Spread the love

ದಿನಾಂಕ:02-08-2025(ಹಾಯ್ ಉಡುಪಿ ನ್ಯೂಸ್)
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲೆಯ ಸದಸ್ಯರು ದಿನಾಂಕ:01-08-2025ರಂದು ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ.ಕೆ ಅವರನ್ನು ಭೇಟಿ ಮಾಡಿ ಜಿಲ್ಲೆಯ ಹಲವಾರು ಸಮಸ್ಯೆಗಳ ಬಗ್ಗೆ ಮನವಿ ನೀಡಿದ್ದಾರೆ .

ಮನವಿಯಲ್ಲಿ ರಾಷ್ಟ್ರೀಯ ಹೆದ್ದಾರಿ – 66ರ ಅಂಬಲ್ಪಾಡಿ ಜಂಕ್ಷನ್ ನ ಹೊಂಡಮಯ ಸರ್ವಿಸ್ ರಸ್ತೆ ಮತ್ತು ಬನ್ನಂಜೆ ಜಯಲಕ್ಷ್ಮಿ  ಬಟ್ಟೆ ಅಂಗಡಿ ಎದುರಿನ ಬಲವಂತದ ಡಿವೈಡರ್ ತೆರವು ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ರಸ್ತೆಗಳು ಹೊಂಡ ಬಿದ್ದು ನೀರು ತುಂಬಿ ಕೊಂಡಿವೆ. ರಸ್ತೆಯ ತುಂಬಾ ಹೊಂಡ ಗುಂಡಿಗಳು ತುಂಬಿದ್ದು, ವಾಹನ ಚಲಾಯಿಸುವುದು ಅಸಾಧ್ಯವಾಗಿದೆ. ಹೊಂಡ ಗುಂಡಿಗಳಲ್ಲಿ ಮಳೆಯ ನೀರು ತುಂಬಿ ಒಮ್ಮೆಲೆ ಬರುವ ವಾಹನಗಳು ಹೊಂಡಗಳಲ್ಲಿ  ಬೀಳುತ್ತಿದ್ದು, ಅಪಘಾತಗಳು ಸಾಮಾನ್ಯವಾಗಿ ಹೋಗಿದೆ. ವಾಹನ ಚಾಲಕರು ಜೀವ ಭಯದಿಂದಲೇ ವಾಹನ ಚಲಾಯಿಸಬೇಕಾಗಿದೆ. ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿದ್ದರೂ ಸಂಬಂಧಪಟ್ಟವರು ಯಾರೂ ಈ ಬಗ್ಗೆ ಗಮನಹರಿಸದೇ ಇರುವುದು ವಿಷಾದನೀಯವಾಗಿದೆ. ಅಧಿಕಾರಿ ವರ್ಗದವರು ಕಣ್ಣು ಮುಚ್ಚಿಕೊಂಡು ಇರುವಂತೆ ಭಾಸವಾಗುತ್ತಿದೆ. ತಾತ್ಕಾಲಿಕವಾಗಿಯೂ ತೇಪೆ ಹಾಕುವ ಕೆಲಸ ಆಗುತ್ತಿಲ್ಲ. ಕೇವಲ ರಾಜಕೀಯದ ಗಣ್ಯ ವ್ಯಕ್ತಿಗಳು ಬಂದಾಗ ಮಾತ್ರ ಕಣ್ಣೊರೆಸುವ ರೀತಿಯಲ್ಲಿ ತೇಪೆ ಹಾಕುವ ಕೆಲಸ ಮಾಡಿ ಅವರು ಬಂದು ಹೋದ ನಂತರ ಯಥಾ ರೀತಿ ರಸ್ತೆ ದುಸ್ಥಿತಿಗೆ ಹೋಗುತ್ತಿದೆ.

ರಸ್ತೆಯ ಬಗ್ಗೆ ಕೇಳುವವರು, ಹೇಳುವವರು ಯಾರೂ ಇಲ್ಲದಂತಾಗಿದೆ. ಅಲ್ಲದೆ ಉಡುಪಿಯ ಖಾಸಗಿ ಬಟ್ಟೆ ಅಂಗಡಿ ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ನವರು ರಾಷ್ಟ್ರೀಯ ಹೆದ್ದಾರಿ ಎಂಬುದನ್ನು ಪರಿಗಣಿಸದೆ ತಮ್ಮ ಮಳಿಗೆಯ ಎದುರು ಯಾರ ಅನುಮತಿ ಇಲ್ಲದೆ ರಸ್ತೆಯ ವಿಭಾಜಕ ತೆಗೆದು ಹಾಕಿದ್ದು, ಇದರಿಂದ ಎರಡೂ ಕಡೆಯಿಂದ ಒಂದೇ ಸಮಯದಲ್ಲಿ ವಾಹನಗಳು ಎದುರಾಗಿ ಅಪಘಾತವಾಗುತ್ತಿದ್ದು, ಈಗಾಗಲೇ ಇಲ್ಲಿ ಒಂದು ಬಲಿಯಾಗಿದೆ. ಯಾವುದೇ ಖಾಸಗಿ ಸಂಸ್ಥೆಯವರು ಈ ರೀತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಭಾಜಕವನ್ನು ಏಕಪಕ್ಷೀಯವಾಗಿ ತೆಗೆಯುವುದು ಅಪರಾಧವಾಗಿದ್ದು, ಕೂಡಲೇ ವಿಭಾಜಕಗಳನ್ನು ಹಾಕಿ ಅಪಘಾತಕ್ಕೆ ತಡೆ ಹಾಕದಿದ್ದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣವು ಮುಂದಿನ ದಿನದಲ್ಲಿ ನಾವು ಈ ಬಗ್ಗೆ ಪ್ರತಿಭಟನೆ ಮಾಡಬೇಕಾಗಬಹುದು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ವಿಜಯ್ ಪೂಜಾರಿ, ಸಲಹೆಗಾರರಾಗಿರುವ ಜಯಪ್ರಕಾಶ್ ಶೆಟ್ಟಿ ,ಜಿಲ್ಲಾ ಸಮಿತಿ ಸದಸ್ಯರಾದ ನಾಗರಾಜ್. ಸುನಿಲ್ ಕುಮಾರ್. ರಾಘ ಪೂಜಾರಿ ಕಕ್ಕುಂಜೆ. ನವಾಜ್. .ಯಶಸ್ ಮಾಷೂಕ್. ವರ್ಣಿತ್.ಫಾಹಿಮ್ ಮನೀಶ್ ಇವರೆಲ್ಲರೂ ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

error: No Copying!