ಬ್ರಹ್ಮಾವರ: ದಿನಾಂಕ:30-12-2025(ಹಾಯ್ ಉಡುಪಿ ನ್ಯೂಸ್) ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಕೆಲಸ ಕೊಡಿಸದೆ ವಂಚಿಸಿದ್ದಾರೆ.ಇದೀಗ ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ವ್ಯಕ್ತಿ ಯೋರ್ವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಬ್ರಹ್ಮಾವರ ,ಕಚ್ಚೂರು ಗ್ರಾಮದ, ಬೈಲು ಮನೆ ನಿವಾಸಿ ಪುಟ್ಟಣ್ಣ ಬಾರಕೇರ ಎಂಬವರು ಕಚ್ಚೂರು ಗ್ರಾಮದ, ಬಾರ್ಕೂರು ಎಂಬಲ್ಲಿ ಸೇವಾಸಿಂಧುವಿನಲ್ಲಿ ಕೆಲಸ ಮಾಡಿಕೊಂಡಿದ್ದು, ಅವರು ತನ್ನ ತಂಗಿಗೆ ಸರಕಾರಿ ಇಲಾಖೆಯಲ್ಲಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದಾಗ, ಆರೋಪಿ ಚಂದ್ರಶೇಖರ್ ಎಮ್. ಅಮೀನ್ ಎಂಬವರು ಪುಟ್ಟಣ್ಣ ಬಾರಕೇರ ಅವರ ಕಛೇರಿಗೆ ಬಂದು ಪರಿಚಯ ಮಾಡಿಕೊಂಡು ಅವರ ಹತ್ತಿರ ತನಗೆ ಶಾಸಕರು ಹಾಗೂ ಸಚಿವರ ಪರಿಚಯವಿದ್ದು ನಿಮ್ಮ ತಂಗಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ರೂ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು .
ಪುಟ್ಟಣ್ಣ ಬಾರಕೇರ ಅವರು ಆರೋಪಿ ಚಂದ್ರಶೇಖರ್ ನ ಮಾತನ್ನು ನಂಬಿ ದಿನಾಂಕ 09.10.2023 ರಂದು ರೂ 80,000/- ಹಣವನ್ನು ಹಾಗೂ ದಿನಾಂಕ 11.10.2023 ರಂದು ರೂ 40,000/- ಹಣ ಒಟ್ಟು ರೂ 1,25,000/- ಹಣವನ್ನು ಆರೋಪಿತನ SBI ಬ್ಯಾಂಕ್ ಖಾತೆಗೆ ಜಮೆ ಮಾಡಿರುತ್ತಾರೆ. ಆದರೆ ಹಣವನ್ನು ಪಡಕೊಂಡ ಆರೋಪಿ ಚಂದ್ರಶೇಖರ್ ಎಮ್ ಅಮೀನ್ ಇದುವರೆಗೂ ಪುಟ್ಟಣ್ಣ ಬಾರಕೇರ ಅವರ ತಂಗಿಗೆ ಸರಕಾರಿ ಉದ್ಯೋಗದ ನೇಮಕಾತಿಯನ್ನು ಕೊಡಿಸದೇ ವಂಚಿಸಿದ್ದು, ಈ ಬಗ್ಗೆ ಪುಟ್ಟಣ್ಣ ರವರು ಹಣವನ್ನು ವಾಪಾಸ್ಸು ನೀಡುವಂತೆ ಕೇಳಿದ್ದಕ್ಕೆ, ಆರೋಪಿಯು ಕೋಪಗೊಂಡು ಅವಾಚ್ಯವಾಗಿ ನಿಂದಿಸಿ ಹಣವನ್ನು ವಾಪಾಸ್ಸು ಕೊಡುವುದಿಲ್ಲ, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಖಾಸಗಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ U/S 316(2) 318(2), 318(4), 319(1), 319(2), 351(2), 352 ಬಿಎನ್‌ಎಸ್-2023 ರಂತೆ ಪ್ರಕರಣ ದಾಖಲಾಗಿದೆ.
