ಉಡುಪಿ ಶ್ರೀ ಶಿರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಸಂಬಂಧ ಉಡುಪಿ ಸುತ್ತ ಮುತ್ತಲಿನ ಪರಿಸರದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲು ಉಡುಪಿ ಜಿಲ್ಲಾಧಿಕಾರಿ ಆದೇಶವನ್ನು ಹೊರಡಿಸಿದ್ದಾರೆ.
ದಿನಾಂಕ:17-01-2026 ಮತ್ತು 18-01-2026 ರಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಶಿರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದರವರ ಪರ್ಯಾಯ ಉತ್ಸವವು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಅಷ್ಟಮಠಗಳ ಯತಿಗಳು ಅಲ್ಲದೇ ಗಣ್ಯ, ಅತೀ ಗಣ್ಯ ವ್ಯಕ್ತಿಗಳು, ಇತರ ಮಠಾಧೀಶರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು/ಭಕ್ತಾದಿಗಳು ಭಾಗವಹಿಸುವವರಿದ್ದು, ಆ ಪ್ರಯುಕ್ತ ದಿನಾಂಕ:17-01-2026 ರಂದು ಪರ್ಯಾಯ ಮುನ್ನ ದಿನ 7:00 ಗಂಟೆಯ ಬಳಿಕ ಉಡುಪಿ ನಗರದ ಹೃದಯ ಭಾಗದ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕ ಸಾಂಸ್ಕೃತಿಕ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಬಾರ್ ಮತ್ತು ವೈನ್‌ಶಾಪ್‌ಗಳು ತೆರೆದಿದ್ದಲ್ಲಿ, ಮದ್ಯಪಾನಾಸಕ್ತರು ಮದ್ಯಪಾನಮಾಡಿ ಗಲಭೆಮಾಡುವ ಸಾಧ್ಯತೆ ಇದ್ದು, ಸದರಿ ಸಮಯ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನಾಂಕ:17-01-2026 ರಂದು ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ:18-01-2026 ರಂದು ಸಂಜೆ 06.00 ಗಂಟೆಯ ತನಕ ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಹಾಗೂ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಉದ್ಯಾವರ, ಕೊರಂಗ್ರಪಾಡಿ, ಅಲೆವೂರು, ಹಿರೇಬೆಟ್ಟು, ಅಂಬಲಪಾಡಿ, ಕುತ್ಪಾಡಿ, ಕಡೆಕಾರು, ಕಿದಿಯೂರು, ಮೂಡುತೋನ್ಸೆ ಹಾಗೂ ಪಡುತೋನ್ಸೆ ಗ್ರಾಮ ವ್ಯಾಪ್ತಿಯಲ್ಲಿ (10-15 ಕಿ.ಮೀ) ತನಕ ಮದ್ಯಪಾನ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ರವರು ಆದೇಶ ಹೊರಡಿಸಿದ್ದಾರೆ.
