ದಿನಾಂಕ:17-12-2025(ಹಾಯ್ ಉಡುಪಿ ನ್ಯೂಸ್)
ಬ್ರಹ್ಮಾವರ:ಬುಧವಾರ ಬ್ರಹ್ಮಾವರ ಪೋಲಿಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ ಉಡುಪಿ ಜಿಲ್ಲಾ ಬಿಲ್ಲವ ಯುವವೇದಿಕೆಯು ಅಕ್ಷತಾ ಪೂಜಾರಿ ಮೇಲೆ ದೌರ್ಜನ್ಯ ಎಸಗಿದ ಆರೋಪಿ ಪೋಲಿಸರ ವಿರುದ್ದ ಎಫ್‌ಐಆರ್ ದಾಖಲಿಸಿ ಕರ್ತವ್ಯದಿಂದ ಅಮಾನತುಗೊಳಿಸುವಂತೆ ಆಗ್ರಹಿಸಿದರು.
ಬಿಲ್ಲವ ಯುವವೇದಿಕೆಯ ನೇತೃತ್ವದಲ್ಲಿ ನೂರಾರು ಜನರು ಬ್ರಹ್ಮಾವರದ ನಾರಾಯಣಗುರು ಸಭಾಭವನದಿಂದ ಬ್ರಹ್ಮಾವರ ಪೋಲಿಸ್ ಠಾಣೆಯವರೆಗೆ ಮೆರವಣಿಗೆಯಲ್ಲಿ ಆಗಮಿಸಿ ಠಾಣೆಯ ಎದುರು ಜಮಾಯಿಸಿದ್ದರು. ಪ್ರತಿಭಟನಾಕಾರರು ಅಕ್ಷತಾ ಪೂಜಾರಿ ನೀಡಿರುವ ಹೇಳಿಕೆಯಂತೆ ಪೋಲಿಸರು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ ಮಾತನಾಡಿ, ಅಕ್ಷತಾ ಪೂಜಾರಿ ನೀಡಿದ ದೂರಿನಂತೆ ಎಫ್ಐಆರ್ ದಾಖಲಿಸಬೇಕು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರು ಬೆಳಿಗ್ಗೆ 4 ಗಂಟೆಗೆ ಮನೆಗೆ ಹೋಗಿರುವುದು ಅಕ್ರಮ. ಅಕ್ಷತಾ ಮನೆಗೆ ಹೋಗಿ ದೌರ್ಜನ್ಯ ಎಸಗಿದ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು.
ಅಕ್ಷತಾಳಿಗೆ ಪೋಲಿಸರಿಂದ ದೌರ್ಜನ್ಯ ಆಗಿದ್ದರೆ, ಉಡುಪಿ ಜಿಲ್ಲಾ ಪೋಲಿಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಲು ಮನವಿ ಮಾಡಿದರು. ಈ ಪ್ರಾಧಿಕಾರದ ಮೂಲಕ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸಂತ್ರಸ್ತೆಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಅಕ್ಷತಾ ನೀಡಿದ ಹೇಳಿಕೆಯಂತೆ ಠಾಣೆಯಲ್ಲಿ ದೂರು ದಾಖಲಿಸಬೇಕೆಂದು ಪಟ್ಟು ಹಿಡಿದರು.
ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಸ್ಥಳಕ್ಕೆ ಆಗಮಿಸಿ ಅಕ್ಷತಾ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವ ಭರವಸೆ ನೀಡಿದರು . ದೂರು ದಾಖಲಿಸಿದ ಬಳಿಕ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಕಿರಣ್ ಕುಮಾರ್ ಬೈಲೂರು, ಬಿಎನ್ ಶಂಕರ್ ಪೂಜಾರಿ, ಶಿವಕುಮಾರ್ ಅಂಬಲಪಾಡಿ, ಶಿವಾಜಿ ಸುವರ್ಣ, ಸುನೀಲ್ ಬಂಗೇರಾ, ದಿನಕರ್ ಹೇರೂರು, ಪ್ರಭಾಕರ್ ಪೂಜಾರಿ, ಪೃಥ್ವಿರಾಜ್ ಹೆಗ್ಡೆ, ಪ್ರಸಾದ್ ರಾಜ್ ಕಾಂಚನ್ ಉಪಸ್ಥಿತರಿದ್ದರು.
