
ದಿನಾಂಕ:14-08-2025(ಹಾಯ್ ಉಡುಪಿ ನ್ಯೂಸ್)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಜಾಮೀನು ಸುಪ್ರೀಂ ಕೋರ್ಟ್ ನಲ್ಲಿ ಇಂದು ರದ್ದಾಗುತ್ತಿದ್ದಂತೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದಾರೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗುರುವಾರ ನಟ ದರ್ಶನ್ ತೂಗುದೀಪ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಗೊಳಿಸಿದೆ.
ಇದಾದ ಕೆಲವೇ ನಿಮಿಷಗಳ ನಂತರ, ಪಶ್ಚಿಮ ವಿಭಾಗದ ಪೊಲೀಸರು ಗುರುವಾರ ಮಧ್ಯಾಹ್ನ 2.40 ರ ಸುಮಾರಿಗೆ ಆರ್ ಆರ್ ನಗರದ ಅವರ ನಿವಾಸದಿಂದ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರನ್ನು ಬಂಧಿಸಿದರು.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ, ಎ 1 ಪವಿತ್ರಾ ಗೌಡ, ಎ 2 ದರ್ಶನ್ ತೂಗುದೀಪ, ಎ 6 ಜಗದೀಶ್ ಅಲಿಯಾಸ್ ಜಗ್ಗ, ಎ 7 ಅನು ಕುಮಾರ್ ಅಲಿಯಾಸ್ ಅನು, ಎ 14 ಪ್ರದೂಷ, ಎ 11 ನಾಗರಾಜ್ ಅಲಿಯಾಸ್ ನಾಗ, ದರ್ಶನ್ ಅವರ ಮ್ಯಾನೇಜರ್ ಮತ್ತು ಎ 12 ಲಕ್ಷ್ಮಣ್.
ಇಂದು ಬೆಳಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಪವಿತ್ರಾ ಗೌಡ, ಗೆಲುವು ನಿಧಾನ ಆಗಬಹುದು ದೇವರ ರಕ್ಷಣೆ ಇದ್ದೇ ಇರುತ್ತೆ ಎಂದು ಹಾಕಿದ್ದರು. ನಾನು ತಾಳ್ಮೆ ಹಾಗೂ ನಂಬಿಕೆಯನ್ನು ಆಯ್ಕೆ ಮಾಡಿಕೊಳ್ತಿನಿ ಎಂದು ಕೂಡ ಹೇಳಿಕೊಂಡಿದ್ದರು.
ಹೈಕೋರ್ಟ್ ಜಾಮೀನು ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಮೇರೆಗೆ ಸುಪ್ರೀಂ ಕೋರ್ಟ್ ನ ನ್ಯಾ ಜೆಬಿ ಪಾರ್ದಿವಾಲಾ ಹಾಗೂ ಆರ್ ಮಹಾದೇವನ್ರ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ.
ಏಳು ಆರೋಪಿಗಳನ್ನು ಬಂಧಿಸಲು ಪಶ್ಚಿಮ ವಿಭಾಗದ ಒಂಬತ್ತು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳಲ್ಲಿ, ಪೊಲೀಸರು ಟೆಕ್ಕಿ ಪ್ರದೋಷನನ್ನು ಅವರ ಗಿರಿನಗರದ ನಿವಾಸದಿಂದ ಬಂಧಿಸಿದ್ದಾರೆ.
ಇನ್ನೊಬ್ಬ ಆರೋಪಿ ನಾಗರಾಜ್‌ನನ್ನು ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ದರ್ಶನ್ ಅವರ ತೋಟದ ಮನೆಯಿಂದ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಮತ್ತೊಬ್ಬ ಆರೋಪಿ ಲಕ್ಷ್ಮಣ್ ಮೈಸೂರಿನ ಹೆದ್ದಾರಿಯಲ್ಲಿ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾನೆ.
ಈ ಮಧ್ಯೆ ಮತ್ತೊಬ್ಬ ಆರೋಪಿ ಜಗದೀಶ್ ಚಿತ್ರದುರ್ಗದ ಮಹಾವೀರ್ ನಗರದಲ್ಲಿರುವ ಮತ್ತೊಬ್ಬ ಆರೋಪಿ ಅನು ಕುಮಾರ್ ಮನೆಗೆ ಭೇಟಿ ನೀಡಿದ್ದು, ನಂತರ ಇಬ್ಬರೂ ಬೈಕ್‌ನಲ್ಲಿ ಹೋಗಿದ್ದಾರೆ.
