ಉಚ್ವಾಸ – ನಿಶ್ವಾಸಗಳ ನಡುವೆ……
ದೇಹವೆಂಬ ದೇಗುಲದಲ್ಲಿ
ಹೃದಯವೆಂಬ ಹಣತೆ ಬೆಳಗುತಿದೆ,…..
ಮನಸ್ಸೆಂಬ ಆಳದಲ್ಲಿ
ಆತ್ಮವೆಂಬ ಬೆಳಕು ಪ್ರಜ್ವಲಿಸುತ್ತಿದೆ…..
ಜಾತಸ್ಯ ಮರಣಂ ಧ್ರುವಂ…
ಹುಟ್ಟಿದ ಕ್ಷಣದಿಂದ ಸಾವಿನಡೆಗೆ ಸಾಗುವುದೇ ಜೀವನ…..
ಈ ನಡುವಿನ ಕಾಲವೇ ನಮ್ಮದು ನಿಮ್ಮದು ಎಲ್ಲರದೂ……
ಸೃಷ್ಟಿಯ ನಿಯಮದಂತೆ,
ಗಂಡು ಹೆಣ್ಣಿನ ಸಮ್ಮಿಲನದಿಂದ,
ತಾಯ ಗರ್ಭದಲ್ಲಿ ಪ್ರಾರಂಭವಾಗುವುದು,
ಮೊದಲ ಉಚ್ವಾಸ –
ಅದೇ ನಮ್ಮ ಆರಂಭ,
ಅದೇ ಎಲ್ಲರ ಸಂಭ್ರಮ……
ಮುಂದೊಮ್ಮೆ,
ಕೊನೆಯ ನಿಶ್ವಾಸ –
ಅದೇ ನಮ್ಮ ಅಂತ್ಯ,
ಅದೇ ಎಲ್ಲರಿಗೂ ದುಃಖ – ನೋವು…….
ಈ ನಡುವಿನ ಬಾಲ್ಯ ಯೌವ್ವನ
ಮುಪ್ಪುಗಳೇ ನಮ್ಮ ಬದುಕು,…
ಹೇಗೆಂದು ವರ್ಣಿಸಲಿ ಇದನು,
ಹೇಗೆಂದು ಬಣ್ಣಿಸಲಿ ಇದನು,…
ಪದಗಳಿವೆಯೇ ಇದಕೆ ಅರ್ಥಕೊಡಲು,
ನಿಲುಕುವುದೇ ಇದು ಭಾಷೆಗಳಿಗೆ,….
ಹೃದಯದ ಬಡಿತ – ರಕ್ತದ ಹರಿವು,
ಮೆದುಳಿನ ಗ್ರಹಿಕೆ – ನರಗಳ ಚಲನೆ,
ಗಾಳಿ ನೀರು ಬೆಳಕಿನ ಶಕ್ತಿ,
ಮಣ್ಣಿನ ಆಶ್ರಯ ಮುನ್ನಡೆಸುವುದು
ಸಾವಿನೆಡೆಗೆ ,
ಅದೇ ಜೀವನ…..
ಚರ್ಮದ ಸ್ಪರ್ಶ – ಕಣ್ಣ ನೋಟ,
ಕಿವಿಯ ಆಲಿಸುವಿಕೆ – ಮೂಗಿನ ಗ್ರಹಿಕೆ,
ಹೊರ ಹಾಕುವುದು ಬಾಯಿ
ಧ್ವನಿಯ ಮೂಲಕ.
ಅದೇ ಜೀವಾ..
ಅದೇ ನಾನು ನಾನು ನಾನು….
ಕೊನೆಗೊಂದು ದಿನ ಆ ನಾನೇ
ಆಗುವುದು ನಿರ್ಜೀವ ಶವ….
ಸೂರ್ಯ – ಚಂದ್ರರ ನಾಡಿನಲ್ಲಿ,
ಸಾಗರದ ತಟದಲ್ಲಿ,
ಭೂತಾಯಿ ಮಡಿಲಲ್ಲಿ,
ಹಗಲು – ರಾತ್ರಿಗಳ ಜೊತೆಯಲ್ಲಿ,
ನೋವು ನಲಿವುಗಳ ಭಾವದಲ್ಲಿ,
ನಿಮ್ಮೆಲ್ಲರ ಹೃದಯದಲ್ಲಿ
ಶಾಶ್ವತವಾಗಿ ನೆಲೆಯಾಗುವಾಸೆ.
ಅದೇ ಬದುಕಿನ ಸಾರ್ಥಕತೆ…..
ಯಾವುದೋ ದಾರಿ ಎಲ್ಲಿಗೋ ಪಯಣ ಈ ಬದುಕಿನಲ್ಲಿ,……….
ಹುಟ್ಟುವುದೇ ಅಪ್ಪ ಅಮ್ಮನ ರಕ್ತ – ಕರುಳ ಸಂಬಂಧದೊಂದಿಗೆ,
ಅಕ್ಕ ತಂಗಿಯರು – ಅಣ್ಣ ತಮ್ಮಂದಿರು ಜೊತೆ ಪಯಣಿಗರು,
ಪಕ್ಕದ ಮನೆಯ ಸುಮಾ ಆಂಟಿ, ಚಾಕಲೇಟ್ ಕೊಡಿಸಿದ ರವಿಮಾಮ,
ನನ್ನದೇ ವಯಸ್ಸಿನ ಪ್ರಜ್ವಲ, ಜಗಳ ಕಾಯುವ ಉಜ್ವಲ,
ಈಗಲೂ ಕಾಡುವ ಗುಮ್ಮಾ,
ಶಾಲೆಯಲ್ಲಿ ಜೊತೆಯಾದ ರಾಹುಲ್, ಮಂಜ, ಪೀಟರ್, ಸ್ವಾತಿ, ಮಲ್ಲಿಗೆ, ಪಾಶ,
ವಿದ್ಯೆ ಕಲಿಸಿದ RMV, PNK, ರೋಸಿ, ಮೇರಿ, ಕಮಲ, ವಿಮಲ ಮಿಸ್ ಗಳು,
ನನ್ನ ತುಂಟಾಟಗಳಿಗೆ ಬೆದರಿದ – ಬೆದರಿಸಿದ ಫಾತಿಮ, ಅಂಜಲಿ,
ಆಯಾ – ದೀದಿಗಳು,
ಯೌವ್ವನದ ದಿನಗಳ ಗೆಳೆಯರಾದ ರಾಬರ್ಟ್, ಹರೀಶ, ಚಂದ್ರ, ಮಚ್ಚ ಮಹೇಶ,
ಜ್ವರ ಬಂದರೆ, ಗಾಯಗಳಾದರೆ ನೆನಪಾಗುವ ಡಾಕ್ಟರ್ ಕಿರಣ್,
ಡಾಕ್ಟರ್ ಸುಷ್ಮಾ,
ವಾರದ ಕೊನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳ ಕಾಯಂ ಸಪ್ಲೈಯರ್
ಪ್ರಕೃತಿ ಡಾಬಾದ ಚಮಕ್ ಚಮಕ್ ನಂಜುಂಡ,
ನನ್ನಲ್ಲಿ ಅನೇಕ ಯೌವ್ವನದ ಕನಸುಗಳನ್ನು ಬಿತ್ತಿದ ಅಂದಿನ ಸಿನಿಮಾ ನಾಯಕ ನಾಯಕಿಯರಾದ ರಾಜ್ ಕುಮಾರ್, ಎನ್.ಟಿ. ರಾಮರಾವ್, ಎಂಜಿಆರ್, ಅಮಿತಾಬ್ ಬಚ್ಚನ್, ಕಲ್ಪನಾ, ಜಮುನಾ, ಜಯಲಲಿತಾ, ಹೇಮಮಾಲಿನಿ,
ಕೆಲಸಕ್ಕೆ ಸೇರಿದ ಕಂಪನಿಯ ಬಾಸ್ ಅಭಿರಾಜ್, ಸಹಪಾಠಿಗಳಾದ
ವತ್ಸಲ, ವಾಣಿ, ಶ್ರೀದೇವಿ, ಜೋಸೆಫ್, ವಿಕ್ರಮ್, ಕುಮಾರ್, ಮೌಲ, ಶೆಟ್ಟಿ,
ಬಾಳ ಸಂಗಾತಿಯಾದ ಕೋಮಲ,
ಅವರ ಅಪ್ಪ, ಅಮ್ಮ, ಅಣ್ಣ ತಂಗಿ,
ಮುದ್ದಾದ ನಮ್ಮ ಮಕ್ಕಳಾದ ಅಗಸ್ತ್ಯ, ಪ್ರದ್ಯುಮ್ನ, ನಿಹಾರಿಕ,
ನಮ್ಮ ಮಕ್ಕಳ ಶಾಲೆಯ ಶಿಕ್ಷಕರು, ಅವರ ಪ್ರಿನ್ಸಿಪಾಲ್ ವೆಂಕಟರಾಯರು, ಪದ್ನಾವತಮ್ಮನವರು,
ನಂತರದಲ್ಲಿ ಬಂದ ನನ್ನ ಸೊಸೆಯರಾದ ಸೋನು, ಮಿಹಿರ,
ಅಳಿಯ ಡಾಕ್ಟರ್ ಶಶಾಂಕ್,
ಮುಂಜಾನೆಯ ವಾಕಿಂಗ್ ಗೆಳೆಯರಾದ
ನಾರಾಯಣಸ್ವಾಮಿ, ಶ್ರೀಕಂಠು, ವೆಂಕಟೇಶ, ಶ್ರೀನಿವಾಸಯ್ಯ,
ಓ, ಇನ್ನು ನಮ್ಮನ್ನಾಳಿದ ಮುಖ್ಯಮಂತ್ರಿಗಳು, ಅಧಿಕಾರಿಗಳು ಎಷ್ಟೋ,
ನನ್ನನ್ನು ಕಾಡಿದ ಭ್ರಷ್ಟರು,
ವಂಚಕರು ಎಷ್ಟೋ,
ನನಗೆ ಸ್ಪೂರ್ತಿಯಾದ ಕ್ರೀಡಾಪಟುಗಳು, ವಿಜ್ಞಾನಿಗಳು, ಸಮಾಜ ಸೇವಕರು ಎಷ್ಟೋ,
ಅಬ್ಬಬ್ಬಾ…....
ಇವತ್ತಿಗೆ ನನಗೆ 80,…….
ಕಳೆದ ವರ್ಷ ಪತ್ನಿ ಹೋದಳು,
ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಎಲ್ಲಾ ದೂರದ ವಿದೇಶಗಳಲ್ಲಿ,
ಜೊತೆಗಾರರು, ಸಂಬಂಧಿಗಳು,
ಪರಿಚಿತರು ಈ ಬಾಳ ಪಯಣದಲಿ,
ಎಲ್ಲೋ, ಎಂದೋ ಯಾತ್ರೆ ಮುಗಿಸಿ ಇಳಿದು ಹೋದರು,
ನಾನೀಗ ಒಬ್ಬಂಟಿ, ಈ ಪಯಣದ ನನ್ನ ನಿಲ್ದಾಣದತ್ತ ಸಾಗುತ್ತಿರುವೆ ,
ಈ ಪಯಣದಲಿ ಸಂತೃಪ್ತ,
80 ವಸಂತಗಳ ಏಳುಬೀಳುಗಳ ಸಾಕ್ಷೀದಾರ,
ನಿಮಗಿದೋ ನನ್ನ ಆಶೀರ್ವಾದ…….
ಅಸತೋಮ ಸದ್ಗಮಯ,
ತಮಸೋಮ ಜ್ಯೋತಿರ್ಗಮಯ,
ಮೃತ್ಯೋರ್ಮ ಅಮೃತಂಗಮಯ…
ತೃಪ್ತಿಯೇ ನಿತ್ಯ ಹಬ್ಬ…
ದೀಪದಿಂದ ದೀಪವ ಹಚ್ಚಬೇಕು ಮಾನವ…..
ಅದಕ್ಕಾಗಿ……….
ಸಂಕಲ್ಪ ಯಾತ್ರೆ ಮಾನಸಿಕವಾಗಿ…..
ಹೊಸ ಎತ್ತರಕ್ಕೆ ಏರಿಸಬೇಕಿದೆ ನಮ್ಮ ಚಿಂತನೆಗಳನ್ನು……..
ವಿಷಯ ಯಾವುದೇ ಇರಲಿ,
ಅದನ್ನು ಸಮಗ್ರ ದೃಷ್ಟಿಕೋನದಿಂದ, ಸಮಷ್ಟಿ ಪ್ರಜ್ಞೆಯಿಂದ ವಿಮರ್ಶಿಸಬೇಕಿದೆ….
ಯೋಚಿಸುವ ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕಿದೆ…
ವಕೀಲಿಕೆ – ಚರ್ಚೆ ಮೀರಿ ಮಂಥನದ ಸಮಯದಲ್ಲಿ ಪ್ರಶಾಂತತೆ ಕಾಪಾಡಬೇಕಿದೆ….
ನಿರ್ಧಾರ ಮಾಡುವ ಮೊದಲು ವಿಷಯದ ಆಳಕ್ಕೆ ಇಳಿಯಬೇಕಿದೆ…..
ವಿಷಯ ಅರಿಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ…..
ಸಭ್ಯತೆ – ಸೌಜನ್ಯತೆ ಮೈಗೂಡಿಸಿಕೊಳ್ಳಬೇಕಿದೆ…
ಆಗ ಮೂಡುವ ಅರಿವಿನಿಂದ…..
ಪ್ರಕೃತಿಯ ಮಡಿಲಿನಿಂದ ಪ್ರೀತಿಯನ್ನು ಬೊಗಸೆಯಿಂದ ಮೊಗೆದು ಸ್ವಲ್ಪ ಸ್ವಲ್ಪವೇ ಹಂಚೋಣ…..
ನಮ್ಮೊಳಗಡಗಿರುವ ಅರಿಷಡ್ವರ್ಗಗಳ ಮೇಲೆ ಸ್ವಲ್ಪ ಸ್ವಲ್ಪವೇ ನಿಯಂತ್ರಣ ಸಾಧಿಸೋಣ……
ಒಟ್ಟು ಬದುಕಿನ ಘನತೆಯನ್ನು ಸ್ವಲ್ಪ ಸ್ವಲ್ಪವೇ ಎತ್ತರಕ್ಕೇರಿಸಿಕೊಳ್ಳುತ್ತಾ
ಸಾರ್ಥಕತೆಯತ್ತಾ ಸಾಗೋಣ……………
ಜ್ಞಾನವೆಂಬುದು ಮೂರ್ತ ಸ್ವರೂಪವೇ ಹೊರತು ಅಮೂರ್ತವಲ್ಲ……..
ಜ್ಞಾನ ತಿಳಿವಳಿಕೆ ಅಲ್ಲ ನಡವಳಿಕೆ…………
ಜ್ಞಾನ ನಂಬಿಕೆಯಲ್ಲ ವಾಸ್ತವ…….
ಜ್ಞಾನ ಮಾತಲ್ಲ ಕೃತಿ…….
ಜ್ಞಾನ ಭಾವನೆಯಲ್ಲ ಬದುಕು……….
ಜ್ಞಾನ ಅಕ್ಷರಗಳಲ್ಲಿ ಇಲ್ಲ ಅಂತರಂಗದಲ್ಲಿದೆ……..
ಜ್ಞಾನ ಹೇಳುವುದಲ್ಲ, ಕೇಳುವುದಲ್ಲ, ನಡೆದುಕೊಳ್ಳುವುದು…….
ಜ್ಞಾನ ನಿಂತ ನೀರಲ್ಲ ಹರಿಯುವ ನದಿ ಅರ್ಥಾತ್ ತ್ರಿಲೋಕ ಸಂಚಾರಿ……..
ಜ್ಞಾನ ಸರಿಯಾಗಿ ಉಪಯೋಗವಾಗದಿದ್ದರೆ ಅದು ಅಜ್ಞಾನವಾಗುತ್ತದೆ………
ಜ್ಞಾನದಿಂದ ನೆಮ್ಮದಿ ಸಿಗುತ್ತದೆ. ನಮ್ಮ ಮನಸ್ಸು ಶಾಂತವಾಗಿರದಿದ್ದರೆ ನಾವಿನ್ನೂ ಜ್ಞಾನವಂತರಲ್ಲ ಎಂದೇ ಭಾವಿಸಬೇಕು….
ಜ್ಞಾನ ಸ್ವತಂತ್ರ ಚಿಂತನೆಯೇ ಹೊರತು ಎರವಲು ಪಡೆಯಲುಬಾರದು……
ಜ್ಞಾನ ಮೇಲ್ಮುಖವಾಗಿ ಬೆಳೆಯುತ್ತದೆಯೇ ಹೊರತು ಕೆಳಕ್ಕೆ ಇಳಿಯುವುದಿಲ್ಲ…….
ಜ್ಞಾನದ ಅರ್ಥ ಮತ್ತು ವ್ಯಾಪ್ತಿ ಊಹೆಗೂ ನಿಲುಕುವುದಿಲ್ಲ……….
ಜ್ಞಾನದಲ್ಲಿ ವಿನಯವಿರುತ್ತದೆಯೇ ಹೊರತು ಅಹಂಕಾರ ಬೆಳೆಯುವುದೇ ಇಲ್ಲ…………..
ಜ್ಞಾನ ಸಹಜ ಸ್ವಾಭಾವಿಕವೇ ಹೊರತು ಅದನ್ನು ಮುಖವಾಡವಾಗಿಸಲು ಸಾಧ್ಯವಿಲ್ಲ………….
ಹಾಗಾದರೆ ಜ್ಞಾನವೆಂಬ ನಾನು ಯಾರು ?
ಹುಡುಕಾಡುತ್ತಲೇ ಇದ್ದೇನೆ…….
ನೀವು ಬನ್ನಿ ನನ್ನೊಂದಿಗೆ,
ಜ್ಞಾನದ ಹುಡುಕಾಟದಲ್ಲಿ ಜೊತೆಯಾಗೋಣ………..
” ಕಳೆದುಕೊಳ್ಳುವುದು ಏನೂ ಇಲ್ಲ
ಪಡೆದುಕೊಳ್ಳುವುದೇ ಎಲ್ಲವೂ……… “
” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ….. “
ಶುಭಾಶಯಗಳು.
ಎಲ್ಲರಿಗೂ ಒಳ್ಳೆಯದಾಗಲಿ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
ಬಿಗ್ ಬಾಸ್ …
ಹುಚ್ಚರ ಸಂತೆಯಲ್ಲಿ ಬಿಗ್ ಬಾಸ್ ಎಂಬ ಪರಿಕಲ್ಪನೆ ಸೋತು ಮಾನವೀಯ ಮೌಲ್ಯಗಳ,
ನಾಗರಿಕ ಪ್ರಜ್ಞೆಯ ಪರಿಕಲ್ಪನೆ ಗೆದ್ದು, ಪ್ರಬುದ್ಧ ಸಮಾಜ ನಿರ್ಮಾಣವಾಗಲಿ ಎಂದು ಆಶಿಸುತ್ತಿರುವ, ನಾವೊಂದಿಷ್ಟು ಹುಚ್ಚರು…..
ಬಿಗ್ ಬಾಸ್ ಸೋಲಲಿ,
ಪ್ರಬುದ್ಧತೆ ಗೆಲ್ಲಲಿ……
