ಉಡುಪಿ: (ಹಾಯ್ ಉಡುಪಿ ನ್ಯೂಸ್)ನಗರದ ನರ್ಮ್ ಸರಕಾರಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುತ್ತ ಹೊಡೆದಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಉಡುಪಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್ ಅವರು ಬಂಧಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್ ಅವರು ಠಾಣೆಯ ಸರಹದ್ದಿನಲ್ಲಿ ಹಗಲು ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ ವೇಳೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ನರ್ಮ್ ಸರ್ಕಾರಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಜನ ಆರೋಪಿಗಳು ತಮ್ಮೊಳಗೆ ಜಗಳವಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಪರಸ್ಪರ ದೂಡಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದವರನ್ನು ನೋಡಿ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತಿಸಬಾರದು ಎಂದು ಹೇಳಿದರೂ ಕೂಡ ಆರೋಪಿಗಳು ಪರಸ್ಪರ ಬೈದಾಡುತ್ತಾ ದೂಡಾಡಿಕೊಂಡು ಕೈ-ಕೈ ಮಿಲಾಯಿಸುತ್ತಿರುವುದನ್ನು ಮುಂದುವರಿಸಿದ್ದ ಕಾರಣ ಪೊಲೀಸರು ಅವರನ್ನು ಬಂಧಿಸಲು ಸಜ್ಜಾಗುತ್ತಿದ್ದಂತೆಯೇ ಆ ಸಮಯ ಇಬ್ಬರು ಆರೋಪಿಗಳು ಓಡಿ ಹೋಗಿದ್ದು, ಸೆರೆ ಹಿಡಿದ ಉಳಿದ ಇಬ್ಬರು ಆರೋಪಿಗಳ ಹೆಸರು 1) ಪ್ರವೀಣ್ ಮತ್ತು 2) ಬಂಗಾರಪ್ಪ ಎಂಬವರಾಗಿದ್ದು ಅವರಿಬ್ಬರನ್ನು ಬಂಧಿಸಿದ್ದಾರೆ .
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 194(2) BNS ರಂತೆ ಪ್ರಕರಣ ದಾಖಲಾಗಿದೆ.
