Spread the love

ದಿನಾಂಕ:11-07-2025(ಹಾಯ್ ಉಡುಪಿ ನ್ಯೂಸ್)


ಮಡಿಕೇರಿ:ವಿವಾದಿತ,ಅನಧಿಕೃತ ಮಳಿಗೆಯನ್ನು ಬಸ್ ತಂಗುದಾಣವಾಗಿ ಮಾರ್ಪಡಿಸಿ ಇಂದು ಲೋಕಾರ್ಪಣೆ ಮಾಡಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿ ನಗರದ ತಾಲ್ಲೂಕು ಆಡಳಿತ ಸೌಧದ ಬಳಿ ಇದ್ದ 10 ಅನಧಿಕೃತ ಮಳಿಗೆಗಳ ಪೈಕಿ 7 ಮಳಿಗೆಗಳನ್ನು ತೆರವುಗೊಳಿಸಲಾಗಿತ್ತು. ಉಳಿದ 3 ಮಳಿಗೆಗಳು ಜನಪ್ರತಿನಿಧಿಯೊಬ್ಬನ ಹುಂಬತನದ ಪರಿಣಾಮ ಹಾಗೇಯೇ ಉಳಿದಿತ್ತು. ಈ ಹಿನ್ನಲೆಯಲ್ಲಿ ಉಳಿದ ಮೂರು ಮಳಿಗೆಗಳನ್ನು ತೆರವುಗೊಳಿಸುವಂತೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಜಿಲ್ಲಾಧಿಕಾರಿಗಳಿಗೆ ಫೆಬ್ರವರಿ 3 ರಂದು ದೂರು ಸಲ್ಲಿಸಿದ್ದರು.
ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸೂಕ್ತ ಕ್ರಮ ಜರುಗಿಸಲು ದಿನಾಂಕ 12-2-2025 ರಂದು ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಮಡಿಕೇರಿ ನಗರ ಸಭೆಗೆ ಜ್ಞಾಪನಾ ಪತ್ರ ರವಾನೆಯಾಗಿತ್ತು.
(ಸಂಖ್ಯೆ: ಡಿಯುಡಿಸಿ/ಮನಸ/117/2024-25 ದಿನಾಂಕ 12-2-2025)
ಪ್ರಭಾವಿ ಒತ್ತಡಕ್ಕೆ ಸಿಲುಕಿದ ಮಡಿಕೇರಿ ನಗರ ಸಭೆ ನಿಧಾನಗತಿಯನ್ನು ಅನುಸರಿಸಿತ್ತು.ನಗರ ಸಭೆಯ ಈ ದ್ವಂದ್ವ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.
ನಂತರ ಇತ್ತೀಚೆಗೆ ನಡೆದ ಕೌನ್ಸಿಲ್ ಸಭೆಯಲ್ಲಿ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸುವಂತೆ ಒತ್ತಡ ಹೆಚ್ಚಿದ ಪರಿಣಾಮ ತೆರವು ಕಾರ್ಯ ನಡೆದು ಎರಡು ಮಳಿಗೆಗಳನ್ನು ಕೆಡವಲಾಯಿತು.

ಉಳಿದ ಒಂದು ಮಳಿಗೆಯನ್ನು ಮಾರ್ಪಾಡುಗೊಳಿಸಿ ಇಂದು ಬಸ್ ತಂಗುದಾಣ ಎಂದು ಗುರುತಿಸಿ ನಗರದ ಪ್ರಥಮ ಪ್ರಜೆಯ ಅನುಪಸ್ಥಿತಿಯಲ್ಲಿ ಲೋಕಾರ್ಪಣೆ ಮಾಡಲಾಗಿದೆ.ನಗರ ಸಭೆಯ ಯಾವುದೇ ಅಧಿಕಾರಿಗಳು ಸಿಬ್ಬಂದಿಗಳು ಕಾರ್ಯಕ್ರಮದ ಸುತ್ತ ಸುಳಿಯಲಿಲ್ಲ.ಬಹುತೇಕ ನಗರ ಸಭೆಯ ಸದಸ್ಯರು ಗೈರುಹಾಜರಾಗಿದ್ದರು.

ಅನಧಿಕೃತ ಕಟ್ಟಡ ಉದ್ಘಾಟನೆ ಯಿಂದ ಅಂತರ ಕಾಯ್ದುಕೊಂಡ ಶಾಸಕ ಡಾ ಮಂತರ್ ಗೌಡ……


ಮಾಧ್ಯಮದಲ್ಲಿ ತಂಗುದಾಣದ ಉದ್ಘಾಟನೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರಿಂದ ನಡೆಯಲಿದೆ ಎಂದು ಪ್ರಕಟನೆ ನೀಡಲಾಗಿತ್ತು.ಆದರೆ ಪ್ರತಿಯೊಂದು ಕಾರ್ಯವನ್ನು ಕಾನೂನಿನ ಚೌಕಟ್ಟಿನ ಮತ್ತು ಸರ್ಕಾರದ ನಿಯಮಾನುಸಾರ ವಾಗಿ ನಡೆಸುವ ಶಾಸಕ ಮಂತರ್ ಗೌಡ ರವರು ಮಡಿಕೇರಿಯಲ್ಲಿ ಇದ್ದರೂ ಅನಧಿಕೃತ ಕಾಮಗಾರಿಯ ಉದ್ಘಾಟನೆಗೆ ಆಗಮಿಸದೆ ತಮ್ಮ ಬದ್ದತೆಯನ್ನು ಪ್ರದರ್ಶಿಸಿದ್ದಾರೆ.ನಗರ ಸಭೆಯ ಆಯುಕ್ತರು ಕೂಡ ಗೈರಾಗಿದ್ದರು.
ಮಡಿಕೇರಿ ನಗರಕ್ಕೆ ಸರ್ಕಾರದ ನಿಯಮಗಳು ಅನ್ವಯವಾಗುವುದಿಲ್ಲವೇ.ಮಡಿಕೇರಿ ನಗರದಲ್ಲಿ ಎಲ್ಲೆಂದರಲ್ಲಿ ಯಾರು ಬೇಕಾದರೂ ಏನನ್ನು ಬೇಕಾದರೂ ಮಾಡಬಹುದೇ ಎಂದು ನಾಗರೀಕರು ಪ್ರಶ್ನೆ ಮಾಡಿದ್ದಾರೆ.

error: No Copying!