ಸಿನಿಮಾ ಹಾಡು ಮತ್ತೆ ಮತ್ತೆ ನೆನಪಾಗುತ್ತಿದೆ.
ಗಡ ಗಡ ನಡಗಿಸುತ್ತಿರುವ ಚಳಿ…….
ಈ ಬಾರಿ ಚಳಿ ಸ್ವಲ್ಪ ಭಯಂಕರವೇ ಆಗಿದೆ. ಸಾಮಾನ್ಯ ಅನುಭವದಲ್ಲಿ ಹೇಳುವುದಾದರೆ, ಚಳಿಯಲ್ಲೂ ಸಾಕಷ್ಟು ವಿಧಗಳಿವೆ. ಹಿತವಾದ ಚಳಿ, ಮೈ ಕೊರೆಯುವ ಚಳಿ, ಗಡಗಡ ನಡುಗಿಸುವ ಚಳಿ, ಚಳಿಯೊಂದಿಗೆ ಶೀತ ಗಾಳಿ, ಧೂಳು ಸೇರಿ ಪತರುಗುಟ್ಟಿಸುವ ಚಳಿ, ಅತ್ಯಂತ ಕೆಟ್ಟ ಚಳಿ ಹೀಗೆ ಇನ್ನೂ ವಿವಿಧ ರೀತಿಯ ಅನುಭವ ನೀಡುವ ಚಳಿಯನ್ನು ನಾವು ಕಂಡಿದ್ದೇವೆ. ಸಮಶೀತೋಷ್ಣವಲಯದಲ್ಲಿರುವ ನಮಗೆ ಹೆಚ್ಚು ಕಡಿಮೆ ಯಾವುದೇ ಅತಿರೇಕಗಳಿಲ್ಲದ ಸಾಮಾನ್ಯ ವಾತಾವರಣ ನಮ್ಮದು.
ಆದರೆ ಇತ್ತೀಚೆಗೆ ನಮ್ಮಲ್ಲಿಯೂ ಬೇಸಿಗೆ, ಚಳಿ, ಮಳೆಗಾಲದಲ್ಲಿ ಸಾಕಷ್ಟು ವ್ಯತ್ಯಾಸಗಳು, ಏರಿಳಿತಗಳು ಕಂಡುಬರುತ್ತಿದೆ. ಬಹುಶಃ ಪ್ರಕೃತಿಯ ಮೇಲಿನ ಒತ್ತಡ ಹೆಚ್ಚಾಗಿರಬಹುದೋ ಏನೋ.
ಮೊದಲು ಕೇವಲ ಶುದ್ಧ ಚಳಿ, ಗಾಳಿ, ಮಳೆ, ಬೇಸಿಗೆ ಮಾತ್ರ ಇದ್ದರೆ ಈಗೀಗ ಗಾಳಿಗೆ ವಿಷಯುಕ್ತ ಧೂಳು ಸೇರುತ್ತಿದೆ, ಸೆಖೆಗೆ ಕೃತಕ ಉಷ್ಣಾಂಶ ಸೇರುತ್ತಿದೆ, ಮಳೆಗೆ ವಿಚಿತ್ರವಾಗಿ ಮೇಘ ಸ್ಫೋಟಗಳಂತ ಒಂದೇ ಜಾಗದಲ್ಲಿ ಕೇಂದ್ರೀಕೃತವಾದ ಮೋಡಗಳ ಒತ್ತಡವಾಗುತ್ತಿದೆ ಮತ್ತು ಮಳೆಯ ನಂತರ ಸರಾಗ ನೀರು ಹರಿಯಲು ಸಾಧ್ಯವಾಗುತ್ತಿಲ್ಲ, ಹಾಗೆಯೇ ಚಳಿಗೆ ಹೊಗೆ, ಮಲಿನ ಧೂಳಿನ ಕಣ, ಮಂಜು ಎಲ್ಲಾ ಸೇರಿ ವಿಷಯುಕ್ತವಾಗುತ್ತಿದೆ. ಆ ಕಾರಣದಿಂದಲೇ ಈ ಬಾರಿಯ ಚಳಿಗಾಲದಲ್ಲಿ ಗಂಟಲು ನೋವು, ಶ್ವಾಸಕೋಶದ ತೊಂದರೆ, ಉಸಿರಾಟದ ಸಮಸ್ಯೆ, ಮೂಗಿನ ಉರಿ, ಜ್ವರ, ಶೀತ ಕೆಮ್ಮು ಹೆಚ್ಚಾಗುತ್ತಿರಬಹುದು.
ಮೊದಲೇ ದುರ್ಬಲವಾಗುತ್ತಿರುವ ದೇಹದ ಮೇಲೆ ಈ ವಾತಾವರಣ ಬದಲಾವಣೆಯ ಒತ್ತಡವೂ ಸೇರಿ ಜನರು ಕಂಪಿಸುವಂತಾಗಿದೆ. ಅದರಲ್ಲೂ ಶ್ರಮಜೀವಿಗಳಲ್ಲದ, ಸ್ವಲ್ಪಮಟ್ಟಿಗೆ ವಾತಾನುಕೂಲ ವಾತಾವರಣದಲ್ಲಿ ಜೀವನಶೈಲಿ ರೂಪಿಸಿಕೊಂಡಿರುವವರಿಗೆ ದೈಹಿಕ ಸಮಸ್ಯೆಗಳು ಸ್ವಲ್ಪ ಜಾಸ್ತಿಯಾಗಿದೆ.
ಇದೀಗ ವ್ಯಕ್ತಿಗತವಾಗಿ ಮತ್ತು ಇಡೀ ಸಮಾಜ ತನ್ನ ಜೀವನ ಶೈಲಿಯನ್ನು ಪುನರ್ರೂಪಿಸಿಕೊಳ್ಳಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಉಂಟಾಗಿದೆ. ಡಾರ್ವಿನ್ ಅವರ ಸಾರ್ವಕಾಲಿಕ ಸತ್ಯ ಮಾತಾದ Survival of the fittest ಅಂದರೆ ಬಲಿಷ್ಠರ ಉಳಿವು ಎಂಬ ನಿಯಮದಂತೆ ನಾವೀಗ ವಾತಾವರಣಕ್ಕೆ ತಕ್ಕಂತೆ ಬಲಿಷ್ಠರಾಗಬೇಕಿದೆ. ಇಲ್ಲದಿದ್ದರೆ ನಮ್ಮ ಅಸ್ತಿತ್ವಕ್ಕೆ ಸಂಚಕಾರ ಮೂಡಬಹುದು.
ನಮ್ಮ ದೇಹ ಮತ್ತು ಮನಸ್ಸನ್ನು ಎಲ್ಲ ಋತುಮಾನಗಳಿಗೆ ಹೊಂದುವಂತೆ ಗಟ್ಟಿಗಳಿಸಿಕೊಳ್ಳಬೇಕಾದ ಅಗತ್ಯ ಸಂದರ್ಭದಲ್ಲಿ ನಾವಿದ್ದೇವೆ. ಅಂದರೆ ನಮ್ಮ ಬಾಲ್ಯದಿಂದ ಮುಪ್ಪಿನವರೆಗೆ ನಾವು ಅನುಸರಿಸಬೇಕಾದ ಜೀವನ ಶೈಲಿಯಲ್ಲಿ ಮುಖ್ಯವಾಗಿ ದೇಹದಂಡನೆ, ಆಹಾರ, ವಿಶ್ರಾಂತಿ, ಮಾನಸಿಕ ಸ್ಥಿತಿ, ಪ್ರಾಕೃತಿಕ ಶುದ್ಧತೆ, ಆಡಳಿತಾತ್ಮಕ ಸ್ವಚ್ಛತೆ, ಒತ್ತಡವಿಲ್ಲದ ಸಹಜ ಜೀವನ ಕ್ರಮ ಈ ಎಲ್ಲವನ್ನು ನಮ್ಮ ಜೀವನಶೈಲಿಯಲ್ಲಿ ಆರೋಗ್ಯಪೂರ್ಣವಾಗಿ ಬದಲಾಯಿಸಿಕೊಳ್ಳಬೇಕಿದೆ. ಕೇವಲ ಹಣಕ್ಕಾಗಿ, ಅಧಿಕಾರಕ್ಕಾಗಿ, ಅಂತಸ್ತಿಗಾಗಿ, ಮನೆಗಾಗಿ, ವಾಹನಕ್ಕಾಗಿ ಎಲ್ಲಾ ಸಮಯವನ್ನು ಮೀಸಲಿಟ್ಟು, ಸ್ಪರ್ಧೆ, ವೇಗ ಇತ್ಯಾದಿಗಳ ನಡುವೆ ನಮ್ಮ ದೇಹವನ್ನು ಕಡೆಗಣಿಸಿದರೆ ಪ್ರಕೃತಿಯ ಈ ಒತ್ತಡದಲ್ಲಿ ನಾವು ಕಳೆದು ಹೋಗುವುದು ನಿಶ್ಚಿತ.
ಏಕೆಂದರೆ ಈ ಭ್ರಷ್ಟಾಚಾರ, ಈ ದುರಾಸೆ, ಈ ರಾಸಾಯನಿಕಯುಕ್ತ ಆಹಾರ, ಈ ಟ್ರಾಫಿಕ್, ಈ ಹೊಗೆ, ಈ ಧೂಳು, ಈ ಅಸಹನೆ, ಈ ಅಸಹಿಷ್ಣತೆ, ಈ ಹಿಂಸೆ, ಈ ಅಪಘಾತಗಳು, ಈ ಆತ್ಮಹತ್ಯೆಗಳು, ಈ ಅಪರಾಧಗಳು ಇವೆಲ್ಲವನ್ನೂ ನೋಡಿ ನೋಡಿ ಮನಸ್ಸುಕ್ಷೋಭೆಗೊಂಡಿದೆ. ದೇಹ ನಿರುತ್ಸಾಹಗೊಂಡಿದೆ.
ಆದ್ದರಿಂದ ನಾವೆಲ್ಲರೂ ಈ ಚಳಿಗಾಲದ ಗಡಗಡ ಚಳಿಯ ವಾತಾವರಣವನ್ನು ಒಂದು ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಿ ಸರಳ, ಸಮೃದ್ಧ, ಸೌಹಾರ್ದ, ಸಮತೂಕದ ಸಹಕಾರಿ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕಿದೆ. ಹಣ ಕೇಂದ್ರಿತ ಸಮಾಜದ ಬದಲಿಗೆ ಶುದ್ಧ ಆಹಾರ, ನೀರು, ಗಾಳಿ, ಮನಸ್ಸು, ಸಂಬಂಧಗಳು, ಮಾನವೀಯ ಮೌಲ್ಯಗಳ ಸಮಾಜವನ್ನು ನಿರ್ಮಿಸಿಕೊಳ್ಳಬೇಕಿದೆ.
ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶ, ಜನಸಂಖ್ಯೆಯಲ್ಲಿ ವಿಶ್ವದ ಮೊದಲನೇ ಸ್ಥಾನದಲ್ಲಿರುವ, ವೈವಿಧ್ಯಮಯ ಜೀವನ ಶೈಲಿಯ ನಾವುಗಳು ಹೆಚ್ಚು ಜವಾಬ್ದಾರಿಯನ್ನು ಪ್ರದರ್ಶಿಸಬೇಕಿದೆ.
ಪರಿಚಿತ ಕೆಲವು ವೈದ್ಯರುಗಳ ಬಳಿ ಮಾತನಾಡಿದಾಗ, ಹೌದು, ಈ ಬಾರಿ ಜನರ ಆರೋಗ್ಯ ಸಮಸ್ಯೆ ಚಳಿಗಾಲದಲ್ಲಿ ತುಂಬಾ ಹೆಚ್ಚಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯೂ ಅಧಿಕವಾಗಿದೆ. ವಾತಾವರಣದ ನೈರ್ಮಲ್ಯ ಹಾಗೂ ಪ್ರಕೃತಿಯ ಅಸಹಜ ನಡವಳಿಕೆಯನ್ನು ಅರಗಿಸಿಕೊಳ್ಳುವ ಶಕ್ತಿ ನಮ್ಮ ಜನರಿಗೆ ಸಾಧ್ಯವಾಗುತ್ತಿಲ್ಲ. ಈ ಸಂಘರ್ಷದಲ್ಲಿ ಜನರು ದುರ್ಬಲಗೊಳ್ಳುತ್ತಿದ್ದಾರೆ. ಆದ್ದರಿಂದ ಸದೃಢ ಆರೋಗ್ಯವಂತ ದೇಹ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಅದರ ಆಧಾರದ ಮೇಲೆ ಮತ್ತು ನಮಗೂ ಆದ ಚಳಿಯ ಅನುಭವದ ಕೆಲವು ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನೂ ಮೀರಿ ಇನ್ನೂ ಅನೇಕ ಸೂಕ್ಷ್ಮ ಕಾರಣಗಳು ಇರಬಹುದು. ಒಟ್ಟಾರೆ ದೇಹ ಮತ್ತು ಮನಸ್ಸಿನ ದೃಢತೆ ಕಾಪಾಡಿಕೊಳ್ಳುವ ಅನಿವಾರ್ಯತೆಯಂತೂ ಇದೆ. ಅದು ಮಾತ್ರ ಅತ್ಯಂತ ಸ್ಪಷ್ಟ. ದಯವಿಟ್ಟು ಜಾಗೃತಗೊಳ್ಳಿ, ಎಚ್ಚರಿಕೆವಹಿಸಿ. ಧನ್ಯವಾದಗಳು,
ನಲ್ಬೆಳಗು……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
