
ಉಡುಪಿ: ದಿನಾಂಕ:21-07-2025 (ಹಾಯ್ ಉಡುಪಿ ನ್ಯೂಸ್)
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸರಕಾರ ವಿತರಿಸಲೇಬೇಕಾದ ಅವರ ಹಕ್ಕಿನ ಭೂಮಿಯನ್ನು ವಿತರಿಸದೆ ಅನ್ಯಾಯವೆಸಗುತ್ತಿದೆ. ದಲಿತರ ಬೇಡಿಕೆ ಕೇವಲ ಬೇಡಿಕೆಯಾಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ದಲಿತರು ಒಗ್ಗಟ್ಟಿನಿಂದ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ದಲಿತ ಹಕ್ಕುಗಳ ಸಮಿತಿ (ಡಿ ಎಚ್ ಎಸ್) ಉಡುಪಿ ಜಿಲ್ಲಾ ಸಂಚಾಲಕರಾದ ಸಂಜೀವ ಬಳ್ಕೂರು ಅವರು ಹೇಳಿದರು.
ದಿನಾಂಕ:20-07-2025ರಂದು ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ ಡಿ ಎಚ್ ಎಸ್ ವತಿಯಿಂದ ನಡೆದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ದಲಿತರಿಗಾಗಿ ಮೀಸಲಿರಿಸಿದ ಅನುದಾನಗಳನ್ನು ಅನ್ಯ ಉದ್ಧೇಶಕ್ಕೆ ಬಳಸಿ ದ್ರೋಹವೆಸಗುತ್ತಿರುವ ಸರಕಾರ, ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬದೆ ವಂಚಿಸುತ್ತಿದೆ. ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ದಲಿತ ಯುವಕ ಯುವತಿಯರನ್ನು ಉದ್ಯೋಗ ವಂಚಿತರನ್ನಾಗಿಸುತ್ತಿದೆ ಎಂದು ತಿಳಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲಾಗಾರ್ ಅವರು ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ ಕಾರ್ಮಿಕರಿಗಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜನಪರ ಹೋರಾಟಗಾರರಾದ ಶ್ರೀರಾಮ ದಿವಾಣ ಅವರು ಸಂಘಟನೆಯ ಅನಿವಾರ್ಯತೆಯ ಬಗ್ಗೆ ತಿಳಿಸಿದರು. ಸಾಮಾಜಿಕ ಹೋರಾಟಗಾರರಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರು ಭೂಮಿ ಹಕ್ಕಿನ ಬಗ್ಗೆ ಮಾತನಾಡಿದರು. ಬಳ್ಕೂರು ಗ್ರಾಮ ಪಂಚಾಯತ್ ಸದಸ್ಯೆ ಸುಶೀಲಾ ಬಳ್ಕೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಬಳ್ಕೂರು ಗ್ರಾಮ ಸಮಿತಿಯನ್ನು ರಚಿಸಲಾಯಿತು. ಅಣ್ಣಪ್ಪ ಬಳ್ಕೂರು ಅವರನ್ನು ಸಂಚಾಲಕರನ್ನಾಗಿಯೂ, ವಿಜಯ ಕುಮಾರ್ ಹಾಗೂ ವಾಸು ಕುದ್ರು ಅವರನ್ನು ಸಹ ಸಂಚಾಲಕರನ್ನಾಗಿಯೂ, ಸುಶೀಲಾ ಬಳ್ಕೂರು ಅವರನ್ನು ಕೋಶಾಧಿಕಾರಿಯನ್ನಾಗಿಯೂ, ರಾಮಚಂದ್ರ, ಪೂರ್ಣಿಮಾ, ಮಂಜುಳಾ, ಶಾಂತಾ, ಪೂರ್ಣಚಂದ್ರ, ಗಂಗಾಧರ, ಮಹೇಶ್, ಲಕ್ಷ್ಮಿ , ನರಸಿಂಹ, ಮಹೇಶ ಸಾಲಿಗ್ರಾಮ ಮಹೇಶ ಬಳ್ಕೂರು, ಕೃಷ್ಣಮೂರ್ತಿ ಅವರನ್ನು ಕಾರ್ಯಕಾರಿಣಿ ಸದಸ್ಯರನ್ನಾಗಿಯೂ ಆಯ್ಕೆಮಾಡಲಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
