ದಿನಾಂಕ:20-12-2025(ಹಾಯ್ ಉಡುಪಿ ನ್ಯೂಸ್)
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ರೆಸಾರ್ಟ್ನಲ್ಲಿ ಯಾವುದೇ ದಾಖಲೆಗಳಿಲ್ಲದಿರುವ ಅಕ್ರಮ ವಿದೇಶಿಗರಿಗೆ ಕೆಲಸ ನೀಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರದ ಸರಕಾರಿ ಆಸ್ಪತ್ರೆಗೆ ಒಬ್ಬರು ವಿದೇಶಿ ಮಹಿಳೆ ಗರ್ಭಿಣಿ ಯಾಗಿರುವ ಬಗ್ಗೆ ಚಿಕಿತ್ಸೆಗೆಂದು ಬಂದಿದ್ದು, ಆ ವೇಳೆ ಅಲ್ಲಿನ ವೈದ್ಯರು ಆಕೆಯೊಂದಿಗೆ ಆಧಾರ್ ದಾಖಲಾತಿಗಳನ್ನು ಕೇಳಿದ್ದರು. ಆದರೆ ಮಹಿಳೆ ಅವರಲ್ಲಿ ತಾನು ಬೇರೆ ದೇಶದವಳು ತನ್ನಲ್ಲಿ ಯಾವುದೇ ದಾಖಲಾತಿ ಹೊಂದಿರದ ಬಗ್ಗೆ ತಿಳಿಸಿದ್ದು, ತಾನು ಕೂರಾಡಿ ಸಂಕಮ್ಮ ತಾಯಿ ರೆಸಾರ್ಟ್ ನಲ್ಲಿ ಕೆಲಸಕ್ಕಿದ್ದೇನೆ ಎಂದು ಹಿಂದಿ ಭಾಷೆಯಲ್ಲಿ ಹೇಳಿ ಹೊರಟು ಹೋಗಿದ್ದು ,ಈ ಬಗ್ಗೆ ಸರಕಾರಿ ಆಸ್ಪತ್ರೆಯವರು ಅನುಮಾನಗೊಂಡು ಸ್ಥಳೀಯ ಬ್ರಹ್ಮಾವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು .
ಮಾಹಿತಿಯಂತೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ, ರೀಪಕ್ ದಮಾಯಿ(೨೮), ಸುನಿತ ದಮಾಯಿ(೨೭), ಉರ್ಮಿಳ(೧೯), ಕೈಲಾಶ್ ದಮಾಯಿ(೧೮) ಕಪಿಲ್ ದಮಾಯಿ(೧೯), ಸುನಿತ ದಮಾಯಿ(೨೧) ಹಾಗೂ ೩ ಮಂದಿ ಸಣ್ಣ ಮಕ್ಕಳು, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿಗೆ ಸೇರಿದ ಹನೆಹಳ್ಳಿ ಗ್ರಾಮದ ಕೂರಾಡಿ ಸಂಕಮ್ಮ ತಾಯಿ ರೆಸಾರ್ಟ್ನಲ್ಲಿ ಅಕ್ರಮವಾಗಿ ನೆಲೆಸಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ಇವರು ಯಾರೂ ಭಾರತೀಯ ರಾಷ್ಟ್ರೀಯತೆಯನ್ನು ಹೊಂದದೇ ಇದ್ದು, ಯಾವ ದೇಶದವರು ಎಂಬುದಕ್ಕೆ ಇವರಲ್ಲಿ ಯಾವುದೇ ದಾಖಲೆಗಳು ಇಲ್ಲವಾಗಿದ್ದು ,ಇವರು ವಿಚಾರಣೆ ವೇಳೆ ನೇಪಾಳ ದಿಂದ ಬಂದಿರುವುದಾಗಿ ತಿಳಿಸಿದ್ದರೂ ಕೂಡ ದಾಖಲೆಗಳು ಇಲ್ಲ.ಯಾವುದೋ ರಾಷ್ಟ್ರ ದ ಪ್ರಜೆಗಳಾಗಿದ್ದು, ಅವರಲ್ಲಿ ಯಾವುದೇ ಐಡೆಂಟಿಟಿ ಕಾರ್ಡ್, ಜನ್ಮ ದಾಖಲೆ, ಪಾಸ್‌ಪೋರ್ಟ್, ಪ್ರಯಾಣ ದಾಖಲೆ ಹಾಗೂ ವಿಸಾವನ್ನು ಹೊಂದದೇ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿರುವ ವಿದೇಶಿಗರಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಯಾವುದೇ ದೇಶದ ಪ್ರಜೆಗಳು ಅಕ್ರಮವಾಗಿ ದೇಶದಲ್ಲಿ ವಾಸಿಸುವುದು ದೇಶದ ಆಂತರಿಕ ಭದ್ರತೆಗೆ ಮಾರಕವಾಗುವ ಸಾಧ್ಯತೆ ಇರುವುದರಿಂದ, ಇಂತಹವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ರೆಸಾರ್ಟ್/ಲಾಡ್ಜ್ ಗಳು ಯಾವುದೇ ಮಾಹಿತಿಗಳಿಲ್ಲದ ವ್ಯಕ್ತಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧವಾಗಿದೆ. ಅಂತಹ ರೆಸಾರ್ಟ್/ಲಾಡ್ಜ್ ಗಳ ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ಅವರು ತಿಳಿಸಿದ್ದಾರೆ.
ರೆಸಾರ್ಟ್/ಲಾಡ್ಜ್ ಗಳಲ್ಲಿ ಯಾವುದೇ ದೇಶದ ಪ್ರಜೆಗಳು ಬಂದಲ್ಲಿ ಅವರಿಂದ ಇ ಫಾರ್ಮ್ ಪಡೆದು ಜಿಲ್ಲಾ ಪೊಲೀಸ್ ಕಚೇರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಯಾವುದೇ ದೇಶದ ಪ್ರಜೆ ಬಂದಿದ್ದು, ಅವರಲ್ಲಿ ಸಮರ್ಪಕ ದಾಖಾಲಾತಿ ಇಲ್ಲದೇ ಇದ್ದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಮತ್ತು ಜಿಲ್ಲಾ ಪೊಲೀಸ್ ಕಚೇರಿಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ರೆಸಾರ್ಟ್/ಲಾಡ್ಜ್ ಗಳಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವಂತಹ ರೆಸಾರ್ಟ್/ಲಾಡ್ಜ್ ಗಳ ಮ್ಯಾನೇಜರ್ ಹಾಗೂ ಮಾಲಕರ ವಿರುದ್ದ ಪ್ರಕರಣ ದಾಖಲಿಸಲಾಗುವುದು. ಆದುದರಿಂದ ಜಿಲ್ಲೆಯ ಯಾವುದೇ ರೆಸಾರ್ಟ್/ಲಾಡ್ಜ್ ಗಳಲ್ಲಿ ಯಾವುದೇ ರೀತಿಯ ಅನೈತಿಕ/ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಉಡುಪಿ ಜಿಲ್ಲೆಯಲ್ಲಿ ರೆಸಾರ್ಟ್/ಲಾಡ್ಜ್ ಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ಎಚ್ಚರಿಕೆ ನೀಡಿದ್ದಾರೆ.
