ಉಡುಪಿ: ದಿನಾಂಕ:20-12-2025(ಹಾಯ್ ಉಡುಪಿ ನ್ಯೂಸ್) ಜಿಲ್ಲಾಧಿಕಾರಿ ಕಚೇರಿಯಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು. ಸಿದ್ಧ ಕಾಂಕ್ರೀಟ್ ಮಿಕ್ಸಿಂಗ್ ಸಾಗಾಣಿಕೆ ಮಾಡುವ ವಾಹನಗಳು ಓವರ್ ಲೋಡ್‌ನಿಂದಾಗಿ ಕಾಂಕ್ರೀಟ್ ರಸ್ತೆಯ ಮೇಲೆ ಎಲ್ಲೆಡೆ ಬೀಳುವುದರಿಂದ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುವುದರ ಜೊತೆಗೆ ಅಪಘಾತಗಳು ಆಗುತ್ತಿವೆ. ಅಂತಹ ವಾಹನಗಳಿಗೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಬೇಕು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕೆಲವು ಬಸ್‌ಗಳು ಬಸ್ ನಿಲ್ದಾಣವನ್ನು ಹೊರತುಪಡಿಸಿ, ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿರುವ ಬಗ್ಗೆ ಕ್ರಮ ಜರುಗಿಸಿ ಪ್ರತಿಯೊಂದು ಬಸ್‌ಗಳಿಗೂ ಸಹ ಡೋರ್‌ಗಳನ್ನು ಅಳವಡಿಸಲು ಕ್ರಮವಹಿಸಲು ಸೂಚಿಸಿದರು.
ಈಗಾಗಲೇ ಜಿಲ್ಲೆಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸುವ 18 ಬ್ಲಾಕ್ ಸ್ಪಾಟ್‌ಗಳ ಪ್ರದೇಶಗಳನ್ನು ಗುರುತಿಸಿದ್ದು, ಈ ಸ್ಥಳಗಳನ್ನು ಪರಿಶೀಲಿಸಿ ವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಜಾಗಗಳನ್ನು ಗುರುತಿಸಿ, ಸಾರ್ವಜನಿಕ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿ, ರಸ್ತೆ ಬದಿಯಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ತೆರವುಗೊಳಿಸಲು ಸೂಚಿಸಿದರು.
