ಕಾಪು: ದಿನಾಂಕ:09-11-2025(ಹಾಯ್ ಉಡುಪಿ ನ್ಯೂಸ್) ಕಾಪು ಕಡೆಯಿಂದ ಕೋತಲಕಟ್ಟೆ ಕಡೆಗೆ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಸುತ್ತಿದ್ದ 407 ವಾಹನವನ್ನು ಕಾಪು ಪೊಲೀಸರು ವಶಪಡಿಸಿಕೊಂಡಿದ್ದು ಚಾಲಕನನ್ನು ಬಂಧಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯ ಗುಡುಸಾಬ್ ರವರು ದಿನಾಂಕ 07/11/2025 ರಂದು ಸಾಗರ ಕವಚ್ ಬಂದೋಬಸ್ತ್ ಕರ್ತವ್ಯದಲ್ಲಿ ಮಟ್ಟು ಕ್ರಾಸ್ ಚೆಕ್ ಪೋಸ್ಟ್ ಕರ್ತವ್ಯ ಮುಗಿಸಿ ಮರಳಿ ಠಾಣೆಗೆ ಬರುವಾಗ ಕಾಪು ತಾಲೂಕು ಉಳಿಯಾರಗೋಳಿ ಗ್ರಾಮದ ಕಾಪು ಕಡೆಯಿಂದ ಕೋತಲಕಟ್ಟೆ ಕಡೆಗೆ ದ್ಯಾವಯ್ಯ ಕೆ ಟಿ ಎಂಬಾತನು ಮಲ್ಲಾರು ನಿವಾಸಿ ಹಮ್ಜಾರವರಿಗೆ ಸೇರಿದ ವಾಹನದ ನಂಬ್ರ KA-20 AC-1204 ನೇ ನೊಂದಣಿಯ 407 ವಾಹನದಲ್ಲಿ ಬಾಡಿಯ ಮಟ್ಟದವರೆಗೆ ಸುಮಾರು 1 ಯೂನಿಟ್ ನಷ್ಟು ಮರಳನ್ನು ತುಂಬಿಸಿಕೊಂಡು ಬರುತ್ತಿದ್ದುದನ್ನು ನಿಲ್ಲಿಸಿ ಮರಳು ಸಾಗಾಟದ ಬಗ್ಗೆ ದಾಖಲೆ ವಿಚಾರಿಸಿದಾಗ ವಾಹನದಲ್ಲಿ ಮರಳನ್ನು ಸಾಗಾಟ ಮಾಡಲು ಟ್ರಿಪ್ ಶೀಟ್ ನ್ನು ಹೊಂದಿರುವುದಾಗಿ ತಿಳಿಸಿ ಟ್ರಿಪ್ ಶೀಟ್ ನ್ನು ಹಾಜರುಪಡಿಸಿದ್ದು, ಪರಿಶೀಲಿಸಿದಾಗ ಮರಳು ಸಾಗಾಟದ ಸಮಯ ದಿನಾಂಕ 07/11/2025 ರಂದು ಮಧ್ಯಾಹ್ನ 1:36 ಗಂಟೆಯಿಂದ 2:36 ಗಂಟೆಯವರೆಗೆ ಮಾತ್ರ ಇದ್ದು, ಆ ಬಗ್ಗೆ ಗುಡುಸಾಬ್ ಅವರು ಹೆಚ್ಚಾಗಿ ವಿಚಾರಿಸಿದಾಗ ತಾನು ಇದೇ ವಾಹನದಲ್ಲಿ ಮರಳು ಸಾಗಾಟ ಮಾಡಲು ದಿನಕ್ಕೆ ಒಂದು ಟ್ರಿಪ್ ಶೀಟ್ ನ್ನು ಪಡೆದುಕೊಂಡು ಅಧಿಕ ಲಾಭ ಮಾಡುವ ಉದ್ದೇಶದಿಂದ ಅದೇ ಟ್ರಿಪ್ ಶೀಟ್ ನಲ್ಲಿ ಅಲೆವೂರು ಗ್ರಾಮದ ಪಾಪನಾಸಿನಿ ಹೊಳೆಯಿಂದ ಹೆಚ್ಚುವರಿಯಾಗಿ ಮರಳನ್ನು ತೆಗೆದು ಇದೇ ವಾಹನದಲ್ಲಿ ಲೋಡ್ ಮಾಡಿ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಅದರಂತೆ ಈ ದಿನದ ಟ್ರಿಪ್ ಶೀಟ್ ಪಡೆದು ಅಲೆವೂರು ಗ್ರಾಮದ ಚಕ್ಷುಸ್ಪತಿ ಹೊಳೆಯಿಂದ ಮರಳನ್ನು ತೆಗೆಸಿ ವಾಹನಕ್ಕೆ ತುಂಬಿಸಿಕೊಂಡು ಮಧ್ಯಾಹ್ನ ಪಡೆದ ಟ್ರಿಪ್ ಶೀಟಿನಲ್ಲಿಯೇ ಹೆಚ್ಚುವರಿಯಾಗಿ ಕೋತಲಕಟ್ಟೆ ಕಡೆಗೆ ಮರಳನ್ನು ಸಾಗಾಟ ಮಾಡುತ್ತಿದ್ದುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ .
ಆರೋಪಿಗಳು ತಮ್ಮ ಸ್ವಂತ ಲಾಭದ ಉದ್ದೇಶಕ್ಕಾಗಿ ಸರ್ಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದು, ವ್ಯವಸ್ಥಿತವಾಗಿ ಅಪರಾಧ ಎಸಗುತ್ತಿರುವುದು ಕಂಡು ಬಂದಿದ್ದು, ಮರಳು ಸಾಗಿಸುತ್ತಿದ್ದ KA-20 AC-1204 ನೇ ನೊಂದಣಿಯ 407 ವಾಹನವನ್ನು ಹಾಗೂ ಅದರಲ್ಲಿದ್ದ ಸುಮಾರು 5,000 ರೂಪಾಯಿ ಬೆಲೆಬಾಳುವ 1 ಯೂನಿಟ್ ಮರಳನ್ನು ವಶಕ್ಕೆ ಪಡೆದುಕೊಂಡಿದ್ದು ಚಾಲಕನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 303(2) BNS & ಕಲಂ 4, 4(1A) 21 MMRD ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
