ಬೆಂಗಳೂರು: ದಿನಾಂಕ:24-01-2026(ಹಾಯ್ ಉಡುಪಿ ನ್ಯೂಸ್)
ರಾಜ್ಯದಲ್ಲಿ ಬೈಕ್‌ಗಳನ್ನು ಟ್ಯಾಕ್ಸಿಗಳನ್ನಾಗಿ ಬಳಸಲು ಹೈಕೋರ್ಟ್ ಅನುಮತಿ ನೀಡಿದೆ. ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ನಿಷೇಧಿಸಿದ್ದನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಎತ್ತಿಹಿಡಿದಿತ್ತು. ಆದರೆ ಇದೀಗ ವಿಭಾಗೀಯ ವೀಠ ಆದೇಶ ರದ್ದುಗೊಳಿಸಿ, ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ. ಒಲಾ, ಊಬರ್ ಮತ್ತಿತರ ಅಗ್ರಿಗೇಟರ್ ಗಳು ಸಲ್ಲಿಸಿದ ಮೇಲ್ಮನವಿಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಮಾನ್ಯ ಮಾಡಿದೆ. ಇದೇ ವೇಳೆ ಸಾರಿಗೆ ವಾಹನಗಳಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿಯನ್ನು ನಿರಾಕರಿಸಲಾಗುವುದಿಲ್ಲ ಎಂದು ಹೇಳಿದೆ. ಬೈಕ್ ಮಾಲೀಕರು ಅಥವಾ ಅಗ್ರಿಗೇಟರ್ ಗಳು ಸಾರಿಗೆ ವಾಹನಗಳನ್ನಾಗಿ ಬಳಸಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಅರ್ಹ ಮನವಿಗಳನ್ನು ಸರ್ಕಾರ ಪುರಸ್ಕರಿಸಿ ಅನುಮತಿ ನೀಡಬೇಕು. ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 74(2) ರ ಪ್ರಕಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಗತ್ಯ ಷರತ್ತುಗಳನ್ನು ವಿಧಿಸಬಹುದು ಎಂದು ಪೀಠ ಆದೇಶ ನೀಡಿದೆ.
