ಅಜೆಕಾರು: ದಿನಾಂಕ 27.09.2025 (ಹಾಯ್ ಉಡುಪಿ ನ್ಯೂಸ್) ಹೆಬ್ರಿ ಕಡೆಗೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಲೆಂದು ಸಾಗಾಟ ನಡೆಸುತ್ತಿದ್ದ ಇಬ್ಬರನ್ನು ಅಜೆಕಾರು ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಮಹೇಶ ಟಿಎಮ್ ಅವರು ಬಂಧಿಸಿದ್ದಾರೆ.
ಅಜೆಕಾರು ಪೊಲೀಸ್ ಠಾಣೆ, ಪಿಎಸ್ಐ ಮಹೇಶ ಟಿಎಮ್ ಅವರು ಸಿಬ್ಬಂದಿಯವರೊಂದಿಗೆ ದಿನಾಂಕ:27-09-2025 ರಂದು ರಾತ್ರಿ 12:15 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಮಾಹಿತಿದಾರರೊಬ್ಬರು ಕರೆ ಮಾಡಿ ಅಂಡಾರು ಕಡೆಯಿಂದ ಅಕ್ರಮವಾಗಿ ಮಾಂಸಕ್ಕಾಗಿ ವಧೆ ಮಾಡಲು ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಹೆಬ್ರಿ ಕಡೆ ಸಾಗಾಟ ಮಾಡುತ್ತಿರುವುದಾಗಿ ನೀಡಿದ ಮಾಹಿತಿಯಂತೆ ಕಾಡುಹೊಳೆ ಅಂಡಾರು ರಸ್ತೆಯ ಕೊಂದಲ್ಕೆ ಎಂಬಲ್ಲಿಗೆ ರಾತ್ರಿ 12:30 ಗಂಟೆಗೆ ಬಂದು ವಾಹನ ತಪಾಸಣೆ ನಡೆಸುತ್ತಿದ್ದ ಸಮಯ ಅಂಡಾರು ಕಡೆಯಿಂದ ಬಂದ ಒಂದು ಮಹೀಂದ್ರ ಪಿಕಪ್ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ವಾಹನವನ್ನು ನಿಲ್ಲಿಸಿ, ಆರೋಪಿಗಳು ವಾಹನದಿಂದ ಇಳಿದು ಓಡಲು ಯತ್ನಿಸಿದವರನ್ನು ಸಿಬ್ಬಂದಿಯವರ ಸಹಾಯದಿಂದ ತಡೆದು ನಿಲ್ಲಿಸಿ ವಿಚಾರಿಸಿದಾಗ ವಾಹನದ ನಂಬ್ರ KA 14 B 5868 ನೇದರಲ್ಲಿ ಅಂಡಾರು ಗರಡಿಯ ಬಳಿಯಿಂದ ಕಳವು ಮಾಡಿ ಯಾವುದೇ ಪರವಾನಿಗೆ ಇಲ್ಲದೇ ಎರಡು ದನಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ ಎನ್ನಲಾಗಿದೆ.
ಒಂದು ದನವು ಸುಮಾರು 4 ವರ್ಷ ಪ್ರಾಯದ ನಸುಗೆಂಪು ಬಣ್ಣದ, ಜೆರ್ಸಿ ದನ ಆಗಿದ್ದು, ಇದರ ಮೌಲ್ಯ ಸುಮಾರು 20,000/- ಆಗಬಹುದು. ಹಾಗೂ ಇನ್ನೊಂದು ದನವು ಕಪ್ಪು ಬಣ್ಣದ ಸುಮಾರು 4 ವರ್ಷ ಪ್ರಾಯದ ಮಿಶ್ರ ತಳಿಯ ಹಸು ಆಗಿದ್ದು, ಇದರ ಮೌಲ್ಯ ರೂ. 12,000/- ಆಗಬಹುದು. ಹಾಗೂ KA 14 B 5868 ಪಿಕಪ್ ವಾಹನದ ಅಂದಾಜು ಮೌಲ್ಯ ರೂ. 5,00,000/-ಆಗಬಹುದು.
ಆರೋಪಿತರುಗಳಾದ 1] ರಂಗನಾಥ, (32), ತಮ್ಮಡಿಹಳ್ಳಿ, ಆಯನೂರು, ಶಿವಮೊಗ್ಗ ಜಿಲ್ಲೆ 2] ಸುಂದರ, (57), ಪಡ್ಡಾಯಿಮಾರು, ಶಿರ್ಲಾಲು ಗ್ರಾಮ, ಕಾರ್ಕಳ ತಾಲೂಕು, ಇವರುಗಳನ್ನು ಬಂಧಿಸಲಾಗಿದ್ದು, ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಕಲಂ: 303(2) ಬಿ.ಎನ್.ಎಸ್ 2023, ಕಲಂ: 4,5,7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ-2020, ಕಲಂ : 11(1)(ಡಿ) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ- 1960 ರಂತೆ ಪ್ರಕರಣ ದಾಖಲಾಗಿದೆ.
