ಬೈಂದೂರು: ದಿನಾಂಕ : 15/10/2025(ಹಾಯ್ ಉಡುಪಿ ನ್ಯೂಸ್) ಕೊಡೇರಿ ಎಡಮಾವಿನ ಹೊಳೆಯಲ್ಲಿ ಅಕ್ರಮವಾಗಿ ಮರಳು ಕಳ್ಳತನ ನಡೆಸುತ್ತಿದ್ದ ಮೂವರನ್ನು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ ಬಿ ಎನ್ ಅವರು ಬಂಧಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ ಬಿ ಎನ್ ಅವರು ದಿನಾಂಕ :14-10-2025 ರಂದು ಠಾಣಾ ಸರಹದ್ದಿನ ಕಿರಿಮಂಜೇಶ್ವರ ಗ್ರಾಮದಲ್ಲಿ ರೌಂಡ್ಸ ನಲ್ಲಿದ್ದಾಗ ಕಿರಿಮಂಜೇಶ್ವರ ಕೊಡೇರಿ ಎಡಮಾವಿನ ಹೊಳೆಯಲ್ಲಿ ಮೂರು ಮಂದಿ ದೋಣಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದಾಗಿ ಸಾರ್ವಜನಿಕ ರಿಂದ ಮಾಹಿತಿ ದೊರೆತ ಮೇರೆಗೆ ಕೂಡಲೇ ಸ್ಥಳಕ್ಕೆ ಹೋದಾಗ ಎಡಮಾವಿನ ಹೊಳೆಯ ಪಶ್ಚಿಮ ಬದಿಯ ದಡದಲ್ಲಿ ಒಂದು ದೋಣಿ ಹೊಳೆಯ ದಡದಲ್ಲಿ ನಿಲ್ಲಿಸಿ ಮೂರು ಮಂದಿ ವ್ಯಕ್ತಿಗಳು ಸಿಮೆಂಟ್ ಚೀಲದಲ್ಲಿ ತುಂಬಿ ಹೊಳೆಯಿಂದ ಆಗಾತನೇ ತೆಗೆದ ಮರಳನ್ನು ದಡದಲ್ಲಿ ಒಂದರ ಮೇಲೆ ಒಂದರಂತೆ ಕೂಡಿ ಇಡುತ್ತಿದ್ದು ಅವರನ್ನು ಪೊಲೀಸರು ಸುತ್ತುವರಿದು ಬಂಧಿಸಿ ವಶಕ್ಕೆ ಪಡೆದು ಮರಳುಗಾರಿಕೆ ನಡೆಸಲು ಸಂಬಂಧಪಟ್ಟ ಇಲಾಖೆಯ ಪರವಾನಿಗೆ ಇದೆಯೋ ಎಂದು ಕೇಳಿದಾಗ ಯಾವುದೇ ಪರವಾನಿಗೆ ಇಲ್ಲವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ವಿಚಾರಿಸಿದಾಗ 1. ಸುರೇಶ ಪೂಜಾರಿ (39), 2.ನಾಗೇಶ ಪೂಜಾರಿ (23), ಮತ್ತು 3. ಶರಣ ದೇವಾಡಿಗ (23) ಕಿರಿಮಂಜೇಶ್ವರ ಗ್ರಾಮದವರು ಎಂಬುದಾಗಿ ತಿಳಿಸಿದ್ದು ಅಪಾದಿತರ ವಶ ಸ್ಥಳದಲ್ಲಿದ್ದ ದೋಣಿ -1, ದೋಣಿ ಚಲಾಯಿಸಲು ಉಪಯೋಗಿಸುವ ಸುಮಾರು 15 ಅಡಿ ಉದ್ದದ ಬಿದಿರಿನ ಕೋಲು (ತೆಮೆ) -2, ಖಾಲಿ ಸಿಮೇಂಟ್ ಚೀಲಗಳು -16 ಹಾಗೂ ಸಣ್ಣ ಸಣ್ಣ ರಂದ್ರ ಮಾಡಿರುವ ಕಬ್ಬಿಣದ ಬಕೇಟ್‌ಗಳು -3 ಹಾಗೂ ಮರಳು ತುಂಬಿದ ಚೀಲಗಳು – 92 ಒಟ್ಟು 1 ಯೂನಿಟ್ ವಶಪಡಿಸಿಕೊಂಡಿದ್ದಾರೆ.
ಅಪಾದಿತರು ತಮ್ಮ ಸ್ವಂತ ಲಾಭಕ್ಕಾಗಿ ಅಕ್ರಮ ಸಂಪಾದನೆ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆಯನ್ನು ಪಡೆದುಕೊಳ್ಳದೇ ದೋಣಿಯಲ್ಲಿ ಎಡಮಾವಿನ ಹೊಳೆಯಿಂದ ಮರಳನ್ನು ಕಳವು ಮಾಡಿ ಸಾಗಾಟ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಮರಳನ್ನು ಸಂಗ್ರಹಿಸಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 303 (2) ಜೊತೆಗೆ 3(5) BNS & 4, 21 MMDR Act 1957 ರಂತೆ ಪ್ರಕರಣ ದಾಖಲಾಗಿದೆ.
