IMG-20251107-WA0003.jpg
Spread the love

ನನ್ನೆಲ್ಲಾ ಭಾರತೀಯ ಮುಸ್ಲಿಂ ರಕ್ತ ಸಂಬಂಧಿ ಗೆಳೆಯ ಗೆಳತಿಯರೇ, ಸಹೋದರ ಸೋದರಿಯರೇ, ಬಂಧು ಬಾಂಧವರೇ, ಹಿತೈಷಿಗಳೇ, ದೇಶ ಪ್ರೇಮಿಗಳೇ ಎಲ್ಲರಲ್ಲೂ ಒಂದು ಪ್ರೀತಿಪೂರ್ವಕ ಮನವಿ….

ನನಗನಿಸಿದಂತೆ ಇಂದಿನ ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಭಾರತೀಯ ಮುಸ್ಲಿಮರು ಅಳವಡಿಸಿಕೊಳ್ಳಬಹುದಾದ ಮತ್ತು ಅಳವಡಿಸಿಕೊಳ್ಳಲೇಬೇಕಾದ ಕೆಲವು ಅಂಶಗಳು ಈ ರೀತಿ ಇವೆ. ಇವುಗಳಿಂದ ಸಾಮಾಜಿಕ ಸಾಮರಸ್ಯ ಸಾಧ್ಯವಾಗುತ್ತದೆ. ಪಕ್ಕಾ ಕರ್ಮಠ ಸನಾತನವಾದಿಗಳ ಮೂಲಭೂತವಾದಿ ತತ್ವಗಳಿಗೆ ಪ್ರತ್ಯುತ್ತರ ರೂಪದಂತೆಯೇ ಇರುತ್ತದೆ. ದೇಶದ ಮತ್ತು ಒಟ್ಟು ಸಮುದಾಯದ ನೆಮ್ಮದಿಯೂ, ಹಿತಾಸಕ್ತಿಯೂ, ಭವಿಷ್ಯವೂ ಉತ್ತಮವಾಗಿರುತ್ತದೆ.

ಏಕೆಂದರೆ ಎಲ್ಲಾ ಧರ್ಮಗಳ, ಎಲ್ಲಾ ಸಾಂವಿಧಾನಿಕ ನೀತಿ ನಿಯಮಗಳ ಮೂಲ ಆಶಯವೇ ದೇಶದ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿ ಮತ್ತು ಜೀವನಮಟ್ಟ ಸುಧಾರಣೆ. ಅದಕ್ಕಾಗಿ ಈ ಅಂಶಗಳು ಬಹಳ ಪ್ರಾಮುಖ್ಯತೆ ಪಡೆಯುತ್ತವೆ.

ಭಾರತದ ಎಲ್ಲಾ ಮುಸ್ಲಿಮರ ಮನೆಯಲ್ಲಿ ಅವರ ಇಷ್ಟದ ಕೆಲವು ಗೋಡೆ ಚಿತ್ರಗಳ ಜೊತೆಗೆ ಮಹಾತ್ಮ ಗಾಂಧಿ ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರಪಟಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇದರ ಮೂಲಕ ಈ ದೇಶದಲ್ಲಿ ಸ್ವತಂತ್ರವಾಗಿ ಜೀವಿಸಲು, ಅವರು ನೀಡಿದ ‌ಅನ್ನದ ಋಣ ತೀರಿಸಲು ಮಹಾತ್ಮ ಗಾಂಧಿ ಮತ್ತು ಅವರ ಅಸ್ತಿತ್ವಕ್ಕೆ ಭದ್ರಬುನಾದಿಯಾಗಿ ಸಮಾನತೆ ಸಾರಿದ ಬಾಬಾ ಸಾಹೇಬರ ಚಿಂತನೆಗಳಿಗೆ ಗೌರವ ನೀಡಿದಂತಾಗುತ್ತದೆ.

ಏಕೆಂದರೆ ಧರ್ಮ ಮತ್ತು ದೇವರು ತೀರಾ ಖಾಸಗಿಯಾದದ್ದು ಮತ್ತು ದೇವರು ಬಹುತೇಕ ನಂಬಿಕೆಯದ್ದು. ಆದರೆ ವಾಸ್ತವವಾಗಿ ನಮ್ಮೆಲ್ಲರ ಸಾಮಾಜಿಕ ಅಸ್ತಿತ್ವಕ್ಕೆ ಬಹುತೇಕ ಈ ಇಬ್ಬರೇ ಕಾರಣವಾಗಿರುವುದರಿಂದ ಮತ್ತು ಇವರಿಬ್ಬರೀಗೂ ಆತ್ಮಸಾಕ್ಷಿಯಾಗಿ ಎಲ್ಲಾ ರೀತಿಯ ಗೌರವ ಕೊಡಬೇಕಾಗಿರುವುದರಿಂದ ಇದು ಅತ್ಯಂತ ಸೂಕ್ತವಾಗಿದೆ.

ಮೂಲಭೂತವಾದಿ ಸನಾತನ ಧರ್ಮೀಯರಿಗೆ ಮುಸ್ಲಿಮರ ಬಗ್ಗೆ ಇರುವ ಬಹುದೊಡ್ಡ ಆರೋಪವೆಂದರೆ, ಅವರು ದೇಶ, ಸಂವಿಧಾನಕ್ಕಿಂತ ಧರ್ಮವನ್ನೇ ಹೆಚ್ಚು ಅನುಸರಿಸುವುದರಿಂದ ಅದು ಮುಂದೊಮ್ಮೆ ಅಪಾಯಕಾರಿಯಾಗಬಹುದು ಹಾಗೂ ಇತರೆ ಮಧ್ಯಪ್ರಾಚ್ಯದ ಇಸ್ಲಾಂ ದೇಶಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಅನೇಕ ರೀತಿಯ ಹಿಂಸೆಗಳು ನಡೆಯುತ್ತಿರುವುದರಿಂದ ಒಂದು ವೇಳೆ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾದರೆ ಅದು ಷರಿಯತ್ ಕಾನೂನಿನ ಇಸ್ಲಾಮೀಕರಣದ ಕಡೆ ತಿರುಗಬಹುದು. ಆಗ ನಮ್ಮ ಸನಾತನ ಧರ್ಮಕ್ಕೆ ಅಪಾಯ ಉಂಟಾಗಬಹುದು ಎನ್ನುವ ಮನಸ್ಥಿತಿಯವರು ಸಾಕಷ್ಟು ಜನರಿದ್ದಾರೆ.

ಅದಕ್ಕೆ ತಮ್ಮ ನೇರ ನಡೆನುಡಿಗಳಲ್ಲಿ ಉತ್ತರಿಸಿ. ಅವರ ಕೇಸರೀಕರಣದ ಮೂಲಭೂತವಾದಿ ಗುಣಕ್ಕೆ ಸಂವಿಧಾನ ಮತ್ತು ಭಾರತೀಕರಣ ಎಂಬ ಪರಿಕಲ್ಪನೆಯ ಪ್ರತ್ಯುತ್ತರ ನೀಡಲು ಭಾರತೀಯ ಮುಸ್ಲಿಮರಿಗೆ ಇದು ಸೂಕ್ತ ಮಾರ್ಗ ಎನಿಸುತ್ತದೆ.

ಪ್ರತಿ ಭಾರತೀಯ ಮುಸ್ಲಿಮರು ಇಸ್ಲಾಂ ಧರ್ಮದ ಮೂಲ ಆಶಯದ ನೀತಿ ನಿಯಮಗಳನ್ನು ಸಂಪೂರ್ಣ ಅನುಸರಿಸಿ. ಅದಕ್ಕೆ ಯಾರದೇ ಅಪ್ಪಣೆಯೂ ಬೇಡ. ಆದರೆ ಆಧುನಿಕ ಕಾಲಕ್ಕೆ ತಕ್ಕಂತೆ ತಮ್ಮ ಚಿಂತನೆಗಳಲ್ಲಿ ಮತಾಂಧತೆಯನ್ನು ಕಡಿಮೆ ಮಾಡಿಕೊಂಡು, ವಿಶಾಲಾರ್ಥದ ವೈಚಾರಿಕ, ಪ್ರಗತಿಪರ ನಿಲುವುಗಳನ್ನು ಒಪ್ಪಿಕೊಂಡು, ತಮ್ಮ ಕೌಟುಂಬಿಕ ಮತ್ತು ಸಾಮಾಜಿಕ ಜೀವನ ಶೈಲಿಯಲ್ಲಿ ಸಣ್ಣ ಪರಿವರ್ತನೆ ಮಾಡಿಕೊಂಡರೆ ಖಂಡಿತವಾಗಲೂ ಇಡೀ ಸಮುದಾಯ ಹೀಗಿರುವ ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಪ್ರಗತಿಗಿಂತ ಉತ್ತಮ ಮಟ್ಟಕ್ಕೇರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತದ ಈ ಕ್ಷಣದ ಸಾಮಾಜಿಕ, ರಾಜಕೀಯ ವಾತಾವರಣದಲ್ಲಿ ಬಹುತೇಕ ಬಲಪಂಥೀಯ ಚಿಂತನೆಯ ಮುಸ್ಲಿಂ ವಿರೋಧಿ ಧೋರಣೆಯ ಮನಸ್ಥಿತಿಗಳೇ ಹೆಚ್ಚು ಹೆಚ್ಚು ಪ್ರಚಾರ ಪಡೆಯುತ್ತಿದೆ ಮತ್ತು ಅಧಿಕಾರ ಹಿಡಿಯುತ್ತಿವೆ. ಮಾಧ್ಯಮಗಳು ಸಹ ಅದಕ್ಕೆ ತುಪ್ಪ ಸುರಿದು ಪೂರಕವಾಗಿ ಕೆಲಸ ಮಾಡುತ್ತಿವೆ. ರಾಜಕೀಯವಾಗಿಯೂ ಒಂದು ರಾಷ್ಟ್ರೀಯ ಪಕ್ಷ ಎಲ್ಲಾ ಚುನಾವಣೆಗಳನ್ನು ಗೆಲ್ಲುತ್ತಿದೆ.

ಇಂತಹ ಸಂದರ್ಭದಲ್ಲಿ ಅದಕ್ಕೆ ಕಡಿವಾಣ ಹಾಕಿ ಸಂವಿಧಾನದ ಆಶಯಗಳ ಪ್ರಕಾರ ” ಭಾರತೀಯ ಪ್ರಜೆಗಳಾದ ನಾವು…..”
ಎನ್ನುವ ಅದರ ಪೀಠಿಕೆಯ ಸಾಲುಗಳನ್ನು ಎಲ್ಲರೂ ಅನುಸರಿಸುವ ಮೂಲಕ ಕರ್ಮಠ ಸನಾತನವಾದಿ ವಿಭಜಕ ಶಕ್ತಿಗಳಿಗೆ ಈ ಮೂಲಕ ಉತ್ತರವನ್ನು ನೀಡಬಹುದು.

ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಗಣೇಶ ಉತ್ಸವದ ಮೇಲೆ ಟ್ರಕ್ ಹರಿದು, ಹಾಗೆಯೇ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಕಾಲ್ತುಳಿತದಿಂದ ಸತ್ತ ಅನೇಕ ಘಟನೆಗಳಲ್ಲಿ ದೇವರ ಅಸ್ತಿತ್ವವನ್ನು ಇಲ್ಲಿನ ಪ್ರಗತಿಪರ ಬುದ್ಧಿಜೀವಿಗಳು ಪ್ರಶ್ನೆ ಮಾಡಿರುವುದು ನಿಜ. ಈಗ ಮೊನ್ನೆ ಮೆಕ್ಕಾ ಬಳಿ ಆಂಧ್ರಪ್ರದೇಶದ 45ಕ್ಕೂ ಹೆಚ್ಚು ಜನ ಯಾತ್ರಾರ್ಥಿಗಳು ಅಪಘಾತದಿಂದ ಸಾವಿಗಾಗಿಡುವ ಸಂದರ್ಭದಲ್ಲಿ, ಅಲ್ಲೂ ಸಹ ಯಾವ ದೇವರು ಅವರನ್ನು ರಕ್ಷಣೆ ಮಾಡಲಿಲ್ಲ ಎಂದು ನಾವು ಪ್ರಶ್ನಿಸಬೇಕಾಗುತ್ತದೆ. ದೈವಿಕ ಶಕ್ತಿ ಇರಬೇಕಾಗಿರುವುದು ಮನುಷ್ಯರನ್ನು ಉಳಿಸಲೇ ಹೊರತು ಕೊಲ್ಲಲು ಅಲ್ಲ. ಅದರಲ್ಲಿ ಆ ಶಕ್ತಿ ವಿಫಲವಾಗಿದೆ.

ಕರ್ಮ ಸಿದ್ದಾಂತ, ಪುನರ್ಜನ್ಮ ಸಿದ್ದಾಂತದ ದೇವರು ಮತ್ತು ಸೈತಾನನ ಸಿದ್ದಾಂತ ಕೇವಲ ಚರ್ಚಾ ವಿಷಯಗಳು ಮಾತ್ರವೇ ಹೊರತು ಪ್ರಕೃತಿಯ ಮುಂದೆ ನಾವೆಲ್ಲರೂ ಸಮಾನರೆ. ಪ್ರಕೃತಿಯ ಶಕ್ತಿಯೇ ಅಂತಿಮ ಅಲ್ಲವೇ.

ನಿಮ್ಮ ಮನಸ್ಸಿನ ಪ್ರಶ್ನೆ ನನಗೆ ಕೇಳಿಸುತ್ತಿದೆ. ಮುಸ್ಲಿಮರಿಗೆ ಗಾಂಧಿ ಮತ್ತು ಅಂಬೇಡ್ಕರ್ ಅವರ ಫೋಟೋ ಹಾಕಿಕೊಳ್ಳಬೇಕೆನ್ನುವ ನೀವು, ಮುಸ್ಲಿಮರಲ್ಲಿ ಮೌಢ್ಯವಿದೆ, ಮತಾಂಧತೆ ಇದೆ, ಭಯೋತ್ಪಾದನೆ ಇದೆ ಎನ್ನುವ ನೀವು ಎಷ್ಟು ಹಿಂದುಗಳ ಮನೆಯಲ್ಲಿ ಗಾಂಧಿ, ಬಾಬಾ ಸಾಹೇಬರ ಫೋಟೋ ಇದೆ, ಹಿಂದುಗಳಲ್ಲಿ ಎಷ್ಟೊಂದು ಮತಾಂಧರಿದ್ದಾರೆ, ಭಯೋತ್ಪಾದಕರಿದ್ದಾರೆ ಅವರಿಗೇಕೆ ಪ್ರಶ್ನಿಸುವುದಿಲ್ಲ, ಸಲಹೆ ನೀಡುವುದಿಲ್ಲ ಎಂದು ನೀವು ಕೇಳುತ್ತಿರುವಿರಿ. ನಿಮ್ಮ ಪ್ರಶ್ನೆಗೆ ಖಂಡಿತ ಹೌದು ಎಂಬುದೇ‌ ನನ್ನ ಉತ್ತರ.

ಸನಾತನ ಧರ್ಮದಲ್ಲಿಯೂ ಮುಸ್ಲಿಂ ಧರ್ಮದಷ್ಟೇ ಮತಾಂಧತೆಯೂ ಇದೆ. ಗಾಂಧಿ ಮತ್ತು ಅಂಬೇಡ್ಕರ್ ಅವರ ಬಗ್ಗೆ ತಿರಸ್ಕಾರವಿದೆ, ದ್ವೇಷವಿದೆ. ಬೇರೆ ಬೇರೆ ರೂಪದ ಭಯೋತ್ಪಾದಕ ಚಟುವಟಿಕೆಗಳು ಇವೆ‌.

ಇತ್ತೀಚಿನ ವರ್ಷಗಳಲ್ಲಿ ಅದು ಹೆಚ್ಚಾಗುತ್ತಿದೆ. ಅದು ಹೆಚ್ಚಾಗಲು ಕಾರಣ ಅವರಿಗೆ ಇರುವ ಮುಸ್ಲಿಂ ದ್ವೇಷ ಮತ್ತು ಅದಕ್ಕೆ ಪೂರಕವಾಗಿ ಕೆಲವು ಭಯೋತ್ಪಾದಕ ಮುಸ್ಲಿಂ ಸಂಘಟನೆಗಳು ಆತ್ಮಾಹುತಿ ದಾಳಿಯ ಪ್ರಯತ್ನಗಳನ್ನು ನಡೆಸುತ್ತಿರುವುದು. ನಮಗೆ ಅದರ ಅರಿವಿರುವುದರಿಂದಲೇ ಕ್ರಿಯೆ ಪ್ರತಿಕ್ರಿಯೆಗಳು ತೀಕ್ಷ್ಣವಾಗಿ ಮತ್ತೊಂದು ಇಸ್ರೇಲ್, ಹಮಾಸ್, ಪ್ಯಾಲಿಸ್ಟೇನ್, ಇರಾಕ್, ಬರ್ಮಾ, ಆಫ್ಘಾನಿಸ್ತಾನ್, ಪಾಕಿಸ್ತಾನದ ರೀತಿಯ ಹಿಂಸಾತ್ಮಕ ಚಟುವಟಿಕೆಗಳು ಭಾರತದಲ್ಲಿ ನಡೆಯಬಾರದು ಎನ್ನುವ ಉದ್ದೇಶದಿಂದಲೇ ಸನಾತನವಾದಿ ಮೂಲಭೂತವಾದಿಗಳ ಅಕ್ರಮಣಕಾರಿ ಮನೋಭಾವವನ್ನು ಭಾರತೀಕರಣದ ಮುಖಾಂತರ ಪರ್ಯಾಯ ಮಾರ್ಗವಾಗಿ ಸೂಚಿಸುತ್ತಿರುವುದು.

ಏಕೆಂದರೆ ಹೇಗೆ ಮುಂದೆ ಮುಸ್ಲಿಂ ಜನಸಂಖ್ಯೆ ಹೆಚ್ಚಾದರೆ ದೇಶ ಇಸ್ಲಾಮೀಕರಣವಾಗುವುದು ಎಂಬ ಭಯವಿದೆಯೋ, ಹಾಗೆಯೇ ಬಲಪಂಥೀಯ ಚಟುವಟಿಕೆಗಳು ಹೆಚ್ಚಾದರೆ ದೇಶ ಕೇಸರೀಕರಣವಾಗಿ ಇಲ್ಲಿನ ಜಾತಿ ವ್ಯವಸ್ಥೆ ಮತ್ತು ಮೌಢ್ಯಗಳು ಹೆಚ್ಚಾಗಿ ಭಾರತದ ಪ್ರಜಾಪ್ರಭುತ್ವವೇ ನಾಶವಾಗಬಹುದು ಎಂಬ ಭಯವೂ ಇದೆ. ಇದಕ್ಕೆಲ್ಲ ಪರಿಹಾರ ರೂಪವೇ ಭಾರತೀಕರಣ ಎಂಬ ಭಾರತೀಯರಾದ ನಾವು ಎನ್ನುವ ಘೋಷಣೆ ಮಾತ್ರ.

ಧರ್ಮ ಮತ್ತು ದೇವರನ್ನು ಖಾಸಗೀಕರಣಗೊಳಿಸಿ ಅವರವರ ಮನೆಗಳಿಗೆ ಸೀಮಿತವಾಗಿಸಿ, ಗಾಂಧಿ ಮತ್ತು ಅಂಬೇಡ್ಕರ್ ಎಂಬ ಎರಡು ಚಿಂತನೆಗಳನ್ನು ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡರೆ ಈ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಬೌದ್ಧ, ಜೈನ, ಲಿಂಗಾಯಿತ ಎಲ್ಲವೂ ಕೂಡ ಅದರೊಳಗಿನ ಸಣ್ಣ ಸಣ್ಣ ಭಾಗಗಳಾಗಿ ಮನೆಯೊಳಗೆ ಸೀಮಿತವಾಗಿ ಇರುತ್ತವೆ. ಹೊರಗೆ ದೇಶದ ಐಕ್ಯತೆ, ಸಮಗ್ರತೆ ರಕ್ಷಣೆಯಲ್ಲಿ ಕೇವಲ ಸಂವಿಧಾನದ ಆಶಯಗಳು ಮಾತ್ರವೇ ಮುಖ್ಯವಾದಾಗ ನಾವು, ನೀವು ಎಲ್ಲರೂ ಭಯೋತ್ಪಾದನೆಯನ್ನಾಗಲಿ, ಹಿಂಸೆಯನ್ನಾಗಲಿ, ಕೋಮು ಸಂಘರ್ಷವನ್ನಾಗಿಲಿ, ಭ್ರಷ್ಟಾಚಾರವನ್ನಾಗಲಿ, ಚುನಾವಣಾ ಅಕ್ರಮವನ್ನಾಗಲಿ ಕಾಣಲು ಸಾಧ್ಯವಿಲ್ಲ.

ನಿಮಗೆ ನೆಮ್ಮದಿ ಬೇಕು ಎನ್ನುವುದಾದರೆ ಎಲ್ಲರೂ ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಯೋಚಿಸಿದರೆ ಬಹುಶಃ ಮುಂದಿನ 10 ವರ್ಷಗಳಲ್ಲಿ ಈ ಕೇಸರೀಕರಣ, ಇಸ್ಲಾಮೀಕರಣ ಇಲ್ಲವಾಗಿ ಮನುಷ್ಯೀಕರಣ, ಭಾರತೀಕರಣ, ಸಂವಿಧಾನೀಕರಣ ನಮ್ಮನ್ನು ಹೆಚ್ಚು ನೆಮ್ಮದಿಯಾಗಿ ಉಳಿಸಬಹುದು. ದಯವಿಟ್ಟು ಎಲ್ಲಾ ಭಾರತೀಯ ಮುಸ್ಲಿಂ ಸಮುದಾಯದವರು ಗಂಭೀರವಾಗಿ ಪರಿಗಣಿಸಿ ಎಂದು ಪ್ರೀತಿಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!