IMG-20230719-WA00161.jpg
Spread the love

ಉಡುಪಿ: ದಿನಾಂಕ:24-01-2026(ಹಾಯ್ ಉಡುಪಿ ನ್ಯೂಸ್) ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಟೈಮಿಂಗ್ ವಿಚಾರದಲ್ಲಿ ಹೊಡೆದಾಟ ನಡೆಸುತ್ತಿದ್ದ ಬಸ್ಸುಗಳ ಸಿಬ್ಬಂದಿಗಳನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಭರತೇಶ್‌ ಕಂಕಣವಾಡಿ ಅವರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ಭರತೇಶ್ ಕಂಕಣವಾಡಿ (43)  ಅವರು ದಿನಾಂಕ 23/01/2026 ರಂದು ಠಾಣೆಯಲ್ಲಿರುವಾಗ ಬೆಳಗ್ಗೆ  ಸಾರ್ವಜನಿಕರೊಬ್ಬರು ಫೋನ್ ಕರೆಮಾಡಿ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಬಸ್ ನಿಲ್ದಾಣದಲ್ಲಿ ಬಸ್ಸಿನವರ ಗಲಾಟೆ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಭರತೇಶ್ ಕಂಕಣವಾಡಿ ಯವರು ಕೂಡಲೇ ಠಾಣೆ ಯ ಸಿಬ್ಬಂದಿಗಳೊಂದಿಗೆ ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಸಿಟಿ ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ಹಾಗೂ ಡ್ರೈವರ್ ಗಳ ನಡುವೆ ಬಸ್ಸಿನ ಟೈಮಿಂಗ್ ವಿಚಾರಕ್ಕೆ ತಮ್ಮೊಳಗೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಪರಸ್ಪರ ದೂಡಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಭಯದ ಮತ್ತು ಪ್ರಕ್ಷುಬ್ದ ವಾತಾವರಣ ಉಂಟು ಮಾಡಿದ್ದರು.

ಪೊಲೀಸರು ಅವರುಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಗಲಾಟೆ ಮಾಡಬಾರದಾಗಿ ತಿಳುವಳಿಕೆ ನೀಡಿದರೂ ಅವರುಗಳು ಸಮವಸ್ತ್ರದಲ್ಲಿದ್ದ ಪೊಲೀಸರ ಎದುರಿನಲ್ಲಿಯೇ ಪರಸ್ಪರ ಬೈದಾಡುತ್ತಾ ದೂಡಾಡಿಕೊಂಡು ಕೈ-ಕೈ ಮಿಲಾಯಿಸುತ್ತಿರುವುದನ್ನು ಮುಂದುವರಿಸಿದಾಗ ಪೊಲೀಸರು ಅವರನ್ನು ಹಿಡಿದು ಬಂಧಿಸಿದ್ದಾರೆ.

ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ತಮ್ಮ ಹೆಸರು ವಿಖ್ಯಾತ್ ಮತ್ತು ಶರಣ್ ಎಂದು ಹೇಳಿದ್ದು ಅವರುಗಳು ಸೀಮಾ ಬಸ್ ನಂಬ್ರ KA-20 B-4215 ನೇ ಡ್ರೈವರ್ ಮತ್ತು ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ.

3ನೇ ಆರೋಪಿ ತನ್ನ ಹೆಸರು ಹೇಮಂತ್ ತಾನು ತನ್ವೀರ್ ಬಸ್ ನಂಬ್ರ KA-20 B-5448 ರ ಕಂಡಕ್ಟರ್ ಆಗಿರುವುದಾಗಿ ತಿಳಿಸಿರುತ್ತಾನೆ. ಇವರೆಲ್ಲರೂ ಸಾರ್ವಜನಿಕ ಸ್ಥಳದಲ್ಲಿ ಬಸ್ಸಿನ ಟೈಮಿಂಗ್ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರು ಎಂದು ಪೊಲೀಸರು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 194 (2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!