Spread the love

ದಿನಾಂಕ:14-08-2025(ಹಾಯ್ ಉಡುಪಿ ನ್ಯೂಸ್)

ತುಮಕೂರು: ನಗರದ ಬಿಜಿ ಪಾಳ್ಯ ವೃತ್ತದ ಬಳಿ ಇರುವ ಇಸ್ಲಾಮಿಕ್ ಸೆಂಟರ್‌ನಲ್ಲಿ ನಡೆದ “ಮಾಧ್ಯಮ ಮತ್ತು ಸಾಮಾಜಿಕ ಕಾರ್ಯಕರ್ತರ ಜವಾಬ್ದಾರಿ” ಕುರಿತು ಮಾತನಾಡಿದ ತುಮಕೂರಿನ ಪತ್ರಕರ್ತ ಸೈಯದ್ ಯೂಸುಫ್ ಉಲ್ಲಾ, ಇಂದಿನ ಯುಗದಲ್ಲಿ ಮಾಧ್ಯಮವು ಕೇವಲ ಟಿವಿ ಪರದೆ ಅಥವಾ ಪತ್ರಿಕೆಯ ಪುಟಗಳಷ್ಟೇ ಅಲ್ಲ, ಅದು ಜನಮತವನ್ನು ರೂಪಿಸುವ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಅವರು ವಿಷಾದ ವ್ಯಕ್ತಪಡಿಸುತ್ತಾ, ಅನೇಕ ಸಾಮಾಜಿಕ ಕಾರ್ಯಕರ್ತರು “ಗೋದಿ ಮೀಡಿಯಾ”, “ಸುಳ್ಳು ಸುದ್ದಿ” ಎಂದು ಮಾಧ್ಯಮವನ್ನು ಟೀಕಿಸುತ್ತಾರೆ ಆದರೆ ತಾವೇ ಮಾಧ್ಯಮದೊಂದಿಗೆ ನಿರಂತರ ಸಂಪರ್ಕ ಬೆಳೆಸುವ ಅಭ್ಯಾಸವಿಲ್ಲ, ದಿನಪತ್ರಿಕೆ ಓದುವುದಿಲ್ಲ, ಟಿವಿ ಸುದ್ದಿಗಳನ್ನು ಗಮನಿಸುವುದಿಲ್ಲ, ಆನ್‌ಲೈನ್‌ನಲ್ಲಿ ವಿಶ್ವಾಸಾರ್ಹ ಮೂಲಗಳನ್ನು ಅನುಸರಿಸುವುದಿಲ್ಲ, ಹೀಗಿರುವಾಗ ಸಮಾಜಕ್ಕೆ ಸರಿಯಾದ ಮಾಹಿತಿ ತಲುಪಿಸುವಲ್ಲಿ ಹೇಗೆ ಯಶಸ್ವಿಯಾಗಬಹುದು?” ಎಂದು ಪ್ರಶ್ನಿಸಿದರು.

ಇದರ ಪರಿಣಾಮ ತಮ್ಮ ಕೆಲಸಕ್ಕೆ ಸಂಬಂಧಿಸಿದ ಸರಿಯಾದ ಮಾಹಿತಿ ಮತ್ತು ಅಂಕಿಅಂಶಗಳ ಕೊರತೆ, ಸಮಾಜದ ಚರ್ಚೆಗಳಲ್ಲಿ ಹಿಂದುಳಿಯುವುದು, ಜನರಿಗೆ ನಿಖರ ಮಾಹಿತಿ ನೀಡುವ ಸಾಮರ್ಥ್ಯ ಕುಸಿಯುವುದು ಕಂಡುಬರುತ್ತಿದೆ ಎಂದರು.

ಮಾಧ್ಯಮದ ಬಗ್ಗೆ ಅರಿವು ಕೊರತೆ, ದಿನನಿತ್ಯ ಸುದ್ದಿಗಳನ್ನು ಅನುಸರಿಸುವ ಮನೋಭಾವದ ಅಭಾವ, ಪೂರ್ವಗ್ರಹ ಹಾಗೂ ಕೆಲ ಮಾಧ್ಯಮದ ತಪ್ಪುಗಳಿಂದ ಸಂಪೂರ್ಣ ಮಾಧ್ಯಮವನ್ನೇ ನಿರ್ಲಕ್ಷಿಸುವ ಪ್ರವೃತ್ತಿ ಸರಿಯಲ್ಲ ಎಂದು ಒತ್ತಾಯಿಸಿದರು.

ಮಾಧ್ಯಮವನ್ನು ಸಂಪೂರ್ಣವಾಗಿ ತಿರಸ್ಕರಿಸುವ ಬದಲು ಅದನ್ನು ಸಹಾಯಕ ಸಾಧನವನ್ನಾಗಿ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ ಯೂಸುಫ್, ಪ್ರತಿದಿನ ಕನಿಷ್ಠ 15–20 ನಿಮಿಷ ದಿನಪತ್ರಿಕೆ ಓದುವುದು, ವಿಭಿನ್ನ ಮೂಲಗಳಿಂದ ಸುದ್ದಿಗಳನ್ನು ಹೋಲಿಸಿ ಓದುವುದು, ಮಾಧ್ಯಮ ಲಿಟರಸಿ ತರಬೇತಿ ಪಡೆದು ಸುಳ್ಳು-ಸತ್ಯ ಬೇರ್ಪಡಿಸುವ ಕೌಶಲ್ಯ ಬೆಳೆಸುವುದು ಮತ್ತು ಮಾಧ್ಯಮದವರೊಂದಿಗೆ ನಿಕಟ ಸಂಬಂಧ ಬೆಳೆಸುವುದು ಸಾಮಾಜಿಕ ಕಾರ್ಯಕರ್ತರಿಗೆ ಅಗತ್ಯವಿದೆ ಎಂದರು.

“ಸಾಮಾಜಿಕ ಕಾರ್ಯಕರ್ತರ ಶಕ್ತಿ ಕೇವಲ ಜನರೊಂದಿಗೆ ಇರುವ ಸಂಪರ್ಕದಲ್ಲೇ ಅಲ್ಲ, ಮಾಹಿತಿಯ ಶುದ್ಧತೆಯಲ್ಲೂ ಇದೆ. ಮಾಧ್ಯಮದ ಸಹಕಾರ ಪಡೆದು, ನಾವು ಎಲ್ಲರೂ ಸೇರಿ ಸುಳ್ಳು ಸುದ್ದಿಗೆ ಕಡಿವಾಣ ಹಾಕಿ, ಸತ್ಯ, ಶಾಂತಿ ಮತ್ತು ನ್ಯಾಯವನ್ನು ಕಾಪಾಡೋಣ” ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷರಾದ ಮೌಲಾನ ಅಸ್ರಾರ್ ಅಹಮದ್,  ಮಕರಂ ಸೈಯಿದ್ ಸೇರಿದಂತೆ ಸಮಾಜದ ಮುಖಂಡರು ಮತ್ತು ಅನೇಕ ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದರು.

error: No Copying!