ಬ್ರಹ್ಮಾವರ: ದಿನಾಂಕ: 12/12/2025 (ಹಾಯ್ ಉಡುಪಿ ನ್ಯೂಸ್) ವಾರಂಬಳ್ಳಿ ಗ್ರಾಮದ ಸಂಜೀವ ಬಾರ್ & ರೆಸ್ಟೋರೆಂಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಅಶೋಕ್ ಕೆ.ಎಮ್ ಅವರು ದಿನಾಂಕ:10-12-2025 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಠಾಣಾ ಸರಹದ್ದಿನ ವಾರಂಬಳ್ಳಿ ಗ್ರಾಮದ ಸಂಜೀವ ಬಾರ್ & ರೆಸ್ಟೋರೆಂಟ್ ಎದುರು ಇರುವ ಹಣ್ಣಿನ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಅವರು ಸ್ಥಳಕ್ಕೆ ಹೋಗಿ ಮರೆಯಲ್ಲಿ ನೋಡಿದಾಗ ಆರೋಪಿ ಬ್ರಹ್ಮಾವರ,ವಾರಂಬಳ್ಳಿ ನಿವಾಸಿ ದಾಮೋದರ ಪೂಜಾರಿ (42) ಎಂಬಾತ ರಸ್ತೆಯಲ್ಲಿ ಹೋಗುತ್ತಿದ್ದ ಜನರನ್ನು ಕೂಗಿ ಕರೆದು 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಹೇಳಿ ಜನರಿಂದ ಹಣವನ್ನು ಸಂಗ್ರಹಿಸಿ ಚೀಟಿಯಲ್ಲಿ ಬರೆಯುತ್ತಿದ್ದಾಗ ಅಶೋಕ್ ಅವರು ದಾಳಿ ನಡೆಸಿ ಆರೋಪಿಯನ್ನು ಹಿಡಿದು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
ಆರೋಪಿ ದಾಮೋದರ ಪೂಜಾರಿಯನ್ನು ವಿಚಾರಣೆ ನಡೆಸಿದಾಗ ತಾನು ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಲ್ಲಿ ಸ್ವಲ್ಪ ಇಟ್ಟುಕೊಂಡು ಉಳಿದ ಹಣವನ್ನು ಒಟ್ಟು ಮಾಡಿ 2ನೇ ಆರೋಪಿ ದಯಾನಂದ ಎಂಬಾತನಿಗೆ ನೀಡುವುದಾಗಿ ತಿಳಿಸಿದ್ದು ನಂತರ 1ನೇ ಆರೋಪಿ ದಾಮೋದರನ ವಶದಲ್ಲಿದ್ದ ಮಟ್ಕಾ ಜುಗಾರಿ ಬಗ್ಗೆ ಸಂಗ್ರಹಿಸಿದ ನಗದು ಹಣ ರೂಪಾಯಿ 1950/- ಹಾಗೂ ಮಟ್ಕಾ ನಂಬ್ರಗಳನ್ನು ಬರೆದಿರುವ ಚೀಟಿ-1, ಮಟ್ಕಾ ನಂಬ್ರಗಳನ್ನು ಬರೆಯಲು ಉಪಯೋಗಿಸುವ ಬಾಲ್‌ಪೆನ್-1 ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 112 BNS & 78(I) (III) KP ACT ರಂತೆ ಪ್ರಕರಣ ದಾಖಲಾಗಿದೆ.
