ದಿನಾಂಕ:24-09-2025(ಹಾಯ್ ಉಡುಪಿ ನ್ಯೂಸ್)
ಪದ್ಮಭೂಷಣ ,ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್‌ಎಲ್ ಭೈರಪ್ಪ ನವರು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 94 ವರ್ಷದ ಭೈರಪ್ಪನವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಮಧ್ಯಾಹ್ನ 2.38ಕ್ಕೆ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಭೈರಪ್ಪನವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಮುಖಂಡರು, ಸಾಹಿತಿಗಳು, ಸಿನಿಮಾ ತಾರೆಯರು ಸಂತಾಪ ಸೂಚಿಸಿದ್ದಾರೆ.
ಎಸ್ಎಲ್ ಭೈರಪ್ಪ ದೇಶದ ಆತ್ಮಸಾಕ್ಷಿಯನ್ನು ಕದಲಿಸಿದ ಮತ್ತು ಭಾರತದ ಆತ್ಮವನ್ನು ಆಳವಾಗಿ ಅಧ್ಯಯನ ಮಾಡಿದ ಅತ್ಯುನ್ನತ ಸಾಹಿತಿ ಎಂದು ಬಣ್ಣಿಸಿದ್ದಾರೆ. ಎಸ್.ಎಲ್ ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ ,ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ನಾಳೆ ಬೆಳಿಗ್ಗೆ 8 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ. 2 ಗಂಟೆ ನಂತರ ಪಾರ್ಥವ ಶರೀರವನ್ನು ಮೈಸೂರಿಗೆ ಸಾಗಿಸಲಾಗುತ್ತದೆ. ಇನ್ನು ಸೆ. 26ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಲಿದೆ.
