ಕುಂದಾಪುರ: ದಿನಾಂಕ:15-02-2026(ಹಾಯ್ ಉಡುಪಿ ನ್ಯೂಸ್) ಕಸಬಾ ಗ್ರಾಮದ ರಿಂಗ್ ರಸ್ತೆ ಸಮೀಪ ಸರಕಾರದ ಉಚಿತ ಅನ್ನ ಭಾಗ್ಯ ಯೋಜನೆಯ ಅಕ್ಕಿ ಯನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಆಟೋ ರಿಕ್ಷಾವನ್ನು ಕುಂದಾಪುರ ಪೊಲೀಸರು ವಶಪಡಿಸಿಕೊಂಡು ಆರೋಪಿ ರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ.
ಕುಂದಾಪುರ ತಾಲೂಕು ಆಹಾರ ನಿರೀಕ್ಷಕರಾದ ಸುರೇಶ ಎಚ್.ಎಸ್ ಅವರಿಗೆ ದಿನಾಂಕ: 14/02/2026 ರಂದು ಸಂಜೆ ಸಮಯಕ್ಕೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ರಿಂಗ್ ರಸ್ತೆ ಸಮೀಪ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ಆಟೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಆಹಾರ ನಿರೀಕ್ಷಕರು ಕುಂದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ನಂಜಾನಾಯ್ಕ್ ಎನ್ ಹಾಗೂ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ಕಾಯುತ್ತಿರುವಾಗ KA20AC2865 ಬಜಾಜ್ ಮ್ಯಾಕ್ಸ್ ಕಂಪೆನಿಯ ಆಟೋ ರಿಕ್ಷಾವು ಖಾರ್ವಿಕೇರಿ ರಿಂಗ್ ರಸ್ತೆ ಕಡೆಯಿಂದ ಬರುತ್ತಿರುವುದನ್ನು ಕಂಡು ಆ ರಿಕ್ಷಾವನ್ನು ನಿಲ್ಲಿಸಿ ಪರಿಶೀಲಿಸಿದಾಗ ಆಟೋ ರಿಕ್ಷಾದಲ್ಲಿ ಅಕ್ಕಿ ತುಂಬಿದ 8 ಪಾಲೀಥಿನ್ ಚೀಲದಲ್ಲಿ ಉಚಿತ ಅನ್ನಭಾಗ್ಯ ಅಕ್ಕಿಯನ್ನು ತುಂಬಿಸಿ ಸಾಗಿಸುತ್ತಿರುವ ಚಾಲಕ ಕೃಷ್ಣ ಖಾರ್ವಿ ಯಾವುದೇ ಪರವಾನಿಗೆ ಇಲ್ಲದೇ 1) 50 ಕೆ.ಜಿಯ 1 ಚೀಲ , 2) 40 ಕೆ.ಜಿ ಯ 4 ಚೀಲ 3)30 ಕೆ.ಜಿಯ 3 ಚೀಲ ಒಟ್ಟು ತೂಕ 300 ಕೆ.ಜಿ ತೂಕದ ಅಂದಾಜು ಮೌಲ್ಯ ರೂ 7200/- ರೂಪಾಯಿ ಮೌಲ್ಯದ ಅಕ್ಕಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ:3,6,7 Essential Commodities Act 1955 ರಂತೆ ಪ್ರಕರಣ ದಾಖಲಾಗಿದೆ.
