images-3.jpeg
Spread the love

ಕಾಪು : ದಿನಾಂಕ 18/10/2025 (ಹಾಯ್ ಉಡುಪಿ ನ್ಯೂಸ್)ಲಕ್ಷ್ಮೀ ಜನಾರ್ಧನ ದೇವಸ್ಥಾನದ ಗೋಪುರದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿ ಭಂಗ ನಡೆಸಿದ ಬಸ್ ಚಾಲಕ ಮತ್ತು ನಿರ್ವಾಹಕ,ಟೈಂ ಕೀಪರನ್ನು ಕಾಪು ಪೊಲೀಸ್‌ ಠಾಣೆಯ ಎಎಸ್ಐ ಜನಾರ್ಧನ ಮೂಲ್ಯ ಅವರು ಬಂಧಿಸಿದ್ದಾರೆ.

ಕಾಪು ಪೊಲೀಸ್‌ ಠಾಣೆ ಎ.ಎಸ್.ಐ ಜನಾರ್ಧನ ಮೂಲ್ಯ ಅವರು ದಿನಾಂಕ:17-10-2025ರಂದು ಕಾಪು ಪೇಟೆ, ಉಳಿಯಾರಗೋಳಿ ಹಾಗೂ ಮಂದಾರ ಹೋಟೆಲ್‌ ಬಳಿ ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ ಮಧ್ಯಾಹ್ನ  ಹೊತ್ತು ಕಾಪು ಪಡು ಗ್ರಾಮದ ಲಕ್ಷ್ಮೀ ಜನಾರ್ದನ ದೇವಸ್ಥಾನದ ಗೋಪುರದ ಬಳಿ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ಬಸ್ಸು ನಿಲ್ದಾಣದ ಸಾರ್ವಜನಿಕ ರಸ್ತೆಯಲ್ಲಿ ಓರ್ವ ಬಸ್ಸು ಚಾಲಕನು ತನ್ನ ಬಸ್ಸನ್ನು ಸಾರ್ವಜನಿಕ ರಸ್ತೆಯ ಮಧ್ಯಭಾಗದಲ್ಲಿ ನಿಲ್ಲಿಸಿ ಅದರ ನಿರ್ವಾಹಕ ಹಾಗೂ ಚಾಲಕ ಮತ್ತು ಟೈಮ್‌ ಕೀಪರ್‌ ನಡುವೆ ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಕೈಯಲ್ಲಿ ದೂಡಾಡಿಕೊಂಡು ಅವಾಚ್ಯ ಶಬ್ದದಿಂದ ಬೈದಾಡಿಕೊಂಡು ಜಗಳವಾಡುತ್ತಿದ್ದದ್ದನ್ನು ಕಂಡು ಅವರ ಬಳಿ ಹೋಗಿದ್ದಾರೆ ಎನ್ನಲಾಗಿದೆ.

ಪೊಲೀಸರು ಸ್ಥಳಕ್ಕೆ ಹೋದಾಗ KA-20-AC-0727 ನೇ ನಂಬ್ರದ AYRA ಎಂಬ ಹೆಸರಿನ ಬಸ್ಸಾಗಿದ್ದು ಅದರ ಚಾಲಕನ ಹೆಸರು ರೋಲ್ವಿನ್‌ ನೊರೊನ್ಹ, ಬಸ್ಸಿನ ನಿರ್ವಾಹಕನ ಹೆಸರು ರಾಜೇಶ್‌ ಹಾಗೂ ಟೈಮ್‌ ಕೀಪರ್‌ ಪ್ರವೀಣ ಎಂಬುದಾಗಿ ತಿಳಿಸಿದ್ದು, KA-20-AC-0727 ನೇ ಬಸ್ಸನ್ನು ಹಾಗೂ ಗಲಾಟೆ ಮಾಡಿದ ರೋಲ್ವಿನ್‌ ನೊರೊನ್ಹ, ರಾಜೇಶ್‌ ಶೆಟ್ಟಿ ಹಾಗೂ ಪ್ರವೀಣ ಇವರನ್ನು ದಿನಾಂಕ 17/10/2025 ರಂದು ಮಧ್ಯಾಹ್ನ ಬಂಧಿಸಿ ವಶಕ್ಕೆ ಪಡೆದು ಅವರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡಿ ಇತರ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಕಲಂ: 194(2), 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!