ಕೃಷಿ ಮೇಳ,
ಚಿತ್ರ ಸಂತೆ,
ಪುಸ್ತಕ ಜಾತ್ರೆ,
ದನಗಳ ಜಾತ್ರೆ,
ಸಾವಯವ ಕೃಷಿ ಮೇಳ,
ಹಾಸ್ಯ ಸಂಜೆ,
ಕಡಲೆಕಾಯಿ ಪರಿಷೆ,
ಶ್ವಾನ ಪ್ರದರ್ಶನ,
ಸಂಗೀತ ಉತ್ಸವ,
ಮಾವು ಮೇಳ,
ಹಲಸು ಮೇಳ,
ಫಲ ಪುಷ್ಪ ಪ್ರದರ್ಶನ, ಸಾಹಿತ್ಯೋತ್ಸವ,
ಕಾಡುವ ಕೀರಂ,
ಸಾಂಸ್ಕೃತಿಕ ಹಬ್ಬ,
ಊರ ಹಬ್ಬ,
ಯಕ್ಷಗಾನ ಮೇಳ,
ಜಾನಪದ ಕುಣಿತ,
ಬಯಲಾಟ,
ಆಹಾರ ಮೇಳ,
ಫ್ಯಾಶನ್ ಡಿಸೈನಿಂಗ್ ಎಕ್ಸ್ಪೋ,
ರಿಯಾಲಿಟಿ ಎಕ್ಸ್ಪೋ,
ಫರ್ನಿಚರ್ ಎಕ್ಸ್ಪೋ,
ಶೈಕ್ಷಣಿಕ ಉತ್ಸವ,
ಉದ್ಯೋಗ ಮೇಳ,
ಮಲೆನಾಡು ಹಬ್ಬ,……..
ಹೀಗೆ ನಾನಾ ತರಹದ ಹಬ್ಬ, ಜಾತ್ರೆ, ಸಂತೆ, ಉತ್ಸವಗಳು ಅದಕ್ಕೆ ಸಂಬಂಧಪಟ್ಟವರು ನಗರ ಮತ್ತು ಹಳ್ಳಿಗಳಲ್ಲಿ ಆಗಾಗ ಆಯೋಜಿಸುತ್ತಿರುತ್ತಾರೆ. ಅದರ ಸದುಪಯೋಗವನ್ನು ಆಸಕ್ತರು ಪಡೆಯುತ್ತಾರೆ ಹಾಗೂ ಆಯೋಜಕರು ಒಂದಷ್ಟು ಲಾಭ ಮಾಡಿಕೊಳ್ಳುತ್ತಾರೆ.
ಇದು ಇತಿಹಾಸದುದ್ದಕ್ಕೂ ಭಾರತದ ಸಾಂಸ್ಕೃತಿಕ ಬದುಕಿನ, ಜನಜೀವನದ ಭಾಗವಾಗಿದೆ. ಚಿನ್ನ, ವಜ್ರ ವೈಢೂರ್ಯ ಗಳು, ಮುತ್ತು ರತ್ನಗಳ ಮಾರಾಟದಿಂದ ಗುಲಾಮ ಮನುಷ್ಯರು, ಆನೆ, ಕುದುರೆಗಳ ಮಾರಾಟದವರೆಗೆ, ಹಾಸ್ಯ ಉತ್ಸವದಿಂದ ವಿವಿಧ ಲಲಿತ ಕಲೆಗಳು, ಕಲಿತ ವಿದ್ಯೆಯ ಪ್ರದರ್ಶನಗಳು ಕುಸ್ತಿ ಪಂದ್ಯಾವಳಿಗಳು, ನೃತ್ಯ ನಾಟಕಗಳು, ಜನಪದ ಕಲೆಗಳು ಹೀಗೆ ವಿವಿಧ ವೈವಿಧ್ಯಮಯ ಉತ್ಸವಗಳು ಸಹ ನಿರಂತರವಾಗಿ ಈ ಕ್ಷಣದವರೆಗೆ ನಡೆದುಕೊಂಡು ಬರುತ್ತಿದೆ.
ಇವು ವೈಯಕ್ತಿಕ ಬದುಕಿನ ವಿವಿಧ ಹಂತಗಳಲ್ಲಿ ಉಂಟುಮಾಡುವ ಭಾವನೆಗಳು ಸಹ ಅಷ್ಟೇ ವೈವಿಧ್ಯಮಯವಾಗಿ ವಿಕಾಸಶೀಲವಾಗಿ ಇರುತ್ತವೆ.
ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಅಮ್ಮನ ಕಂಕುಳಲ್ಲಿ ಕುಳಿತು ಸೆರೆಗಿಡಿದು ಕುತೂಹಲ ಭರಿತ ಕಣ್ಣುಗಳಿಂದ ನೋಡುವಾಗಿನ ಭಾವನೆಗಳೆ ಬೇರೆ. ಇನ್ನೂ ಸ್ವಲ್ಪ ದೊಡ್ಡವರಾದ ಮೇಲೆ ಅಪ್ಪನ ಹೆಗಲ ಮೇಲೆ ಕುಳಿತು ಆಶ್ಚರ್ಯದಿಂದ ನೋಡುವಾಗ ಉಂಟಾಗುತ್ತಿದ್ದ ಭಾವನೆಗಳೇ ಬೇರೆ. ಅಮ್ಮ ತೋರಿಸುತ್ತಿದ್ದ ವಸ್ತುಗಳು, ಅಪ್ಪ ವಿವರಿಸುತ್ತಿದ್ದ ಘಟನೆಗಳು ಎಲ್ಲವೂ ಆ ಮುಗ್ಧ ಮನಸ್ಸಿನ ಮೇಲೆ ಬೀರುತ್ತಿದ್ದ ಪರಿಣಾಮಗಳ ಆಳ ಅಗಾಧಗಳೇ ಬೇರೆ.
ಮುಂದೆ ಸ್ವಲ್ಪ ಯುವಕರಾಗುತ್ತಿದ್ದಂತೆ ನಮ್ಮೊಳಗೆ ಆಗುತ್ತಿದ್ದ ಭಾವನೆಗಳಿಗೆ ತಕ್ಕಂತೆ ಇದೇ ಉತ್ಸವಗಳು ಬೀರುತ್ತಿದ್ದ ಪ್ರಭಾವ, ಉಂಟು ಮಾಡುತ್ತಿದ್ದ ಪರಿಣಾಮಗಳೇ ಬೇರೆ. ಒಂದಷ್ಟು ಧೈರ್ಯ, ಬಂದಷ್ಟು ಹೆಮ್ಮೆ, ಒಂದಷ್ಟು ಅಹಂಕಾರ, ಒಂದಷ್ಟು ಪ್ರದರ್ಶನ ಮನೋಭಾವ, ಒಂದಷ್ಟು ಒರಟುತನ ಹೀಗೆ ಅನೇಕ ಭಾವಗಳೊಂದಿಗೆ, ಸ್ವಲ್ಪ ಸ್ವಾತಂತ್ರ್ಯದೊಂದಿಗೆ ಈ ಉತ್ಸವಗಳನ್ನು ನೋಡುವಾಗಿನ ಅನುಭವವೇ ಬೇರೆ.
ತುಂಬು ಯೌವ್ವನದ ದಿನಗಳಲ್ಲಿ, ಸ್ವತಂತ್ರ ಬದುಕಿನ ಪ್ರಾರಂಭದಲ್ಲಿ ಈ ಉತ್ಸವಗಳ ಭಾಗವಾಗಿಯೋ, ಪಾತ್ರವಾಗಿಯೋ, ಸಂಘಟಕರಾಗಿಯೋ, ಕಾರ್ಯಕರ್ತರಾಗಿಯೋ, ವೀಕ್ಷಕರಾಗಿಯೋ, ಶೋತೃಗಳಾಗಿಯೋ ಅಥವಾ ಗೆಳೆಯರೊಂದಿಗೆ ತುಂಟಾಟ, ಚೇಷ್ಟೇ ಘರ್ಷಣೆಗಳು, ಒಟ್ಟಿನಲ್ಲಿ ಆ ಸಂದರ್ಭದಲ್ಲಿ ನಮ್ಮ ಪಾಲ್ಗೊಳ್ಳುವಿಕೆಯೇ ಭವಿಷ್ಯದ ಮೆಟ್ಟಿಲುಗಳಾಗಿ ಪರಿವರ್ತನೆಯಾಗುವ ಬಗೆಯೂ, ಈ ಉತ್ಸವಗಳು ಜೀವನ ಮಾರ್ಗವನ್ನೇ ಬದಲಾಯಿಸಿರುವ ಉದಾಹರಣೆಗಳೂ ಉಂಟು.
ಮುಂದೆ ಮದುವೆಯಾದ ನಂತರ ಹೊಸ ಜೀವನೋತ್ಸಾಹದ ಸನ್ನಿವೇಶದಲ್ಲಿ ಗಂಡನೊಂದಿಗೋ, ಅಥವಾ ಹೆಂಡತಿಯೊಂದಿಗೋ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಉಂಟಾಗುತ್ತಿದ್ದ ಭಾವನೆಗಳೆ ಬೇರೆ, ಆಗಿನ ಅನುಭವಗಳೇ ಬೇರೆ, ಆಗಿನ ಖುಷಿ, ಆತ್ಮವಿಶ್ವಾಸಗಳೇ ಬೇರೆ, ಭವಿಷ್ಯದ ಕನಸುಗಳೇ ಬೇರೆ.
ನಂತರ ಕೆಲ ವರ್ಷಗಳಾದ ಮೇಲೆ ನಮ್ಮ ಮಗುವಿನೊಂದಿಗೆ ಅಥವಾ ಮಕ್ಕಳೊಂದಿಗೆ ಇದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಮೇಳಗಳಲ್ಲಿ, ಉತ್ಸವಗಳಲ್ಲಿ, ಜಾತ್ರೆಗಳಲ್ಲಿ ಭಾಗವಹಿಸುವಾಗ ನಮ್ಮ ಹೆಗಲ ಮೇಲೆಯೋ, ಕೈ ಹಿಡಿದೋ ಪುಟ್ಟ ಕಂದಮ್ಮಗಳಿಗೆ ನಾವು ಪೋಷಕರಾಗಿ ಅದನ್ನು ಪರಿಚಯಿಸುವಾಗ ನಮಗಾಗುತ್ತಿದ್ದ ಅನುಭವಗಳೇ ಬೇರೆ. ಮಕ್ಕಳ ಕುತೂಹಲಕರ ಮುಗ್ಧ ಪ್ರಶ್ನೆಗಳಿಗೆ ನಮ್ಮದೇ ರೀತಿಯ ಉತ್ತರಗಳು, ಮಕ್ಕಳ ಅಳು ನಗು, ಹಠಮಾರಿತನ ಇವುಗಳೊಂದಿಗೆ ನಮಗೆ ನಾವು ಭಾಗವಹಿಸುತ್ತಿದ್ದ ರೀತಿಯಲ್ಲಿಯೇ ಬದಲಾಗುತ್ತಾ ಸಾಗುವ ಬದುಕಿನ ಪಯಣ ಮತ್ತು ಹಿಂದಿನ ಬಾಲ್ಯದ ನೆನಪುಗಳು ಕಾಡುವ ರೀತಿಯೇ ಬೇರೆ.
ಮತ್ತೊಂದಿಷ್ಟು ವರ್ಷಗಳು ಕಳೆದು ಮಕ್ಕಳು ದೊಡ್ಡವರಾದ ಮೇಲೆ, ಮಧ್ಯ ವಯಸ್ಸಿನಲ್ಲಿ ಈ ರೀತಿಯ ಜಾತ್ರೆ ಉತ್ಸವಗಳಲ್ಲಿ ಸ್ವಲ್ಪ ನಿರುತ್ಸಾಹ, ನಿರಾಸೆಗಳೊಂದಿಗೆ, ಮತ್ತೆ ಜೀವನೋತ್ಸಾಹವನ್ನು ಬಲವಂತವಾಗಿ ತುಂಬಿಕೊಳ್ಳುತ್ತಾ ಪರಿಚಿತರೊಂದಿಗೆ ಈ ರೀತಿಯ ಜಾತ್ರೆಗಳಲ್ಲಿ ಭಾಗವಹಿಸುವುದೇ ಇನ್ನೊಂದು ರೀತಿಯ ಅನುಭವ.
ಇನ್ನೂ ಮುಂದೆ ವಯಸ್ಸಾದ ನಂತರ ಹಿರಿಯ ನಾಗರಿಕ ಪಟ್ಟದೊಂದಿಗೆ, ಸುಮಾರಾದ ಆರೋಗ್ಯದೊಂದಿಗೆ ಈ ಜಾತ್ರೆ ಉತ್ಸವಗಳಲ್ಲಿ ಭಾಗವಹಿಸುವಾಗಿನ ಅನುಭವಗಳು ಮತ್ತೊಂದು ಬಗೆಯದು. ಹಿರಿಯರೊಂದಿಗೆ ಬೆರೆಯುತ್ತಾ, ಇನ್ನೊಂದಿಷ್ಟು ಕಿರಿಯರೊಂದಿಗೆ ಕೊರೆಯುತ್ತಾ, ಏನೋ ಸಮಾಧಾನಕರ ಮನಸ್ಸಿನೊಂದಿಗೆ, ನಿರ್ಗಮಿಸುವ ಭಯದೊಂದಿಗೆ, ಕೆಲವೊಮ್ಮೆ ಬಲವಂತದಿಂದ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬದುಕಿನ ಪಯಣವು ಹೀಗೆ ಮುಂದುವರೆಯುತ್ತದೆ.
ನೋಡಿ ಹೇಗೆ ಈ ಉತ್ಸವಗಳು, ಜಾತ್ರೆಗಳು ನಮ್ಮ ಬದುಕಿನ ಭಾಗವಾಗಿ, ಕುಟುಂಬದ ಚಟುವಟಿಕೆಯಾಗಿ, ಸಾಂಸ್ಕೃತಿಕ, ಸಾಮಾಜಿಕ ವ್ಯವಸ್ಥೆಯಾಗಿ, ನಮ್ಮ ಆಸಕ್ತಿ ಹವ್ಯಾಸಗಳ ಜೊತೆಗಾರನಾಗಿ ಮುಂದುವರಿಯುತ್ತಿರುವ ಬಗೆಯೇ ಕೌತುಕಮಯ. ಇದನ್ನೆಲ್ಲಾ ಅನುಭವಿಸುತ್ತಾ ಬದುಕು ಮುಗಿಯುವುದೇ ಇಲ್ಲ ಎನ್ನುವ ಭಾವದೊಂದಿಗೆ ಸಾಗೋಣ, ಹಾಗೇ ಸುಮ್ಮನೆ ಜೀವನ ಸಂತೆಯಲ್ಲಿ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
