ದಿನಾಂಕ:06-09-2025 (ಹಾಯ್ ಉಡುಪಿ ನ್ಯೂಸ್)
ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ EVM ಬದಲು ಬ್ಯಾಲೆಟ್ ಪೇಪರ್ ಬಳಸಲು ರಾಜ್ಯಸರ್ಕಾರದ ನಿರ್ಧಾರ ಪರ ,ವಿರೋಧ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಮತಪತ್ರ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದರೆ ಕಾಂಗ್ರೆಸ್ ಮತಪತ್ರ ಬಳಸುವುದನ್ನು ಸಮರ್ಥಿಸಿಕೊಂಡಿದ್ದು ಕಾನೂನಿನಲ್ಲೇ ಇದಕ್ಕೆ ಅವಕಾಶವಿದೆ ಎಂದಿದೆ. ಬ್ಯಾಲೆಟ್ ಪೇಪರ್ ಬಳಕೆ ಕುರಿತಂತೆ ಆರೋಪ-ಪ್ರತ್ಯಾರೋಪಗಳ ನಡುವೆ ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ EVM ಬದಲು ಬ್ಯಾಲೆಟ್ ಪೇಪರ್ ಬಳಸಲು ನಾವು ಸಿದ್ಧರಿದ್ದೇವೆ. ಈಗಿರುವ ಕೆಲ ನಿಯಮಗಳಿಗೆ ರಾಜ್ಯಸರ್ಕಾರ ತಿದ್ದುಪಡಿ ಮಾಡಿದರೆ ಮತಪತ್ರಗಳ ಮೂಲಕವೇ ಚುನಾವಣೆ ನಡೆಸಲು ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದೆ. ಮತ ಪತ್ರಗಳ ಬಳಕೆಯಿಂದ ಚುನಾವಣಾ ಅಕ್ರಮವೆಸಗಬಹುದು. ಮತಗಟ್ಟೆಗಳಲ್ಲಿ ದೌರ್ಜನ್ಯ ಮೆರೆಯಬಹುದು, ಎಗ್ಗಿಲ್ಲದೆ ಕಳ್ಳ ಮತದಾನವನ್ನು ಮಾಡಬಹುದು ಎಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್ ಬ್ಯಾಲೆಟ್ ಪೇಪರ್ ಆಧರಿಸಿದ ಚುನಾವಣೆಯನ್ನು ರಾಹುಲ್‌ಗಾಂಧಿ ನೇತೃತ್ವದಲ್ಲಿ ಬೆಂಬಲಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.
