
ದಿನಾಂಕ:15-07-2025(ಹಾಯ್ ಉಡುಪಿ ನ್ಯೂಸ್)
ಮಂಗಳೂರು: ವಾಟ್ಸಪ್ ಗ್ರೂಪ್‌ಗಳಲ್ಲಿ ಕೋಮುದ್ವೇಷ ಹರಡುವ ಹಾಗೂ ಸುಳ್ಳು ಆರೋಪಗಳನ್ನು ಪ್ರಚಾರ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮ್ ಪ್ರಸಾದ್ ಅಲಿಯಾಸ್ ಪೋಚ (42) ಬಂಧಿತ ಆರೋಪಿಯಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಹೊಸಬೆಟ್ಟು ಸುರತ್ಕಲ್‌ನಲ್ಲಿ ಆರ್.ವಿ ಎಂಟರ್‌ಪ್ರೈಸಸ್ ಸಂಸ್ಥೆಯನ್ನು ನಡೆಸುತ್ತಿರುವ ರಾಜೇಶ್ ಎಂಬವರು, ತಮ್ಮ ವಿರುದ್ಧ ವಾಟ್ಸಪ್ ಗ್ರೂಪ್‌ಗಳಲ್ಲಿ ಕೋಮುದ್ವೇಷ ಹರಡುವ ಸುಳ್ಳು ಆರೋಪಗಳನ್ನು ಹರಡಲಾಗುತ್ತಿದೆ ಎಂದು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. “ರಾಜೇಶ್ ಅವರು 20ಕ್ಕೂ ಹೆಚ್ಚು ಯುವತಿಯರನ್ನು ಮತಾಂತರ ಮಾಡಿದ್ದಾರೆ, ಬ್ಲೂ ಫಿಲಂ ಸಿಡಿ ಮಾರಾಟದಲ್ಲಿ ಸಿಕ್ಕಿಬಿದ್ದಿದ್ದಾರೆ, ತಮ್ಮ ಕಚೇರಿಯ ಯುವತಿಯರನ್ನು ಮತಾಂತರ ಮಾಡಿದ್ದಾರೆ, ಹಾಗೂ 24 ವರ್ಷದ ಹಿಂದೂ ಯುವತಿಯನ್ನು ತಮ್ಮ ತಮ್ಮನಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೆ, ಆ ಯುವತಿ ಹಣೆಗೆ ಕುಂಕುಮ ಹಚ್ಚುವುದು ಮತ್ತು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿ ಚರ್ಚ್‌ಗೆ ಹೋಗುತ್ತಿದ್ದಾರೆ” ಎಂಬಿತ್ಯಾದಿ ಸುಳ್ಳು ಆರೋಪಗಳನ್ನು ವಾಟ್ಸಪ್‌ಗಳಲ್ಲಿ ಪ್ರಚಾರ ಮಾಡಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಜುಲೈ 13, 2025 ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.