ಹಿರಿಯಡ್ಕ: ದಿನಾಂಕ:19-11-2025(ಹಾಯ್ ಉಡುಪಿ ನ್ಯೂಸ್) ಕುಂದಾಪುರದಿಂದ ಬೆಂಗಳೂರಿಗೆ ಚಲಿಸುತ್ತಿದ್ದ ದುರ್ಗಾಂಬಾ ಬಸ್ಸಿನ ಚಾಲಕನೋರ್ವ ಕಂಠ ಪೂರ್ತಿ ಸಾರಾಯಿ ಕುಡಿದು ಕೊಂಡು ಬಸ್ಸನ್ನು ಕುಂದಾಪುರ ದಿಂದ ಹಿರಿಯಡ್ಕ ಕಡೆಗೆ ಚಲಾಯಿಸಿ ಕೊಂಡು ಬಂದು ಹಿರಿಯಡ್ಕದಲ್ಲಿ ಬಸ್ಸನ್ನು ಚರಂಡಿಗೆ ಹಾಕಿ ಪ್ರಯಾಣಿಕರ ಪ್ರಾಣ ದೊಂದಿಗೆ ಚೆಲ್ಲಾಟವಾಡಿರುವ ಘಟನೆ ದಿನಾಂಕ:18-11-2025 ರಂದು ಹಿರಿಯಡ್ಕದಲ್ಲಿ ನಡೆದಿದೆ.
ಬಸ್ಸು ಹಿರಿಯಡ್ಕ ದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದ್ದು ಸ್ಥಳೀಯರು ಚಾಲಕನನ್ನು ಪರಿಶೀಲಿಸಿದಾಗ ನೋಡಲು ಅವನು ವಿಪರೀತ ಸಾರಾಯಿ ಕುಡಿದು ನಶೆಯಲ್ಲಿದ್ದನು. ಅವನ ಹೆಸರು ವಿಳಾಸ ವಿಚಾರಿಸಿದಾಗ ಮಹಾಂತೇಶ ಆನಂದಗೌಡ ಪಾಟೀಲ(34) ಮುದ್ದೆಬಿಹಾಳ್ ತಾಲೂಕು ವಿಜಯಪುರ ಜಿಲ್ಲೆ ಎಂದು ತಿಳಿಸಿರುತ್ತಾನೆ. ಮತ್ತು ನಿರ್ವಾಹಕನು ತನ್ನ ಹೆಸರು ಯೋಗೇಶ್ ಸೋಮಕ್ಕನವರ ವಾಸ: ಬಿಲ್ಲಾಳ ಗ್ರಾಮ ರಾಣೇಬೆನ್ನೂರು ಎಂದು ತಿಳಿಸಿದ್ದು ,ನಿರ್ವಾಹಕ ಮತ್ತು ಪ್ರಯಾಣಿಕರಿಗೆ ವಿಚಾರಿಸಿದಾಗ ಚಾಲಕನು ದುರ್ಗಾಂಬಾ ಸಂಸ್ಥೆಯಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ವಿಪರೀತ ಸಾರಾಯಿ ಕುಡಿದು ಪ್ರಯಾಣಿಕರಿರುವ ಬಸ್ಸನ್ನು ಮಣಿಪಾಲ ಕಡೆಯಿಂದ ಹಿರಿಯಡಕ ಕಡೆಗೆ ಚಾಲನೆ ಮಾಡಿಕೊಂಡು ಬಂದು ಹೋಟೆಲ್ ಒಂದರ ಮುಂದೆ ರಾತ್ರಿ 09:45 ಗಂಟೆಗೆ ಚರಂಡಿಯಲ್ಲಿ ಇಳಿಸಿ ಅಪಘಾತ ಪಡಿಸಿದ ಬಗ್ಗೆ ತಿಳಿಸಿದ್ದಾರೆ
ಚಾಲಕನು ಕುಂದಾಪುರದಿಂದ ಬೆಂಗಳೂರಿಗೆ ಹೋಗಲು ಹೆಬ್ರಿ-ಶಿವಮೊಗ್ಗ ರಸ್ತೆ ಘಾಟಿ ಪ್ರದೇಶದಲ್ಲಿ ಬಸ್ ಚಲಾಯಿಸಿಕೊಂಡು ಹೋಗಬೇಕಾಗಿದ್ದು ರಸ್ತೆಯು ತುಂಬಾ ತಿರುವುಗಳಿಂದ ಕೂಡಿದ್ದು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಹೋದಲ್ಲಿ ರಸ್ತೆ ಪಕ್ಕದಲ್ಲಿರುವ ಪ್ರಪಾತಕ್ಕೆ ಬಿದ್ದು ಪ್ರಾಣ ಹಾನಿಯಾಗುವ ಸಂಭವವಿರುವುದರಿಂದ ಚಾಲಕನೂ ವಿಪರೀತ ಸಾರಾಯಿ ಕುಡಿದು ಪ್ರಯಾಣಿಕರಿರುವ ಬಸ್ಸನ್ನು ಮಣಿಪಾಲ ಕಡೆಯಿಂದ ಹಿರಿಯಡಕ ಕಡೆಗೆ ಚಲಾಯಿಸಿಕೊಂಡು ಬಂದು ಬಸ್ ನಿಯಂತ್ರಿಸದೇ ಚರಂಡಿಗೆ ನುಗ್ಗಿಸಿ ಶಮಿತ್ ಹೋಟೆಲ್ ನ ಬೋರ್ಡ್ ಮತ್ತು ಬಸ್ಸನ್ನು ಜಖಂಗೊಳಿಸಿ ಬಸ್ಸಿನಲ್ಲಿದ್ದ ಪ್ರಯಾಣಿಕರ ನರ ಹತ್ಯೆಗೆ ಪ್ರಯತ್ನಿಸಿ ಘೋರ ಅಪರಾಧ ಎಸಗಿರುತ್ತಾನೆ ಎಂದು ಗಣೇಶ್ ಪಾಡಿಗಾರ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 281, 110 BNS 185 IMV ACT ರಂತೆ ಪ್ರಕರಣ ದಾಖಲಾಗಿದೆ.
