗಳು, ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ ಮತ್ತು ಇತರ ಗ್ರಾಮ ಸಭೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ಈ ಇಲಾಖೆಯು ಭಾರಿ ಅಕ್ರಮಗಳ ಆರೋಪವನ್ನು ಹೊಂದಿದೆ.

  1. ವಿದ್ಯುತ್ ಇಲಾಖೆ

ಈ ಇಲಾಖೆಯು ಮೀಟರ್ ರೀಡಿಂಗ್‌ಗಳನ್ನು ತಿರುಚುವುದು, ಮೋಸದ ಬಿಲ್ಲಿಂಗ್, ಸಂಪರ್ಕದಲ್ಲಿ ವಿಳಂಬ ಮತ್ತು ಲಂಚವಿಲ್ಲದೆ ದೋಷಪೂರಿತ ಲೈನ್‌ಗಳನ್ನು ದುರಸ್ತಿ ಮಾಡಲು ನಿರಾಕರಿಸುವ ಆರೋಪವನ್ನು ಹೊಂದಿದೆ.

6.ರಸ್ತೆ ಸಾರಿಗೆ ಇಲಾಖೆ (RTO)

ಪರೀಕ್ಷೆಯಿಲ್ಲದೆ ಚಾಲನಾ ಪರವಾನಗಿಗಳನ್ನು ನೀಡುವುದು, ವಾಹನ ನೋಂದಣಿಯಲ್ಲಿ ಲಂಚ ಪಡೆಯುವುದು ಮತ್ತು ಯೋಗ್ಯವಲ್ಲದ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ಒದಗಿಸುವುದು ಈ ಇಲಾಖೆಯ ಮೇಲಿದೆ.

  1. ಸರ್ಕಾರಿ ಆಸ್ಪತ್ರೆ/ಆರೋಗ್ಯ ಇಲಾಖೆ

ಔಷಧ ಪೂರೈಕೆಯಲ್ಲಿ ಭ್ರಷ್ಟಾಚಾರ, ವೈದ್ಯರ ಗೈರುಹಾಜರಿ, ಕಾರ್ಯಾಚರಣೆಗಳಿಗಾಗಿ ಖಾಸಗಿ ಆಸ್ಪತ್ರೆಗಳಿಗೆ ಉಲ್ಲೇಖ ಮತ್ತು ಅನಗತ್ಯವಾಗಿ ದುಬಾರಿ ಔಷಧಿಗಳನ್ನು ಶಿಫಾರಸು ಮಾಡುವ ಮೂಲಕ ವೈದ್ಯಕೀಯ
ಆಸ್ಪತ್ರೆಗಳಿಗೆ ಉಲ್ಲೇಖ ಮತ್ತು ಅನಗತ್ಯವಾಗಿ ದುಬಾರಿ ಔಷಧಿಗಳನ್ನು ಶಿಫಾರಸು ಮಾಡುವ ಮೂಲಕ ವೈದ್ಯಕೀಯ ಅಂಗಡಿಗಳಿಂದ ಕಮಿಷನ್ ಪಡೆದ ಆರೋಪ ಈ ಇಲಾಖೆಯ ಮೇಲಿದೆ.

‌8. ಶಿಕ್ಷಣ ಇಲಾಖೆ

ಈ ಇಲಾಖೆಯ ವಿರುದ್ಧದ ಪ್ರಮುಖ ಆರೋಪಗಳೆಂದರೆ ಶಿಕ್ಷಕರ ನೇಮಕಾತಿ ಹಗರಣಗಳು, ನಕಲಿ ಶಿಕ್ಷಕರ ಹಾಜರಾತಿ ಮತ್ತು ಖಾಸಗಿ ಶಾಲೆಗಳೊಂದಿಗೆ ಶಾಮೀಲು.

  1. ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ

ಈ ಇಲಾಖೆಗೆ ಸಂಬಂಧಿಸಿದ ಜನರು ನಿರ್ಮಾಣ ಒಪ್ಪಂದಗಳು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರದ ಆರೋಪ ಹೊಂದಿದ್ದಾರೆ.

  1. ಆದಾಯ ತೆರಿಗೆ ಮತ್ತು ಜಿಎಸ್ಟಿ

ಭಾರತದಲ್ಲಿ 10 ನೇ ಅತ್ಯಂತ ಭ್ರಷ್ಟ ಇಲಾಖೆ ತೆರಿಗೆ ಇಲಾಖೆ, ಅಂದರೆ ಆದಾಯ ತೆರಿಗೆ ಮತ್ತು ಜಿಎಸ್ಟಿ. ಈ ಇಲಾಖೆಯಲ್ಲಿರುವ ಜನರು ದಾಳಿಗಳನ್ನು ತಪ್ಪಿಸಲು ವಂಚನೆಯ ವಹಿವಾಟುಗಳು, ರಿಟರ್ನ್‌ಗಳನ್ನು ನಕಲಿ ಮಾಡುವುದು ಮತ್ತು ವ್ಯವಹಾರಗಳಿಂದ ಅಕ್ರಮ ಸುಲಿಗೆ ಮಾಡಿದ ಆರೋಪ ಹೊಂದಿದ್ದಾರೆ.

ಇದು ಒಂದು ಕಡೆಯಾದರೆ
ಇತ್ತೀಚೆಗೆ ಒಂದು ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯವರ ಹೋರಾಟದಿಂದಾಗಿ ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಸ್ವಲ್ಪ ಮಟ್ಟಿಗೆ ಜನಜಾಗೃತಿ ಮೂಡಿದೆ ಎಂಬುದು ಬಹಿರಂಗವಾಗಿದೆ. ಅಂದಮೇಲೆ ಅದಕ್ಕೆ ಪ್ರೋತ್ಸಾಹ ಕೊಡಬೇಕಾಗಿರುವುದು ಸರ್ಕಾರದ ಹೊಣೆಗಾರಿಕೆ. ಅದನ್ನು ಬಿಟ್ಟು ಪ್ರಶ್ನಿಸುವ ಅಧಿಕಾರವನ್ನೇ ಕಿತ್ತುಕೊಳ್ಳುವುದು ಅಮಾನುಷ, ಸಂವಿಧಾನ ವಿರೋಧಿ ಕ್ರಮ. ಒಂದು ವೇಳೆ ತಪ್ಪಾಗಿ, ಕೆಟ್ಟದ್ದಾಗಿ, ಹಿಂಸಾತ್ಮಕವಾಗಿ ಯಾರೇ ನಡೆದುಕೊಳ್ಳಲಿ ಅವರ ಮೇಲೆ ಕ್ರಮ ಕೈಗೊಳ್ಳಿ. ಆದರೆ ಅದನ್ನೇ ನೆಪ ಮಾಡಿಕೊಂಡು ಪರೋಕ್ಷವಾಗಿ ಭಯಪಡಿಸುವ ಕೆಲಸ ಮಾಡಬೇಡಿ.

ಸರ್ಕಾರಿ ಅಧಿಕಾರಿಗಳೇನು ಬೇರೆಯವರಲ್ಲ. ನಮ್ಮದೇ ಮನೆಯ ಸದಸ್ಯರು. ಅವರನ್ನು ರಕ್ಷಿಸಬೇಕು. ಅವರ ಮೇಲಿನ ದೌರ್ಜನ್ಯ ತಡೆಯಬೇಕು ನಿಜ. ಆದರೆ ಯಾರಿಂದ ಯಾರಿಗೆ ಹೆಚ್ಚಿನ ತೊಂದರೆಯಾಗುತ್ತದೆ ಎಂಬುದನ್ನು ಸಾರ್ವತ್ರಿಕವಾಗಿ ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಳುವವರಿಂದಲೇ ಶೋಷಣೆ, ದೌರ್ಜನ್ಯ ಹೆಚ್ಚು. ಅಧಿಕಾರ ಹೊಂದಿರುವವರು ಅವರೇ. ಅವರನ್ನು ನಿಯಂತ್ರಿಸಬೇಕು.

ಜೊತೆಗೆ ಯಾವುದೂ. ಅತಿಯಾಗಬಾರದು. ಎಲ್ಲವೂ ಒಂದು ನಿಯಂತ್ರಣದಲ್ಲಿ ಇದ್ದರೆ ವ್ಯವಸ್ಥೆ ಸುಗಮವಾಗಿ ಸಾಗುತ್ತದೆ. ಏಕೆಂದರೆ ನಾವೆಲ್ಲರೂ ಮನುಷ್ಯರು. ಅದನ್ನು ಅರ್ಥಮಾಡಿಕೊಂಡು ಮುನ್ನಡೆಯೋಣ. ಕಾನೂನು ಇರುವುದು ನಮಗಾಗಿಯೇ ಹೊರತು ನಾವು ಕಾನೂನಿಗಾಗಿ ಅಲ್ಲ. ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಪರಸ್ಪರ ಸಮಾನಾಂತರವಾಗಿ ಮುನ್ನಡೆಯಬೇಕೆ ಹೊರತು ವಿರೋಧಿಗಳಾಗಿ ಅಲ್ಲ. ನಮ್ಮ ಹೋರಾಟ ಭ್ರಷ್ಟಾಚಾರಿಗಳ ವಿರುದ್ಧವೇ ಹೊರತು ಸರ್ಕಾರಿ ಸೇವಕರ ವಿರುದ್ಧವಲ್ಲ. ನಮ್ಮಿಂದ ನೀವು, ನಿಮ್ಮಿಂದ ನಾವು…..

ಎಲ್ಲರೂ ಸೇರಿ ಭ್ರಷ್ಟಾಚಾರ ನಿರ್ಮೂಲನೆ ಮಾಡೋಣ. ಹೋರಾಟಗಾರರ ಧ್ವನಿಯನ್ನಲ್ಲ ಮಾನ್ಯ ಮುಖ್ಯಮಂತ್ರಿ ಗಳೇ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!