
ದಿನಾಂಕ:24-07-2025(ಹಾಯ್ ಉಡುಪಿ ನ್ಯೂಸ್)
ಉಡುಪಿ : ಹುದ್ದೆಯಿಂದ ತೆರವುಗೊಳಿಸಿ ಸರಕಾರ ನೀಡಿದ ಆದೇಶದ ವಿರುದ್ಧ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್ ಅವರು ತಡೆಯಾಜ್ಞೆ ಕೋರಿ ಸಲ್ಲಿಸಿದ ಅರ್ಜಿಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ (ಕೆಎಟಿ) ಜುಲೈ 23ರಂದು ವಜಾಗೊಳಿಸಿದೆ (ಪ್ರಕರಣ ಸಂಖ್ಯೆ: 619/2025). ಹುದ್ದೆ ತೆರವುಗೊಳಿಸುವಂತೆ ಎರಡು ಬಾರಿ ಸರಕಾರ ಆದೇಶ ನೀಡಿದ್ದರೂ, ತಡೆಯಾಜ್ಞೆ ಕೋರಿ ಸಲ್ಲಿಸಿದ ಅರ್ಜಿಯನ್ನು ಕೆಎಟಿ ವಜಾಗೊಳಿಸಿದ ನಂತರವೂ ಡಾ. ಅಶೋಕ್ ಅವರು ಇಂದು (ಜುಲೈ 24) ಮತ್ತೆ ಕಚೇರಿಗೆ ಆಗಮಿಸಿ ಸರ್ಜನ್ ಹುದ್ದೆಯಲ್ಲಿ ಕುಳಿತು ಅಧಿಕಾರ ಚಲಾಯಿಸಿದ್ದು, ಸರಕಾರಕ್ಕೆ ಸವಾಲಾಗಿ ಪರಿಣಮಿಸಿದ್ದಾರೆ.
ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿದ್ದ ಎಚ್. ಅಶೋಕ್ ಅವರನ್ನು ರಾಜ್ಯ ಸರಕಾರ 2024ರ ಮಾರ್ಚ್ ನಲ್ಲಿ ಜಿಲ್ಲಾ ಸರ್ಜನ್ ಆಗಿ ನಿಯುಕ್ತಿಗೊಳಿಸಿತ್ತು.
ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ದೂರು ನಿವಾರಣಾ ಸಮಿತಿಗಳ ತನಿಖೆಯಲ್ಲಿ ಆರೋಪ ಸಾಬೀತಾಗಿ ಒಂದು ಬಾರಿ ಅಮಾನತುಗೊಂಡಿದ್ದ ಡಾ. ಅಶೋಕ್ ಅವರಿಗೆ, ಮುಂದುವರಿದ ಉನ್ನತ ತನಿಖೆ ಮತ್ತು ತನಿಖಾ ವರದಿಯಂತೆ ಐದು ಹಂತದ ವೇತನ ಹಿಂಭಡ್ತಿಗೊಳಿಸಿ ಆದೇಶಿಸಲಾಗಿತ್ತು.
ವೇತನ ಹಿಂಭಡ್ತಿ ಎಂಬ ಶಿಕ್ಷೆಗೆ ಒಳಗಾದ ನಂತರವೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿಶೇಷ ಪ್ರಯತ್ನದ ಕಾರಣ, ರಾಜ್ಯ ಸರಕಾರ ಡಾ. ಅಶೋಕ್ ರನ್ನು ಜಿಲ್ಲಾ ಸರ್ಜನ್ ಆಗಿ ನಿಯುಕ್ತಿಗೊಳಿಸಿತ್ತು. ನಂತರ 2025ರ ಜನವರಿ ಮತ್ತು ಫೆಬ್ರವರಿಯಲ್ಲಿ ಎರಡೆರಡು ಬಾರಿ ಮುಂದಿನ ಕರ್ತವ್ಯಕ್ಕೆ ಸ್ಥಳ ತೋರಿಸದೆಯೇ ಜಿಲ್ಲಾ ಸರ್ಜನ್ ಹುದ್ದೆಯಿಂದ ತೆರವುಗೊಳಿಸಿ ಆದೇಶಿಸಿತ್ತು.
ಸರಕಾರದ ಆದೇಶದಂತೆ ಡಾ. ಅಶೋಕ್ ಅವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಹುದ್ದೆಯನ್ನು ತೆರವುಗೊಳಿಸಿ ಆರೋಗ್ಯ ಇಲಾಖೆಯ ಆಯುಕ್ತರ ಕಚೇರಿಗೆ ಹೋಗಿ ವರದಿಮಾಡಬೇಕಾಗಿತ್ತು. ನೂತನ ಜಿಲ್ಲಾ ಸರ್ಜನ್ (ಅಧಿಕ ಪ್ರಭಾರ) ಆಗಿ ಆಸ್ಪತ್ರೆಯ ನೇತ್ರ ತಜ್ಞರಾದ ನಿತ್ಯಾನಂದ ನಾಯಕ್ ಅವರು ಅಧಿಕಾರ ಸ್ವೀಕರಿಸಬೇಕಾಗಿತ್ತು. ಆದರೆ ಡಾ. ಅಶೋಕ್ ಹುದ್ದೆ ತೆರವುಗೊಳಿಸದೆ ಸರಕಾರಕ್ಕೆ ಸಡ್ಡು ಹೊಡೆದಿದ್ದರು.
ಹುದ್ದೆ ತೆರವುಗೊಳಿಸುವಂತೆ ಸರಕಾರ ಎರಡನೇ ಬಾರಿ ಆದೇಶ ಹೊರಡಿಸಿದ ನಂತರ ಡಾ. ಅಶೋಕ್ ಅವರು ಸರಕಾರದ ಆದೇಶಕ್ಕೆ ತಡೆಯಾಜ್ಞೆ ಕೋರಿ 2025ರ ಫೆಬ್ರವರಿಯಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದು, ಜುಲೈ 23ರಂದು ಮಂಡಳಿಯ ಡಿವಿಷನಲ್ ಬೆಂಚ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.