
ಕಾರವಾರ : ದಿನಾಂಕ:24-07-2025(ಹಾಯ್ ಉಡುಪಿ ನ್ಯೂಸ್) ಕನ್ನಡ ಭಾಷೆಯ ತಳಪಾಯ ಕುಸಿಯುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೈ ಕಳವಳ ವ್ಯಕ್ತಪಡಿಸಿದರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದ ಆರು ಕೋಟಿ ಕನ್ನಡಿಗರಲ್ಲಿ ಕನ್ನಡ ಮಾತೃ ಭಾಷಿಕರು 4 ಕೋಟಿ ,2 ಕೋಟಿ ಇತರೆ ಭಾಷೆ ಆಡುವವರು ಇದ್ದಾರೆ. ಅವರಿಗೆ ಕನ್ನಡ ಕಲಿಸುವ ಕೆಲಸ ಆಗಬೇಕಿದೆ. ಕನ್ನಡವನ್ನು ಎಲ್ಲಾ ಆಯಾಮಗಳಲ್ಲಿ ಪುನಃ ಕಟ್ಟಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಯತ್ನಿಸುತ್ತಿದೆ ಎಂದರು. ಕನ್ನಡದ ವಿವಿಧ ಫಾಂಟ್ ಸಾಫ್ಟ್‌ವೇರ್ ಸಿದ್ದವಾಗುತ್ತಿದೆ. ಬರುವ ನವ್ಹೆಂಬರ್ ಗೆ ಇದು ಕನ್ನಡಿಗರಿಗೆ ಸಿಗಲಿದೆ ಎಂದರು. ಪ್ರಾಧಿಕಾರದ ಅಧ್ಯಕ್ಷರಾಗಿ ಹದಿನೆಂಟು ತಿಂಗಳು ಕಳೆದಿವೆ. ಸರ್ಕಾರ ಎರಡು ಕೋಟಿ ಅನುದಾನ ಕೊಟ್ಟಿದೆ.ನಾವು ಕೇಳಿದ್ದು ಐದು ಕೋಟಿ. ಸರ್ಕಾರ ಈಗ ಕೊಟ್ಟ ಅನುದಾನದ ಮಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ರಾಜ್ಯದ 19 ಜಿಲ್ಲೆಗಳ ಭೇಟಿ ಮುಗಿದಿದೆ. ಬೀದರ್ ನಿಂದ ಕಾರವಾರದ ತನಕ ಕನ್ನಡ ಭಾಷೆ ಅನುಷ್ಠಾನದ ಪ್ರಗತಿ ಪರಿಶೀಲನೆ ಆಗಿದೆ ಎಂದರು.
ಬ್ಯಾಂಕ್ ನವರಿಗೆ ಕನ್ನಡ ಕಲಿಕೆ ತರಗತಿ ಆರಂಭ ಮಾಡಲಾಗಿದೆ.ಕಾರವಾರ ಕನ್ನಡ ಭವನದಲ್ಲಿ ಕನ್ನಡ ಕಲಿಕಾ ಕೇಂದ್ರ ಆರಂಭಕ್ಕೆ ಚಿಂತನೆ ನಡೆದಿದೆ ಎಂದರು . ನಗರಸಭೆಗೆ ಸೇರಿದ ಕಟ್ಟಡದಲ್ಲಿ ಕನ್ನಡ ಕಲಿಕಾ ತರಗತಿ ಪ್ರಾರಂಭಿಸಲಾಗುವುದು ಎಂದರು. ಭಾಷೆ ಸಂಘರ್ಷ ಕಾರಣದಿಂದ ಮಂಡ್ಯದಲ್ಲಿ ಆರು ಕೇಸು ಆಗಿವೆ .ಭಾಷೆ ಯಿಂದ ಸಾಮಾಜಿಕ ಸಾಮರಸ್ಯ ಮೂಡಿಸಬೇಕಿದೆ . ಕರ್ನಾಟಕದಲ್ಲಿ 230 ಭಾಷೆಗಳಿಗೆ.ಭಾರತದಲ್ಲಿ 19956 ಭಾಷೆಗಳಿವೆ ಎಂದ ಅವರು ಅಧಿಕಾರಿಗಳು ಹೃದಯದಿಂದ ಕನ್ನಡ ಬಳಸಬೇಕಿದೆ. ತಾಲೂಕು, ಜಿಲ್ಲಾ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಆರಂಭವಾಗಿದೆ. ಹೈಕೋರ್ಟ್ ನಲ್ಲಿ ಅಸಾಧ್ಯ. ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲವಾಗಿದೆ ಎಂದರು.
ಐತಿಹಾಸಿಕ ಸ್ಥಳಗಳಲ್ಲಿ ಕನ್ನಡ ಫಲಕ:
ಕದಂಬ ಕಾಕುತ್ಸವರ್ಮನ ಕಾಲದಲ್ಲಿ ಕನ್ನಡ ಶಾಸನಗಳು ಬಂದವು. ಮಾನುಮೆಂಟ್ಸ ರಕ್ಷಣೆಗೆ ಕ್ರಮ ಆಗಬೇಕಿದೆ ಎಂದ ಬಿಳಿಮಲೈ ಅವರು, ಕೇಂದ್ರ ಸಚಿವ ಶೇಖಾವತ್ ಜೊತೆ ಮಾತುಕತೆ ಮಾಡಲಾಗಿದೆ. ದೇವಾಲಯ ಹಾಗೂ ಮಾನುಮೆಂಟ್ಸ ಬಳಿ ಕನ್ನಡದಲ್ಲಿ ಇತಿಹಾಸವನ್ನು ಚಿಕ್ಕದಾಗಿ ಹಾಕಲು ಮನವಿ ಮಾಡಲಾಗಿದೆ. ಸದಾಶಿವಗಡ, ಬನವಾಸಿಯಲ್ಲಿ ಕನ್ನಡ ನಾಮಫಲಕ ಹಾಗೂ ಪರಿಚಯದ ಫಲಕ ಹಾಕಲು ಕೋರಲಾಗಿದೆ ಎಂದರು .
ಆಸ್ಪತ್ರೆ ಗಳಲ್ಲಿ ರೋಗಿಗಳ ಹೆಸರನ್ನು ಕನ್ನಡದಲ್ಲಿ ಬರೆಯಲು ಡಾಕ್ಟರ್ ಗಳಲ್ಲಿ ವಿನಂತಿ ಮಾಡಲಾಗಿದೆ.
ಕನ್ನಡ ಮಾಧ್ಯಮ ಶಾಲೆಗಳ ಪೈಕಿ ಶತಮಾನೋತ್ಸವ ಕಂಡ ಶಾಲೆಗಳನ್ನು ಮುಚ್ಚುತ್ತಿರುವ ಕಾರಣ, ಭೂಮಿ ದಾನ ಕೊಟ್ಟವರು , ವಾಪಾಸ್ ಪಡೆದು , ಜಾಗ ಮಾರಾಟ ಮಾಡುತ್ತಿದ್ದಾರೆ . ಶಾಲೆಗಳಿಗೆ ಖಾತಾ ಪತ್ರ ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ವಿನಂತಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷರು ಹೇಳಿದರು.
ನಾಮಫಲಕ ಶೇ.60 ಕನ್ನಡ ಬಳಸಿ ಎಂದು ಸರ್ಕಾರದ ಆದೇಶ ಇದೆ. ಇದನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗೆ ಕೋರಿದ್ದೇವೆ . ಜಿಲ್ಲೆಯಲ್ಲಿ
3000 ನಾಮಾಫಲಕ ಇದೆ . ಮಾಲೀಕರು ಪೋಟೋ ತಂದು ತೋರಿಸಿ, ನಾಮಫಲಕ ರಿನಿವಲ್ ಮಾಡಬೇಕು. ಉತ್ತರ ಕನ್ನಡದಲ್ಲಿ ಶೇ.65 ರಷ್ಟು ನಾಮಾಫಲಕ ಕನ್ನಡದಲ್ಲಿವೆ. ಆಹಾರ ಪೊಟ್ಟಣ ಗಳಲ್ಲಿ ಕನ್ನಡ ಬಳಸಲು ಸೂಚಿಸಲಾಗಿದೆ.
ಕೇಂದ್ರದ ಶಾಲೆಗಳಲ್ಲಿ ಕನ್ನಡದ ಬಿಕ್ಕಟ್ಟು ಇದೆ . ಇದನ್ನು ಬಗೆ ಹರಿಸಲಾಗುವುದು. ಇದನ್ನು ಜಿಲ್ಲಾಧಿಕಾರಿ ಪರಿಶೀಲನೆ ಮಾಡಲಿದ್ದಾರೆ.
ಎಸ್ ಎಸ್ ಎಲ್ ಸಿ. ಕನ್ನಡದಲ್ಲಿ 1.50 ಲಕ್ಷ ಮಕ್ಕಳು ಫೇಲಾಗಿದ್ದಾರೆ. ಅಂದರೆ ಶೇ. 20 ರಷ್ಟು ಫೇಲಾಗಿದ್ದಾರೆ .ಮೈಸೂರು ಮಂಡ್ಯದಲ್ಲಿ ಕನ್ನಡದಲ್ಲಿ ಫೇಲಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು .
ಕಾರವಾರ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ , ಸಿಇಒ ದಿಲ್ಲೇಶ್ , ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.