Spread the love

ಬೇವು ಬಿತ್ತಿ ಮಾವು ಬೆಳೆಯಲು ಸಾಧ್ಯವಿಲ್ಲ ಪದ್ಮ ವಿಭೂಷಣ, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀಯುತ ಡಿ. ವೀರೇಂದ್ರ ಹೆಗಡೆಯವರೇ ಮತ್ತು ಆ ರೀತಿಯ ಕರ್ನಾಟಕದ ಮಹತ್ವದ ವ್ಯಕ್ತಿಗಳೇ………

ಕಳೆದ 75 ವರ್ಷಗಳ ಕರ್ನಾಟಕದ ಇತಿಹಾಸದಲ್ಲಿ ರಾಜಕೀಯ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಧರ್ಮಸ್ಥಳ ಮತ್ತು ಅದರ ಮುಖ್ಯಸ್ಥರಾದ ವೀರೇಂದ್ರ ಹೆಗಡೆಯವರ ಪಾತ್ರವೂ ಇದೆ. ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಕೇಂದ್ರವಾಗಿ ಕರ್ನಾಟಕದಲ್ಲಿ ಧರ್ಮಸ್ಥಳ ಮುಂಚೂಣಿಯಲ್ಲಿದೆ. ದಿನಕ್ಕೆ ಕನಿಷ್ಠವೆಂದರು 20 ರಿಂದ 30,000 ಭಕ್ತಾದಿಗಳು, ವಾರಾಂತ್ಯ ಮತ್ತು ವಿಶೇಷ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಅಲ್ಲಿ ಸೇರುತ್ತಾರೆ.

ನಿಮ್ಮ ಸಂಸ್ಥೆ ಉಚಿತ ಊಟದ ವ್ಯವಸ್ಥೆಯ ಜೊತೆಗೆ, ಕಡಿಮೆ ಬೆಲೆಯ ವಸತಿ ಸೌಕರ್ಯವನ್ನು ಒದಗಿಸುತ್ತಿದೆ. ಅನೇಕ ಶಿಕ್ಷಣ ಸಂಸ್ಥೆಗಳನ್ನು, ವೈದ್ಯಕೀಯ ಸಂಸ್ಥೆಗಳನ್ನು ನಡೆಸುತ್ತಿದೆ. ಆರ್ಥಿಕ ಕ್ಷೇತ್ರದಲ್ಲಿಯೂ ತಾವು ಹಣಕಾಸು ವ್ಯವಹಾರವನ್ನು ನಿರ್ವಹಿಸುತ್ತಿದ್ದೀರಿ. ರಾಜಕೀಯವಾಗಿ ಎಲ್ಲಾ ಪಕ್ಷದ ನಾಯಕರೊಂದಿಗೆ ಸಂಪರ್ಕದಲ್ಲಿದ್ದೀರಿ ಮತ್ತು ಈಗ ರಾಜ್ಯಸಭಾ ಸದಸ್ಯರೂ ಆಗಿದ್ದೀರಿ. ಧರ್ಮಾಧಿಕಾರಿ, ಖಾವಂದರು ಎಂಬ ಬಿರುದನ್ನು ಹೊಂದಿದ್ದೀರಿ. ಅನೇಕ ಈ ಸಮಾಜದ ಗಣ್ಯಾತಿಗಣ್ಯ ವ್ಯಕ್ತಿಗಳು ನಿಮ್ಮ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ.

ಶ್ರೀ ವೀರೇಂದ್ರ ಹೆಗಡೆಯವರೇ, ಸುಮಾರು 75 ವರ್ಷದ ನಿಮ್ಮ ಬದುಕು ನಿಮಗೆ ಬಹಳಷ್ಟು ನೀಡಿದೆ. ತಾಯಿಯ ಹೊಟ್ಟೆಯಲ್ಲಿ ಅಥವಾ ಹುಟ್ಟಿದ ತಕ್ಷಣ ಸಾಯುವ ಪುಟ್ಟ ಮಗುವಿನಿಂದ ಹೇಳ ಹೆಸರಿಲ್ಲದಂತೆಯೇ 70/80 ವರ್ಷಗಳ ಕಠಿಣಾತಿಕಠಿಣ ಬದುಕನ್ನೇ ಸವೆಸಿ ಇಲ್ಲವಾಗುವ ಅಸಂಖ್ಯಾತ ಮನುಷ್ಯರ ನಡುವೆ ನಿಮ್ಮ ಬದುಕು ಸಾರ್ವಜನಿಕವಾಗಿ ಸಾಕಷ್ಟು ತೃಪ್ತಿದಾಯಕವಾಗಿದೆ, ಸಾಧನೀಯವಾಗಿದೆ ಎಂದು ಭಾವಿಸಬಹುದು.

ಹೀಗಿರಬೇಕಾದರೆ ಇತ್ತೀಚಿನ ಕೆಲವು ವರ್ಷಗಳಿಂದ ನೀವೇ ಮುಖ್ಯಸ್ಥರಾಗಿರುವ ಧರ್ಮಸ್ಥಳದ ಮೇಲೆ, ಪರೋಕ್ಷವಾಗಿ ನಿಮ್ಮ ಮೇಲೆ ಒಂದಷ್ಟು ಅಪರಾಧಗಳ ಆರೋಪ ಬಂದಿದೆ. ಎಷ್ಟೆಲ್ಲಾ ಸುಖ-ಭೋಗಗಳನ್ನು ಕೊಟ್ಟ ಬದುಕು ಕೆಲವು ಸಂದರ್ಭಗಳಲ್ಲಿ ಕಷ್ಟಗಳನ್ನು, ನೋವುಗಳನ್ನು ಕೊಡುತ್ತದೆ. ಅದು ನಮ್ಮ ನಿಜವಾದ ವ್ಯಕ್ತಿತ್ವವನ್ನು ಅನಾವರಣಗೊಳಿಸುವುದಲ್ಲದೆ, ನಿಜ ವ್ಯಕ್ತಿತ್ವವನ್ನು, ಕೆಲವೊಮ್ಮೆ ಮುಖವಾಡವನ್ನು ಬಯಲು ಮಾಡುತ್ತದೆ. ಜೀವನದ ಎಲ್ಲಾ ಸತ್ವ ಮತ್ತು ಟೊಳ್ಳುಗಳನ್ನು ನಮಗೆ ಅರ್ಥ ಮಾಡಿಸುತ್ತದೆ.

ಮೊನ್ನೆಯ ಒಂದು ಸಂದರ್ಶನದಲ್ಲಿ ನೀವು ಈ ಎಲ್ಲಾ ಘಟನೆಗಳಿಂದ, ಕೆಲವರ ಷಡ್ಯಂತ್ರದಿಂದ ತಮಗೆ ತುಂಬಾ ನೋವಾಗಿರುವುದಾಗಿ ಹೇಳಿದ್ದೀರಿ. ಹೆಗಡೆಯವರೇ, ಈ ಸಮಾಜದ ಇಂದಿನ ಪರಿಸ್ಥಿತಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ, ಅರಿವಿನಿಂದ ಅಥವಾ ಅರಿವಿಲ್ಲದೆ ನೀವು ಮತ್ತು ನಿಮ್ಮಂತ ಅನೇಕ ಕರ್ನಾಟಕ ರತ್ನ, ಪದ್ಮ ಪ್ರಶಸ್ತಿ, ಜ್ಞಾನಪೀಠ ಮುಂತಾದ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ರಾಜಕೀಯ, ಆಡಳಿತ, ನ್ಯಾಯಾಂಗದ ದೊಡ್ಡ ಹುದ್ದೆಗಳನ್ನು ಪಡೆದ, ಸಾಮಾಜಿಕ ಹೋರಾಟದ ನಾಯಕತ್ವ, ವಿಜ್ಞಾನ, ಕ್ರೀಡೆ, ಸಿನಿಮಾ ಸೇರಿದಂತೆ ಸಾಧಕ ಪ್ರಶಸ್ತಿಗಳನ್ನು ಪಡೆದ ಎಲ್ಲಾ ಕ್ಷೇತ್ರಗಳ ಎಲ್ಲಾ ವ್ಯಕ್ತಿಗಳಿಗೂ, ಇಲ್ಲಿಯವರೆಗೂ ರಾಜಕೀಯ ಮತ್ತು ಆಡಳಿತದ ಅಧಿಕಾರ ಅನುಭವಿಸಿದ ಎಲ್ಲರಿಗೂ ಇದನ್ನು ಅನ್ವಯಿಸುತ್ತಾ,

ಎಲ್ಲರೂ ಇದಕ್ಕೆ ಜವಾಬ್ದಾರರು. ಇಡೀ ಸಮಾಜವನ್ನು ಈ ದುಸ್ಥಿತಿಗೆ ತಳ್ಳಿ ತಾವು ಮಾತ್ರ ಪ್ರಶಸ್ತಿ, ಅಧಿಕಾರ, ಹಣ, ಅಂತಸ್ತುಗಳನ್ನು ಪಡೆದು ಸುಖವಾಗಿದ್ದು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರಗಳನ್ನು ನಿಗ್ರಹಿಸಲು ಪ್ರಯತ್ನಿಸದೆ, ತಮ್ಮ ಗಾಜಿನ ಮನೆಯಲ್ಲಿ ತಾವೇ ಕುಳಿತು ಸುಖ-ಭೋಗ ಅನುಭವಿಸಿದ ಪ್ರತಿಫಲವಾಗಿ ಈಗ ಈ ಷಡ್ಯಂತ್ರಗಳು, ಈ ನೋವುಗಳು ನಿಮಗೆ ಕಾಡುತ್ತಿವೆ.

ಈ ರೀತಿಯ ಅನೇಕ ಷಡ್ಯಂತ್ರಗಳನ್ನು, ನೋವುಗಳನ್ನು, ಅನ್ಯಾಯಗಳನ್ನು ಸಾಮಾನ್ಯ ಜನರಾದ ನಾವು ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ, ಬೇರೆ ಬೇರೆ ರೂಪದಲ್ಲಿ ಅನುಭವಿಸುತ್ತಲೇ ಇರುತ್ತೇವೆ. ನಿಮಗಾದರೋ ಹಣವಿದೆ, ಅಧಿಕಾರವಿದೆ, ಪ್ರಭಾವಿಗಳ ಸಂಪರ್ಕವಿದೆ, ಲಕ್ಷಾಂತರ ಜನರಿದ್ದಾರೆ. ಸಾಮಾನ್ಯ ಜನರಾದ ನಮಗೆ ಯಾರೂ ಇರುವುದಿಲ್ಲ.

ನಿಮ್ಮ ಆತ್ಮವನ್ನೊಮ್ಮೆ ಸ್ಪರ್ಶಿಸಿ ನಿಜ ಹೇಳಿ, ಎಲ್ಲೋ ಕೆಲವು ಸಂದರ್ಭಗಳಲ್ಲಿ ಭಾಷಣಗಳ ರೂಪದಲ್ಲಿ ಮಾತನಾಡಿದ ಒಳ್ಳೆಯ ಮಾತುಗಳನ್ನು ಹೊರತುಪಡಿಸಿ,
ಈ ಸರ್ಕಾರಗಳು ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಎಂದಾದರೂ ಮಾತನಾಡಿದ್ದೀರಾ, ಪ್ರತಿಭಟನೆ ಮಾಡಿದ್ದೀರಾ, ಈ ಭ್ರಷ್ಟಾಚಾರದ ಮೂಲವಾದ ಚುನಾವಣಾ ಸುಧಾರಣೆಯ ಬಗ್ಗೆ ಧ್ವನಿ ಎತ್ತಿದ್ದೀರಾ, ಈ ಸಾಮಾಜಿಕ ವ್ಯವಸ್ಥೆಯ ಅಸಮಾನತೆಯಾದ ಜಾತಿ ವ್ಯವಸ್ಥೆಯ ಬಗ್ಗೆ ಏನಾದರೂ ಕಾರ್ಯಕ್ರಮ ಕೈಗೊಂಡಿದ್ದೀರಾ, ಅಸ್ಪೃಷ್ಯತಾ ನಿವಾರಣೆಗೆ ನಿಮ್ಮ ಕೊಡುಗೆ ಏನಾದರೂ ಇದೆಯೇ, ಈ ಸಮಾಜದಲ್ಲಿ ಬಹುತೇಕ ಸಮಸ್ಯೆಗಳಿಗೆ ಕಾರಣವಾದ ಮೌಢ್ಯದ ಬಗ್ಗೆ ಎಂದಾದರೂ ಟೀಕೆ ಮಾಡಿ, ವೈಚಾರಿಕ ಪ್ರಜ್ಞೆ ಜಾಗೃತಗೊಳಿಸಲು ಏನಾದರೂ ಕ್ರಮ ಕೈಗೊಂಡಿದ್ದೀರಾ, ನಿಮ್ಮದೇ ಧರ್ಮಸ್ಥಳದಲ್ಲಿ ಎಷ್ಟೋ ಜನ ಪುಣ್ಯ ಸಿಗುತ್ತದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳುವ ನೀವು ಹಾಗೆಲ್ಲಾ ಸತ್ತರೆ ಪಾಪ ಪುಣ್ಯಗಳು ದೊರೆಯುವುದಿಲ್ಲ, ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಅದೊಂದು ಮೌಢ್ಯ ಎಂದು ಜನರಲ್ಲಿ ಜಾಗೃತಿ ಮೂಡಿಸಲು, ವೈಜ್ಞಾನಿಕ ಮನೋಭಾವ ಮೂಡಿಸಲು ಗಂಭೀರವಾಗಿ ಏನಾದರೂ ಪ್ರಯತ್ನಿಸಿದ್ದೀರಾ…

ಧರ್ಮಸ್ಥಳ ಎಂಬುದು ಭಕ್ತಿಗೆ, ಮನಸ್ಸಿನ ನೆಮ್ಮದಿಗೆ ಒಂದು ಆಧ್ಯಾತ್ಮಿಕ ಸ್ಥಳ ಎನ್ನುವುದನ್ನು ಹೊರತುಪಡಿಸಿ ಅಲ್ಲಿಗೆ ಬಂದರೆ ಮದುವೆಯಾಗುತ್ತದೆ, ಮಕ್ಕಳಾಗುತ್ತವೆ, ಉದ್ಯೋಗ ದೊರಕುತ್ತದೆ ಎನ್ನುವ ನಂಬಿಕೆಗೆ ಅಂತಹ ಬಲವಾದ ಅರ್ಥವಿಲ್ಲ, ಸಾಕ್ಷ್ಯಿವಿಲ್ಲವೆಂದು ಎಂದಾದರೂ ಹೇಳಿದ್ದೀರಾ ? ಅದನ್ನೊಂದು ಆರ್ಥಿಕ ಕಾರ್ಪೊರೇಟ್ ಸಂಸ್ಥೆಯಾಗಿ ಬೆಳೆಸಿದ ಅಪಕೀರ್ತಿ ನಿಮಗೇ ಸಲ್ಲುತ್ತದೆ ಶ್ರೀ ವೀರೇಂದ್ರ ಹೆಗ್ಗಡೆಯವರೇ….

ಜನರ ದಾನ ಧರ್ಮದ ಹುಂಡಿ ಕಾಸಿನ ಆಸೆಗೆ ಜನರಲ್ಲಿ ಮೌಢ್ಯ ಬಿತ್ತಿ ಈಗ ಷಡ್ಯೃಂತ್ರವೆಂದರೆ ಏನು ಹೇಳುವುದು. ತಾವು ಕೂಡ ಈ ಸಮಾಜದ ಒಂದು ಭಾಗ. ಎಷ್ಟೋ ಅಧಿಕಾರಿಗಳು, ಎಷ್ಟೋ ರಾಜಕಾರಣಿಗಳು ನಿಮ್ಮ ಬಳಿಗೆ ಬಂದಾಗ ಅವರಿಗೆ ಪ್ರಾಮಾಣಿಕತೆಯ ಬಗ್ಗೆ, ದಕ್ಷತೆಯ ಬಗ್ಗೆ, ಮಾನವೀಯ ಮೌಲ್ಯಗಳ ಬಗ್ಗೆ ತಿಳುವಳಿಕೆ ಹೇಳಿ ಕಳುಹಿಸಿದ್ದೀರಾ, ಧೈರ್ಯವಾಗಿ ಈ ಸಮಾಜದ ಲೋಪದೋಷಗಳನ್ನು ಟೀಕೆ ಮಾಡಿದ್ದೀರಾ, ಈ ಸಮಾಜವನ್ನು ಕೊಳೆಯಲು ಬಿಟ್ಟು ಈಗ ಅದರಿಂದ ನಿಮಗೆ ತೊಂದರೆಯಾಗುವಾಗ ಸಮಾಜವನ್ನು, ಮಾಧ್ಯಮಗಳನ್ನು, ಸಾಮಾಜಿಕ ಜಾಲತಾಣಗಳನ್ನು ಟೀಕಿಸಿದರೆ ಇದು ಸ್ವಾರ್ಥ ಎಂದೆನಿಸುವುದಿಲ್ಲವೇ….

ಈಗಲೂ ಎಷ್ಟೋ ಜನ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು, ಸಮಾಜಘಾತಕರು, ಕಾಳಸಂತೆಕೋರರು, ಮಾಫಿಯಾ ಡಾನ್ಗಳು ನಿಮ್ಮ ಧರ್ಮಸ್ಥಳಕ್ಕೆ ಬಂದು ನಿಮ್ಮೊಂದಿಗೆ ಮಾತನಾಡಿ, ಆಶೀರ್ವಾದ ಪಡೆದು ಮತ್ತೆ ತಮ್ಮ ದಂಧೆಯನ್ನು ಮುಂದುವರಿಸುತ್ತಿದ್ದಾರಲ್ಲವೇ, ಪರೋಕ್ಷವಾಗಿ ನೀವು ಅವರ ಆಶ್ರಯದಾತರಲ್ಲವೇ..

ಈ ಕ್ಷಣಕ್ಕೂ ಈ ರಾಜ್ಯದ ಲಕ್ಷಾಂತರ ಜನ ನಿಮ್ಮ ಪರವಾಗಿ ನಿಲ್ಲುತ್ತಿದ್ದಾರೆ, ನಿಮಗೆ ಬೆಂಬಲ ನೀಡುತ್ತಿದ್ದಾರೆ. ಆ ಋಣವನ್ನು ತೀರಿಸಲು ನೀವು ಸಾಕಷ್ಟು ತ್ಯಾಗ ಮಾಡಬೇಕಾಗಿದೆ. ಕೇವಲ ಒಂದಷ್ಟು ಆರ್ಥಿಕ ಯೋಜನೆಗಳನ್ನು, ಉಚಿತ ಊಟ ವ್ಯವಸ್ಥೆಯನ್ನು ಮಾಡುವುದರಿಂದ ಸಮಾಜದ ಬದಲಾವಣೆ ಸಾಧ್ಯವಿಲ್ಲ. ಸಮಾಜದ ಕೆಡುಕುಗಳ ಬಗ್ಗೆ ಧೈರ್ಯವಾಗಿ ಧ್ವನಿಯೆತ್ತಿದರೆ ಆಗ ನೀವು ಈ ಸಮಾಜಕ್ಕೆ ಸ್ವಲ್ಪವಾದರೂ ಕೊಡುಗೆ ನೀಡಿದಂತಾಗುತ್ತದೆ.

ಈ ಸಮಾಜ ಗಾಳಿ ಮಾತುಗಳನ್ನು ಹೆಚ್ಚಾಗಿ ನಂಬುತ್ತದೆ. ತಂತ್ರ, ಕುತಂತ್ರಗಳನ್ನು ಮಾಡುತ್ತಲೇ ಇರುತ್ತದೆ. ಇಂದು ನಿಮಗೆ, ನಾಳೆ ಇನ್ನೊಬ್ಬರಿಗೆ, ನಾಡಿದ್ದು ಅವರಿಗೇ ಅದು ಮುಳುವಾಗುತ್ತದೆ. ನೀವು ಹೇಳುವ ಷಡ್ಯಂತ್ರಗಳು ನಿಜವೇ ಆಗಿದ್ದರೆ ಅವರಿಗೂ ಕಠಿಣ ಶಿಕ್ಷೆಯಾಗಲಿ, ಅವರ ಮುಖವಾಡಗಳು ಬಯಲಾಗಲಿ. ಷಡ್ಯಂತ್ರಗಳನ್ನು ಮಾಡುವವರು ಸಣ್ಣ ವ್ಯಕ್ತಿಗಳು. ನೀವು ಗಣ್ಯರು ಎಂಬುದನ್ನು ಮರೆಯದಿರಿ.

ಹಾಗೆಯೇ ನಿಮ್ಮ ಕ್ಷೇತ್ರದಲ್ಲಿ ಇಂತಹ ಆರೋಪಗಳಿಗೆ ಅವಕಾಶವಿಲ್ಲದಂತೆ ಹೆಚ್ಚು ಪಾರದರ್ಶಕವಾಗಿ, ಸಹೃದಯತೆಯಿಂದ, ಸೌಜನ್ಯದಿಂದ ಇನ್ನು ಮುಂದಾದರು ನಿಮ್ಮ ಸಹೋದ್ಯೋಗಿಗಳು ಕೆಲಸ ನಿರ್ವಹಿಸುವಂತಾಗಲಿ. ಏಕೆಂದರೆ ಈ ಪೋಲೀಸ್, ನ್ಯಾಯಾಂಗ, ಶಾಸಕಾಂಗ ವ್ಯವಸ್ಥೆಯಲ್ಲಿ ತನಿಖೆಗಳು ಮತ್ತು ಅಪರಾಧಿಗಳು ಸಿಗುವ ಸಾಧ್ಯತೆ ತುಂಬಾ ಕಡಿಮೆ. ಸಿಕ್ಕರೂ ಶಿಕ್ಷೆ ಇನ್ನೂ ಕಡಿಮೆ. ಆದರೆ ಮುಂದೆ ಈ ರೀತಿಯ ಘಟನೆಗಳು ಘಟಿಸದಂತೆ ತಡೆಯುವ ಶಕ್ತಿ ನಮಗಿದೆ ಆ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗೋಣ….

ನಿಮ್ಮಂತ ಸಂತೃಪ್ತ ಆತ್ಮಗಳು ಈ ಸಮಾಜದಲ್ಲಿ ನಮ್ಮಂತ ಅತೃಪ್ತ ಆತ್ಮಗಳಿಗಿಂತ ಹೆಚ್ಚು ಜವಾಬ್ದಾರಿಯನ್ನು, ಸಹನೆಯನ್ನು, ತ್ಯಾಗವನ್ನು, ಕ್ಷಮೆಯನ್ನು, ಕರುಣೆಯನ್ನು ಪಾಲನೆ ಮಾಡಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಇದೆ. ಇದನ್ನು ದಯವಿಟ್ಟು ಗಮನಿಸಿ ಧನ್ಯವಾದಗಳು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!