ದೇಶದ ನಡೆ ಅಪಾಯಕಾರಿಯತ್ತ…..
ವಂದೇ ಮಾತರಂಗೆ ರಾಷ್ಟ್ರಗೀತೆ ಸ್ಥಾನಮಾನ,
ಭಾರತ – ಅಮೆರಿಕ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದ,
ಹೊಸ ನಾಲ್ಕು ಕಾರ್ಮಿಕ ನೀತಿ ಸಂಹಿತೆಗಳು,
ಕೇಂದ್ರ ಸರ್ಕಾರದ ಗಲಭೆಕೋರ ಮನಸ್ಥಿತಿ,
ರಾಹುಲ್ ಗಾಂಧಿಯವರ ಆಕ್ರಮಣಕಾರಿ, ಅಪಪ್ರಬುದ್ಧ ನಡವಳಿಕೆ,
ಕಾರ್ಪೊರೇಟ್ ವಲಯದ ಬಿಗಿ ಹಿಡಿತ,
ಇತ್ಯಾದಿ ಇತ್ಯಾದಿ…….
ಭಾರತ ಮತ್ತು ಅಮೆರಿಕಾದ ನಡುವೆ ಇತ್ತೀಚೆಗೆ ಆದ ವಾಣಿಜ್ಯ ಒಪ್ಪಂದ ಡೊನಾಲ್ಡ್ ಟ್ರಂಪ್ ಎಂಬ ವಿಕ್ಷಿಪ್ತ ಮನಸ್ಥಿತಿಯ ಅಧ್ಯಕ್ಷನ ಮೇಲುಗೈ ಕಾಣಬಹುದಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಭಾರತವನ್ನು ಬಲಿಷ್ಠ ಅಮೆರಿಕ ಸ್ವಲ್ಪಮಟ್ಟಿಗೆ ಬ್ಲಾಕ್ ಮೇಲ್ ಮಾಡಿ ಸಣ್ಣ ಪ್ರಮಾಣದಲ್ಲಿ ಶರಣಾಗುವಂತೆ ಮಾಡಿದೆ. ಇದು ಮೊದಲೇನೂ ಅಲ್ಲ. ಹಿಂದೆ ಬೇರೆ ಬೇರೆ ಕಾಲಘಟ್ಟದಲ್ಲಿ ಅಮೆರಿಕ ಆಗಾಗ್ಗೆ ಭಾರತದ ಶಕ್ತಿಯನ್ನು ಕುಂದಿಸಲು ಪ್ರಯತ್ನಿಸಿದ ಘಟನೆಗಳು ನಡೆದಿದೆ. ಕೆಲ ಸರ್ಕಾರಗಳು ಅದಕ್ಕೆ ಸಣ್ಣ ಪ್ರತಿರೋಧವನ್ನೂ ತೋರಿಸಿವೆ. ಆದರೂ ಅಂತಿಮವಾಗಿ ಅಮೆರಿಕಾದ ಹಿತಾಸಕ್ತಿ ಪರವಾಗಿಯೇ ಭಾರತ ತಗ್ಗಿ ನಡೆಯುತ್ತದೆ. ಜಾಗತಿಕ ರಾಜಕೀಯ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಅದು ಅನಿವಾರ್ಯವೂ ಹೌದು. ವ್ಯಕ್ತಿಯಾಗಿರಲಿ, ದೇಶವೇ ಆಗಿರಲಿ ಬಲಿಷ್ಠರ ಮುಂದೆ ಸ್ವಲ್ಪಮಟ್ಟಿಗೆ ದುರ್ಬಲರು ಕುಸಿಯುವುದು ಪ್ರಕೃತಿ ಸಹಜ ಧರ್ಮವೂ ಹೌದು, ಅಪರೂಪದ ಘಟನೆಗಳನ್ನು ಹೊರತುಪಡಿಸಿ.
ಆದರೆ ಮೇಲ್ನೋಟಕ್ಕೆ ಈ ಒಪ್ಪಂದದಿಂದ ರೈತರ ಹಿತಾಸಕ್ತಿಗೆ ದೊಡ್ಡ ಮಟ್ಟದ ಧಕ್ಕೆ ಆಗಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರವಾಗಿ ಯೋಚಿಸಬೇಕು. ಈಗಾಗಲೇ ಮುಕ್ತ ಮಾರುಕಟ್ಟೆ ಪ್ರವೇಶಿಸಿದ ನಂತರ ಇಲ್ಲಿಯವರೆಗೂ ಭಾರತದ ರೈತರ ಆತ್ಮಹತ್ಯೆಗಳು ನಿಂತಿಲ್ಲ. ಅದು ಮತ್ತಷ್ಟು ಹೆಚ್ಚಾಗದಂತೆ ತಡೆಯಬೇಕಾದ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆ ಬಗ್ಗೆ ಹೆಚ್ಚು ಗಮನ ಹರಿಸುವುದನ್ನು ಬಿಟ್ಟು ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆಗೆ ಮೊದಲು ಸರ್ಕಾರಿ ಕಚೇರಿಗಳಲ್ಲಿ ಹಾಡಬೇಕು ಅಥವಾ ನುಡಿಸಬೇಕು ಎನ್ನುವ ಘೋಷಣೆ ಅದರ ಗಲಭೆಕೋರ ಮನಸ್ಥಿತಿಗೆ ಉದಾಹರಣೆಯಂತಿದೆ. ವಂದೇ ಮಾತರಂ ಆಗಲೂ ಗೌರವಾನ್ವಿತವೇ, ಈಗಲೂ ಗೌರವಾನ್ವಿತವೇ, ಆದರೆ ಈ ಸಂದರ್ಭದಲ್ಲಿ ಅದನ್ನು ಅಧೀಕೃತಗೊಳಿಸುವ ಅವಶ್ಯಕತೆ ಇತ್ತೇ ಎಂಬುದಷ್ಟೇ ಪ್ರಶ್ನೆ. ಜೊತೆಗೆ ಎರಡೆರಡು ರಾಷ್ಟ್ರಗೀತೆ ಮಾನಸಿಕ ಕಿರಿಕಿರಿ ಉಂಟು ಮಾಡಬಹುದು.
ಈಗಿನ ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಸರಿಯೋ, ತಪ್ಪೋ ಈಗಿರುವ ಜನಗಣಮನ ರಾಷ್ಟ್ರಗೀತೆ ಹೇಗೋ ನಡೆದುಕೊಂಡು ಹೋಗುತ್ತಿದೆ. ಹಾಗೆಯೇ ವಂದೇ ಮಾತರಂ ಎಂದಿನಂತೆ ಯಥಾ ಸ್ಥಿತಿಯಲ್ಲಿ ಮುಂದುವರೆಯುತ್ತಿದೆ. ಇಂತಹ ಸಂದರ್ಭದಲ್ಲಿ ಅನಾವಶ್ಯಕವಾಗಿ ವಂದೇ ಮಾತರಂ ಗೀತೆಯನ್ನು ಅಧಿಕೃತಗೊಳಿಸುವ ಅವಶ್ಯಕತೆ ಅಥವಾ ಅನಿವಾರ್ಯತೆ ಇರಲಿಲ್ಲ. ಏಕೆಂದರೆ ವಂದೇ ಮಾತರಂ ಗೀತೆ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಲ್ಪಮಟ್ಟಿಗೆ ವಿವಾದಾತ್ಮಕವಾಗಿ ಎರಡು ಸಾಲುಗಳನ್ನು ನಿಷೇಧಿಸಿ ಹಾಡಲಾಗುತ್ತಿತ್ತು. ಅದು ಸರಿಯೋ ತಪ್ಪೋ ಬೇರೆ ವಿಚಾರ. ಅದರಲ್ಲಿ ಬರುವ ದೇವತೆಯ ಗುಣಗಾನ ಅವರವರ ನಂಬಿಕೆಗೆ ಸೇರಿದ್ದರೂ ವಾಸ್ತವದಲ್ಲಿ ಎರಡೂ ಧರ್ಮಗಳವರು ಮನುಷ್ಯರಿಗಿಂತ ಅಸ್ತಿತ್ವದಲ್ಲೇ ಇಲ್ಲದ ದೇವರುಗಳಿಗೆ ಪ್ರಾಮುಖ್ಯತೆ ನೀಡಿ ಅದನ್ನು ಒಂದು ವಿವಾದವಾಗಿಸುತ್ತಿರುವುದೇ ಮೂರ್ಖತನ. ಇಂತಹ ಸಂದರ್ಭದಲ್ಲಿ ಅದನ್ನು ಮತ್ತೆ ಮುಖ್ಯ ವಾಹಿನಿಗೆ ತಂದು ಇನ್ನಷ್ಟು ವಿಭಜಕ ಶಕ್ತಿಗಳಿಗೆ ಪ್ರೋತ್ಸಾಹ ಕೊಡುವ ಅವಶ್ಯಕತೆ ಇತ್ತೇ. ದೇಶ ಮುಖ್ಯ ಎನ್ನುವವರು ದೇಶದ ಆಂತರಿಕ ಶಾಂತಿ, ಸೌಹಾರ್ದತೆ ಕಾಪಾಡುವ ಜವಾಬ್ದಾರಿಯನ್ನು ಹೊಂದಿರಬೇಕು.
ಸತ್ಯ ಏನೇ ಇರಲಿ, ವಾಸ್ತವ ಏನೇ ಇರಲಿ, ವ್ಯಾವಹಾರಿಕ ಜ್ಞಾನ ಸರ್ಕಾರ ನಡೆಸುವವರಿಗೆ ಇರಬೇಕಾಗುತ್ತದೆ. ಈ ಕ್ಷಣದಲ್ಲಿ ವಂದೇ ಮಾತರಂ ಪರ್ಯಾಯ ರಾಷ್ಟ್ರಗೀತೆಯಾಗುವುದು ಅಷ್ಟು ಉತ್ತಮ ನಡೆಯಲ್ಲ. ಅಂದರೆ ವಂದೇ ಮಾತರಂ ಬಗ್ಗೆ ತಕರಾರಿಲ್ಲ. ಸಂದರ್ಭ, ಸನ್ನಿವೇಶ ಮತ್ತು ಪ್ರಕ್ಷುಬ್ಧ ವಾತಾವರಣ ನಿರ್ಮಾಣದ ಆತಂಕದಿಂದ ಅದಕ್ಕೆ ವಿರೋಧವಷ್ಟೇ. ಅದನ್ನು ಹಾಡಲು ನಮ್ಮ ವಿರೋಧವಿಲ್ಲ. ಆದರೆ ಒತ್ತಾಯ ಮತ್ತು ಕಡ್ಡಾಯದ ಹಿಂದಿನ ಗಲಭೆಕೋರ ಮನಸ್ಥಿತಿಯ ಬಗ್ಗೆ ಮಾತ್ರ ಆಕ್ಷೇಪ.
ಹಾಗೆಯೇ ಹೊಸದಾಗಿ ಜಾರಿಯಾಗಿರುವ ನಾಲ್ಕು ಹೊಸ ಕಾರ್ಮಿಕ ಕಾನೂನು ನೀತಿ ಸಂಹಿತೆಗಳು ಕಾರ್ಮಿಕ ವಿರೋಧಿಯಾಗಿವೆ. ಅದು ಕಾರ್ಪೊರೇಟ್ ವಲಯಕ್ಕೆ ಪೂರಕವಾಗಿ ಶೋಷಣೆಗೆ ಎಡೆ ಮಾಡಿಕೊಡುತ್ತವೆ. ಕಾರ್ಮಿಕರನ್ನು ಗುಲಾಮರಂತೆ ನಡೆಸಿಕೊಳ್ಳುತ್ತವೆ ಎಂದು ಕಾರ್ಮಿಕ ವಲಯದಲ್ಲಿ ಅಸಮಾಧಾನ ಹೆಚ್ಚಾಗಿದೆ. ಆ ರೀತಿಯ ಅನುಮಾನಗಳು ಕಾರ್ಮಿಕ ವಲಯದಿಂದ ಉದ್ಭವವಾದಾಗ, ಜೊತೆಗೆ ಯಾವುದೇ ಕಾನೂನು ಕಾರ್ಪೊರೇಟ್ ವಲಯದ ಪರವಾಗಿದ್ದಾಗ ಬಲಿಷ್ಠ ಕಾರ್ಪೊರೇಟ್ ವಲಯ ಆ ಕಾನೂನುಗಳಲ್ಲಿರುವ ಕೆಲವು ಸೂಕ್ಷ್ಮ ಅಂಶಗಳನ್ನು ತಮಗಿರುವ ಹಣಕಾಸು ಮತ್ತು ವಕೀಲಿಕೆಯ ಪ್ರಭಾವದಿಂದ ದುರುಪಯೋಗಪಡಿಸಿಕೊಳ್ಳುವುದು ಶತಃಸಿದ್ಧ. ಕಾರ್ಮಿಕರಿಗೆ ತಮ್ಮ ನ್ಯಾಯಯುತ ಹಕ್ಕನ್ನೇ ಪಡೆಯಲು ಸಾಧ್ಯವಿಲ್ಲದ ಆರ್ಥಿಕ ಪರಿಸ್ಥಿತಿ ಇರುವಾಗ ಬೃಹತ್ ಉದ್ದಿಮೆಗಳ ಮೇಲೆ ಕಾನೂನು ಹೋರಾಟ ಮಾಡುವುದು ಅಷ್ಟು ಸುಲಭವಲ್ಲ.
ಈ ಒಂದು ದೌರ್ಬಲ್ಯ ಕಾರ್ಮಿಕ ನೀತಿ ಸಂಹಿತೆಯಲ್ಲಿ ಇದೆ. ಇದು ಮೇಲ್ನೋಟಕ್ಕೆ ಕಾಣುವುದಕ್ಕಿಂತ ಒಳನೋಟದ ದುಷ್ಪರಿಣಾಮವೇ ಹೆಚ್ಚಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಆ ಬಗ್ಗೆಯೂ ಗಂಭೀರವಾದ ನಿರ್ಧಾರ ಕೈಗೊಳ್ಳಬೇಕಿದೆ. ಕಾರ್ಪೊರೇಟ್ ವಲಯ ನಮ್ಮೆಲ್ಲಾ ಕಾರ್ಮಿಕರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕಿದೆ.
ಹಾಗೆಯೇ ಭಾರತದಂತಹ ಬೃಹತ್ ದೇಶದ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಸಹ ತಮ್ಮ ವಿಚಾರಗಳನ್ನು ನೇರವಾಗಿ, ಸ್ಪಷ್ಟವಾಗಿ ಹೇಳುತ್ತಿದ್ದರೂ ಅದನ್ನು ಆಕ್ರಮಣಕಾರಿಯಾಗಿ ಮತ್ತು ಅಪ್ರಬುದ್ಧವಾಗಿ ನಿರೂಪಣೆ ಮಾಡುತ್ತಿರುವ ಲಕ್ಷಣಗಳು ಕಾಣಿಸುತ್ತಿದೆ. ಆಳಕ್ಕೆ ಹೋಗದೆ ತೀರಾ ಲಘುವಾಗಿ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇದರಿಂದಾಗಿ ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯುತ್ತಿಲ್ಲ. ಅವರು ಹೇಳುವುದನ್ನು ಇನ್ನಷ್ಟು ಪ್ರಬುದ್ಧವಾಗಿ ಹೇಳುವ ಎಲ್ಲ ಸಾಧ್ಯತೆಯೂ ಇದೆ.
ಜೊತೆಗೆ ಕೇವಲ ಈ ಸರ್ಕಾರವನ್ನು ದೊಡ್ಡಮಟ್ಟದಲ್ಲಿ ಟೀಕಿಸುವುದು ಮಾತ್ರವಲ್ಲ ವಿರೋಧ ಪಕ್ಷದ ನಾಯಕರು ಶಾಡೋ ಗೌರ್ನಮೆಂಟ್ ಅಂದರೆ ಛಾಯಾ ಸರ್ಕಾರದ ರೀತಿ ಜನರಿಗೆ ಅಭಿವೃದ್ಧಿಯ ಪರ್ಯಾಯ ಮಾರ್ಗಗಳ ಬಗ್ಗೆ ಆಗಾಗ ಹೇಳುತ್ತಲೇ ಇರಬೇಕು. ಈ ಸರ್ಕಾರಕ್ಕಿಂತ ಭಿನ್ನವಾಗಿ ಹೇಗೆ ಸರ್ಕಾರ ನಡೆಸಬಹುದು, ಜನರ ಆಶೋತ್ತರಗಳಿಗೆ ಹೇಗೆ ಸ್ಪಂದಿಸಬಹುದು ಎನ್ನುವುದನ್ನು ಸಹ ಅವರು ಜನರಿಗೆ ಮನವರಿಕೆ ಮಾಡಿಕೊಡಬೇಕು. ಸಾಮಾಜಿಕ ಜಾಲತಾಣಗಳ ಪ್ರಚೋದನೆಗೆ ಒಳಗಾಗಿ ಅಕ್ರೋಶವನ್ನೇ ತಮ್ಮ ಚಿಂತನೆಯಾಗಿ, ವಿಚಾರವಾಗಿ ಮಾಡಿಕೊಳ್ಳಬಾರದು.
ಕೇಂದ್ರ ಸರ್ಕಾರ ಮತ್ತು ರಾಹುಲ್ ಗಾಂಧಿಯವರ ಸೈದ್ದಾಂತಿಕ ಚಿಂತನೆಗಳು ಎರಡು ವಿಭಿನ್ನ ಧ್ರುವಗಳು. ಆದರೆ ಭಾರತ ಎಂಬುದು ಒಂದೇ ಭೂಪ್ರದೇಶ. ಇಲ್ಲಿನ ಜನರು, ಅವರ ಹಿತಾಸಕ್ತಿ ಮುಖ್ಯವಾಗಿ ಇಟ್ಟುಕೊಂಡಾಗ ಮಾನ್ಯ ಪ್ರಧಾನಿಯವರ ವ್ಯಾಪಾರೀಕರಣ ಧೋರಣೆ, ವಿರೋಧ ಪಕ್ಷದ ನಾಯಕರ ಅತಿ ಆಕ್ರಮಣಕಾರಿ ಧೋರಣೆ ಎರಡು ಒಳ್ಳೆಯ ನಡೆಯಲ್ಲ. ಸಂಯಮ ಮತ್ತು ಸಮನ್ವಯದ ದಾರಿಯನ್ನು ಅವರಿಬ್ಬರೂ ಅನುಸರಿಸಬೇಕಿದೆ. ಇಲ್ಲದಿದ್ದರೆ ಅವರಿಬ್ಬರ ವೈಯಕ್ತಿಕ ಹುಚ್ಚು ಕಿತ್ತಾಟದಲ್ಲಿ ದೇಶ ಮತ್ತಷ್ಟು ದುರ್ಬಲವಾಗುವುದು ನಿಶ್ಚಿತ.
ಈ ದೇಶವನ್ನು ಕಾಪಾಡಬೇಕಾಗಿರುವುದು ಇಲ್ಲಿನ ರಾಜಕೀಯ ಪಕ್ಷಗಳು ಮತ್ತು ಅಧಿಕಾರಿ ವರ್ಗ. ಎಷ್ಟೇ ರಕ್ಷಣಾತ್ಮಕ ವಿಧಾನಗಳೇ ಇರಲಿ, ಎಷ್ಟೇ ಆರ್ಥಿಕ ಪ್ರಗತಿಯೇ ಇರಲಿ, ಎಷ್ಟೇ ಧಾರ್ಮಿಕ ಶ್ರದ್ಧೆಯೇ ಇರಲಿ ಅವೆಲ್ಲವೂ ದೇಶದ ಸಾಮಾಜಿಕ ವ್ಯವಸ್ಥೆ, ರಾಜಕೀಯ ವ್ಯವಸ್ಥೆ, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿದ್ದಾಗ ಮಾತ್ರ ಅದಕ್ಕೆ ಅರ್ಥ. ಇಲ್ಲದಿದ್ದರೆ ತುಂಬಾ ಅಪಾಯಕಾರಿ ಆಗಬಹುದು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
