ಉಡುಪಿ: ದಿನಾಂಕ:17-09-2025 (ಹಾಯ್ ಉಡುಪಿ ನ್ಯೂಸ್) ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸರ್ಜನ್ ಕುರ್ಚಿ ಯಲ್ಲಿ ಖಾಯಂ ಆಗಿ ಕೂರಲು ಅಶೋಕ್. ಹೆಚ್ ಎಂಬ ವೈದ್ಯಾಧಿಕಾರಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವುದು ಒಂದೆಡೆಯಾದರೆ. ಸರ್ಜನ್ ಆಗಿ ಹೆಸರಿಗೆ ಮಾತ್ರ ನೇಮಿಸಲ್ಪಟ್ಟಿರುವ ನಿತ್ಯಾನಂದ ನಾಯಕ್ ಅವರು ಸರ್ಜನ್ ಕೊಠಡಿಗೆ ಕಾಲಿಡಲೂ ಅಧಿಕಾರವಿಲ್ಲದೆ ಮೌನಕ್ಕೆ ಶರಣಾಗಿದ್ದಾರೆ.
ಈ ಹಿಂದಿನ ಉಡುಪಿ ಜಿಲ್ಲಾ ಸರ್ಜನ್ ಆಗಿದ್ದ ಅಶೋಕ್ ಹೆಚ್ ಅವರು ಈಗಾಗಲೇ ಉಡುಪಿ ಜಿಲ್ಲೆಯಿಂದ ವರ್ಗಾವಣೆ ಗೊಂಡಿದ್ದರೂ ಕೂಡ ಪ್ರಭಾವಿ ಉದ್ಯಮಿಗಳ, ಕಾಂಗ್ರೆಸ್ ನಾಯಕರ ಕ್ರಪಾಕಟಾಕ್ಷದಿಂದ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿಯೇ ಇನ್ನೂ ಕೂಡ ಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು ತನ್ನ ಪವಾಡವನ್ನು ಪ್ರದರ್ಶಿಸುತ್ತಿದ್ದಾರೆ!!!
ಜಿಲ್ಲೆಯ ಶಾಸಕರುಗಳು, ಜಿಲ್ಲಾ ಉಸ್ತುವಾರಿ ಸಚಿವರು ,ಆರೋಗ್ಯ ಸಚಿವರು ಯಾರಾದರೂ ತಿಂಗಳಿಗೆ ಒಂದು ಬಾರಿಯಾದರೂ ಈ ಜಿಲ್ಲಾ ಆಸ್ಪತ್ರೆಯ ಒಳಗೆ ವಾರ್ಡ್ ಗಳಲ್ಲಿ ಸುತ್ತಾಡಿ ರೋಗಿಗಳ, ಸಾರ್ವಜನಿಕರ ಕಷ್ಟ ಸುಖ ವಿಚಾರಿಸುವ ಹವ್ಯಾಸ ಬೆಳೆಸಿ ಕೊಂಡಿದ್ದರೆ ಇಂದು ಉಡುಪಿ ಜಿಲ್ಲಾ ಆಸ್ಪತ್ರೆ ಗೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ.
ಇದೀಗ ಇಲ್ಲಿ ವೈದ್ಯಕೀಯ ಯಂತ್ರೋಪಕರಣಗಳು ಇದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿ ಹಾಗೆ. ಉಪಕರಣ ಸರಿ ಇಲ್ಲ, ತಂತ್ರಜ್ಞ ರಿಲ್ಲ ಎಂಬ ಕಾರಣ ನೀಡಿ ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಗೆಲ್ಲಾ ಹೊರಗಡೆ ಖಾಸಗಿಯವರೆಡೆಗೆ ಹೋಗುವಂತೆ ಇಲ್ಲಿನ ವೈದ್ಯಾಧಿಕಾರಿಗಳು ಉಚಿತ ಸಲಹೆ ನೀಡುತ್ತಾರೆ ಎಂದು ನೊಂದ ಸಾರ್ವಜನಿಕರು ದೂರಿ ಕೊಂಡಿದ್ದಾರೆ.
ಉಡುಪಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಕೊಠಡಿಯೇ ರೋಗಗ್ರಸ್ಥ ವಾಗಿದ್ದು ಮೊದಲು ಸರ್ಜನ್ ಕೊಠಡಿಯಿಂದಲೇ ಚಿಕಿತ್ಸೆ ಪ್ರಾರಂಭಿಸ ಬೇಕಾಗಿದೆ. ಗೆದ್ದಲು ಹಿಡಿದು ಅವಮಾನಿತ ಸರ್ಜನ್ ಕುರ್ಚಿಯಲ್ಲಿ ಯೋಗ್ಯ ರನ್ನು ತಂದು ಕೂರಿಸುವ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ನಿಭಾಯಿಸ ಬೇಕಾಗಿದೆ.
ಜಿಲ್ಲಾ ಆಸ್ಪತ್ರೆಯ ಗುತ್ತಿಗೆ ನೌಕರರು ಇನ್ನೇನು ಭಿಕ್ಷೆ ಬೇಡಬೇಕೆ?
ಈ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸಿಂಗ್, ಲ್ಯಾಬ್, ಡಾಟಾ ಎಂಟ್ರಿ,ಡಿ,ಗ್ರೂಫ್,ಆಯುಷ್ಮಾನ್ ವಿಭಾಗ ಟೆಕ್ನೀಷಿಯನ್, ಸ್ವಚ್ಛತಾ ಕೆಲಸಗಾರರು ಇನ್ನಿತರ ಕೆಲಸಗಾರರು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ಕಳೆದ ಐದು ತಿಂಗಳಿಂದ ವೇತನವಾಗದೆ ಇದ್ದು ಇವರ ಪರಿಸ್ಥಿತಿ ಜೀವನ ನಿರ್ವಹಣೆಗೆ ಸಾಲ ಮಾಡಿ ಮಾನ ಕಳೆದು ಕೊಳ್ಳುವಂತಾಗಿದೆ ಎನ್ನಲಾಗಿದೆ.
ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದು,ಐದು ತಿಂಗಳಿಂದ ಮನೆ ಬಾಡಿಗೆ ಬಾಕಿ ಇದೆಯೆಂದು ಮನೆ ಬಾಡಿಗೆ ಕೊಡಲು ಹಣವಿಲ್ಲದ ಈ ನೌಕರರನ್ನು ಮನೆ ಮಾಲೀಕರು ಮನೆಬಿಟ್ಟು ತೆರಳುವಂತೆ ಸೂಚಿಸುತ್ತಿದ್ದಾರೆ . ಅಂಗಡಿ ರೇಷನ್ ಹಣ ಬಾಕಿ ಎಲ್ಲಾ ಕಡೆ ಬಾಕಿ ಯಲ್ಲೇ ದಿನ ಕಳೆಯುವ ಈ ಗುತ್ತಿಗೆ ಕಾರ್ಮಿಕರು ಈ ಬಾರಿ ಗಣೇಶ ಹಬ್ಬ, ಶ್ರೀ ಕ್ರಿಷ್ಣ ಜನ್ಮಾಷ್ಟಮಿ ಹಬ್ಬವನ್ನೂ ಆಚರಿಸಲು ಸಾಲ ನೀಡುವವರ ಮುಂದೆ ತಲೆಬಾಗುವಂತ ದುಸ್ಥಿತಿ ಬಂತು ಎಂದು ತಮ್ಮ ಅಳಲನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಮಾನ್ಯ ಶಾಸಕರೇ, ಉಸ್ತುವಾರಿ ಸಚಿವರೇ , ಆರೋಗ್ಯ ಸಚಿವರೇ ಇನ್ನೂ ಮುಂದೆ ಹೋಗಿ ಮುಖ್ಯಮಂತ್ರಿಗಳೇ ಉಡುಪಿ ಜಿಲ್ಲಾ ಆಸ್ಪತ್ರೆಯ ಗುತ್ತಿಗೆ ನೌಕರರು ಈ ಬಾರಿ ನವರಾತ್ರಿ, ದೀಪಾವಳಿ ಹಬ್ಬಕ್ಕೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀವೆಲ್ಲರೂ ಎಲ್ಲೆಲ್ಲೋ ಪಾದಯಾತ್ರೆ ಮಾಡುವ ಬದಲು ಒಮ್ಮೆ ಈ ಜಿಲ್ಲಾ ಆಸ್ಪತ್ರೆ ಎಂಬ ಬಡವರ ಪಾಲಿನ ದೇವಾಲಯಕ್ಕೆ ಪಾದಯಾತ್ರೆ ಮಾಡಿ ಪುಣ್ಯ ಕಟ್ಟಿ ಕೊಳ್ಳಿ. ಬಡ ರೋಗಿಗಳ,ಬಡ ಗುತ್ತಿಗೆ ನೌಕರರ ಸಮಸ್ಯೆ ಏನೆಂದು ತಿಳಿದು ಶಾಶ್ವತ ಪರಿಹಾರ ಕೊಡಿ. ಗುತ್ತಿಗೆ ನೌಕರರಿಗೆ ಪ್ರತಿ ತಿಂಗಳು ತಪ್ಪದೇ ವೇತನ ಲಭಿಸುವಂತೆ ಕ್ರಮ ಕೈಗೊಳ್ಳುವ ಮೂಲಕ ತಾವುಗಳು ಸಮರ್ಥ ಜನಪ್ರತಿನಿಧಿಗಳೆಂದು ಸಾಬೀತುಪಡಿಸುವಿರೇ?


