Deepen-Photo.jpg
Spread the love

ದಿನಾಂಕ:28-01-2026(ಹಾಯ್ ಉಡುಪಿ ನ್ಯೂಸ್)

 ಉಡುಪಿ: ನವೆಂಬರ್ 2025ರಲ್ಲಿ ಕರ್ನಾಟಕ ಸರ್ಕಾರದಿಂದ ಹೊಯ್ಸಳ ಶೌರ್ಯ ಪ್ರಶಸ್ತಿ ಪಡೆದ ಮಾಸ್ಟರ್ ದೀಪೇಶ್ ದೀಪಕ್ ಶೆಣೈ , ಮಾರ್ಚ್–ಏಪ್ರಿಲ್ 2026ರ SSLC ಪರೀಕ್ಷೆಗೆ ತಯಾರಾಗುತ್ತಿರುವ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಹಿತದೃಷ್ಟಿಯಿಂದ ನಿರಂತರ ವಿದ್ಯುತ್ ಸರಬರಾಜು ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

 ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಕುಂಜಿಬೆಟ್ಟು, ಉಡುಪಿ (ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಷನ್‌ ಶಿಕ್ಷಣ ಸಂಸ್ಥೆಯ ಘಟಕ) ಯ ಹತ್ತನೇಯ ತರಗತಿ ವಿದ್ಯಾರ್ಥಿ ಹಾಗೂ ನಾಗರಿಕ ಧೈರ್ಯ ಮತ್ತು ಸಮಯಪ್ರಜ್ಞೆಗೆ ಕರ್ನಾಟಕ ಸರ್ಕಾರದಿಂದ ಅತ್ಯುನ್ನತ  ಹೊಯ್ಸಳ ಶೌರ್ಯ ಪ್ರಶಸ್ತಿ ಪಡೆದಿರುವ ಮಾಸ್ಟರ್ ದೀಪೇಶ್ ದೀಪಕ್ ಶೆಣೈ, ತಮ್ಮ ಪ್ರದೇಶದಲ್ಲಿ ನಡೆಯುತ್ತಿರುವ ಅನಿಯಮಿತ ಹಾಗೂ ಅಘೋಷಿತ ವಿದ್ಯುತ್ ಕಡಿತಗಳ ಕುರಿತು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ತಕ್ಷಣದ ಕ್ರಮಕ್ಕೆ ಮನವಿ ಸಲ್ಲಿಸಿದ್ದಾರೆ.

 

ಮನವಿಯಲ್ಲಿ, ಮಾರ್ಚ್–ಏಪ್ರಿಲ್ 2026ರಲ್ಲಿ ನಡೆಯಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸುವ SSLC ಪರೀಕ್ಷೆಗೆ ತಯಾರಾಗುತ್ತಿರುವ ರಾಜ್ಯದ ಸಮಸ್ತ ವಿದ್ಯಾರ್ಥಿಗಳಿಗಾಗಿ ಮುಂಜಾನೆ ಮತ್ತು ರಾತ್ರಿ ಹಗಲಿನ ಸಮಯದಲ್ಲಿ ನಿರಂತರ ವಿದ್ಯುತ್ ಒದಗಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ತಕ್ಷಣ ತಾಂತ್ರಿಕ ಪರಿಶೀಲನೆ ಮತ್ತು ದುರಸ್ತಿ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

 ಪುನಃಪುನಃ ನಡೆಯುತ್ತಿರುವ ವಿದ್ಯುತ್ ಕಡಿತಗಳು ಅಧ್ಯಯನ ಸಮಯವನ್ನು ವ್ಯತ್ಯಯಗೊಳಿಸುತ್ತಿದ್ದು, ಆನ್‌ಲೈನ್ ಅಧ್ಯಯನ, ಡಿಜಿಟಲ್ ಶೈಕ್ಷಣಿಕ ಸಂಪನ್ಮೂಲಗಳು ಹಾಗೂ ಸಾಧನಗಳ ಚಾರ್ಜಿಂಗ್‌ಗೆ ಅಡಚಣೆ ಉಂಟುಮಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಲ್ಲಿ ಆತಂಕ ಹೆಚ್ಚುತ್ತಿದೆ ಎಂದು ಅವರು ಗಮನಾರ್ಹವಾಗಿ ಉಲ್ಲೇಖಿಸಿದ್ದಾರೆ.

 ಈ ಮನವಿ ಯಾವುದೇ ವೈಯಕ್ತಿಕ ಲಾಭ ಅಥವಾ ಪ್ರಚಾರಕ್ಕಾಗಿ ಅಲ್ಲ, ಸಂಪೂರ್ಣವಾಗಿ ಸಮುದಾಯದ ಹಿತದೃಷ್ಟಿಯಿಂದ ಸಲ್ಲಿಸಲಾಗಿದೆ ಎಂದು ದೀಪೇಶ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕ ಸಮಸ್ಯೆಗಳನ್ನು ಮುಂದಿಟ್ಟ ಕಾರಣದಿಂದ ಅಸೌಕರ್ಯಗಳು ಎದುರಾಗಬಹುದೆಂಬ ಆತಂಕವಿದ್ದರೂ, ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಶ್ನೆ ಎತ್ತುವುದನ್ನು ಮುಂದುವರಿಸುವ ದೃಢ ನಿಲುವು ತಮ್ಮದು ಎಂದು ತಿಳಿಸಿದ್ದಾರೆ.

 ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಜೀ ಅವರ “ಶಿಕ್ಷಣವು ಮುಕ್ತಿಗೊಳಿಸುವ ಶಕ್ತಿ” ಎಂಬ ಮಾತನ್ನು ಉಲ್ಲೇಖಿಸಿ, ಮಕ್ಕಳಿಗೆ ಅನುಕೂಲಕರವಾದ ಕಲಿಕಾ ವಾತಾವರಣವನ್ನು ರಕ್ಷಿಸುವ ಹೊಣೆಗಾರಿಕೆ ರಾಜ್ಯದ ಮೇಲಿದೆ ಎಂದು ಅವರು ಹೇಳಿದ್ದಾರೆ.

 ಕರ್ನಾಟಕ ಸರ್ಕಾರದ ಆಡಳಿತಾತ್ಮಕ ಪ್ರಯತ್ನಗಳನ್ನು ಶ್ಲಾಘಿಸಿದ ದೀಪೇಶ್, ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯುತ್ ಅವಿಭಾಜ್ಯವಾಗಿರುವುದರಿಂದ ಅನಿಯಮಿತ ವಿದ್ಯುತ್ ಕಡಿತಗಳು ವಿದ್ಯಾರ್ಥಿಗಳ ಭವಿಷ್ಯವನ್ನೇ ಅಪಾಯಕ್ಕೆ ತಳ್ಳುತ್ತವೆ ಎಂದು ಎಚ್ಚರಿಸಿದ್ದಾರೆ.

 “ನಾನು ಕೂಡ ವಿದ್ಯಾರ್ಥಿಯಾಗಿ ಮತ್ತು ಈ ಸಮುದಾಯದ ಸದಸ್ಯನಾಗಿ, ನನ್ನಷ್ಟಕ್ಕಾಗಿ ಅಲ್ಲ, ಸಮಸ್ತ ಕರುನಾಡಿನ SSLC ಪರೀಕ್ಷೆಗೆ  ತಯಾರಾಗುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯಕ್ಕಾಗಿ ಮಾನ್ಯ ಮುಖ್ಯಮಂತ್ರಿ ಅವರು ತಕ್ಷಣ ಕ್ರಮ ಕ್ರಮಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ,” ಎಂದು ದೀಪೇಶ್ ಹೇಳಿದ್ದಾರೆ.

error: No Copying!