Spread the love

ಐವಿಎಫ್ ವಿಧಾನ, ಭಾವನಾ ರಾಮಣ್ಣ, ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯ ಹಾಗು ಭಾರತದ ಕೌಟುಂಬಿಕ ವ್ಯವಸ್ಥೆ……….

ಐವಿಎಫ್ ( I V F ) ಎಂಬ ವೈದ್ಯಕೀಯ ಸಂಶೋಧನಾ ವಿಧಾನದ ಮೂಲಕ ಮದುವೆಯಾಗದೆ, ಅಧಿಕೃತವಾಗಿ ಗಂಡ ಎನ್ನುವ ಗಂಡಿನ ಸಂಬಂಧವಿಲ್ಲದೆ, ಪರಿಚಿತ ಅಥವಾ ಅಪರಿಚಿತ ಪುರುಷನ ಸಂಗ್ರಹಿತ ವೀರ್ಯಾಣುವಿನ ಸಹಾಯದಿಂದ ಮಹಿಳೆಯೊಬ್ಬರು ಮಕ್ಕಳಿಗೆ ಜನ್ಮ ನೀಡುವುದು ವೈದ್ಯಕೀಯ ಕ್ಷೇತ್ರದ ಒಂದು ಸಾಧನೆಯಾಗಿದೆ. ನಾನಾ ಕಾರಣಗಳಿಂದ ಮಕ್ಕಳನ್ನು ಪಡೆಯಲಾಗದ ಕೆಲವು ದಂಪತಿಗಳಿಗೆ ಈ ವಿಧಾನ ಒಂದು ವರವಾಗಿದೆ.

ಆದರೆ ಕೆಲವರು ಮದುವೆಯಾಗದೆ, ಗಂಡನಿಲ್ಲದೆ ಒಂಟಿಯಾಗಿ ಮಕ್ಕಳನ್ನು ಹೆತ್ತು ಸಾಕಿ ಸಲಹುವುದು ಈ ಸಮಾಜದಲ್ಲಿ, ಮುಖ್ಯವಾಗಿ ಭಾರತೀಯ ಸಮಾಜದಲ್ಲಿ ಎಷ್ಟು ಸರಿ ಎಂಬ ಪ್ರಶ್ನೆ ಕೆಲವರನ್ನು ಕಾಡುತ್ತಿರಬಹುದು. ಒಂದು ಹಂತದ ಇತಿಹಾಸ ಪ್ರಜ್ಞೆಯ ಮೂಲಕ ಈ ವಿಷಯವನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದು.

ವಿಶ್ವದ ನಾಗರಿಕ ಮಾನವ ಇತಿಹಾಸ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ ಇಡೀ ಸಮಾಜದ ಅತ್ಯಂತ ಮಹತ್ವದ ಘಟಕ ಮತ್ತು ಆಧಾರ ಸ್ತಂಭ ಕುಟುಂಬವೇ ಆಗಿದೆ. ಅಂದರೆ ಗಂಡ ಹೆಂಡತಿ ಮತ್ತು ಮಕ್ಕಳು ಎಂಬುದು ಕುಟುಂಬದ ಸಾಮಾನ್ಯ ಪರಿಕಲ್ಪನೆ. ಕೆಲವೇ ಶತಮಾನಗಳ ಹಿಂದೆ ಗುರುತಿಸಲಾದ ಕಗ್ಗತ್ತಲೆಯ ಖಂಡ ಆಫ್ರಿಕವೇ ಇರಲಿ, ಅತ್ಯಂತ ಸಾಂಪ್ರದಾಯಿಕ, ಧರ್ಮನಿಷ್ಠ ಮಧ್ಯಪ್ರಾಚ್ಯ ದೇಶಗಳೇ ಇರಲಿ, ಅಧ್ಯಾತ್ಮದ ತವರೂರಾದ ಭಾರತವೇ ಇರಲಿ, ಉದಾರವಾದ ಹಾಗೂ ಸ್ವಾತಂತ್ರ್ಯ, ಸಮಾನತೆಯ ಬಹುದೊಡ್ಡ ಉದಾಹರಣೆಯಾದ ಫ್ರಾನ್ಸ್ ದೇಶವೇ ಇರಲಿ ಎಲ್ಲಾ ಕಡೆಯೂ ಇಂದಿಗೂ ಕೂಡ ತನ್ನ ಅಸ್ತಿತ್ವವನ್ನು ಅಷ್ಟೇ ಗಟ್ಟಿಯಾಗಿ ಉಳಿಸಿಕೊಂಡಿರುವುದು ಕುಟುಂಬ.

ಇಷ್ಟು ಆಧುನಿಕ ತಂತ್ರಜ್ಞಾನ ಮುಂದುವರಿದರೂ, ಸಹಸ್ರಾರು ಶತಮಾನಗಳ ನಂತರವೂ ಗಂಡು ಹೆಣ್ಣು ಮತ್ತು ಮಕ್ಕಳ ಸಂಬಂಧ ಹೆಚ್ಚು ಕಡಿಮೆ ಅದೇ ರೀತಿಯಲ್ಲಿ ಮುಂದುವರೆದುಕೊಂಡು ಬಂದಿದೆ. ವಿಚ್ಛೇದನಗಳು ಹೆಚ್ಚಾದರೂ, ತದನಂತರದಲ್ಲಿ ಆ ವಿಚ್ಛೇದನಗಳು ಮತ್ತೆ ಇತರರೊಂದಿಗೆ ಸೇರುತ್ತಿರುವುದು, ಮತ್ತೊಂದು ಕುಟುಂಬ ಅಸ್ತಿತ್ವಕ್ಕೆ ಬರುತ್ತಿರುವುದು ಕಾಣುತ್ತಿದ್ದೇವೆ. ಹಾಗೆಯೇ ಸಮಾಜದಲ್ಲಿ ಏಕ ಪೋಷಕ ವ್ಯವಸ್ಥೆ ಕೂಡ ಒಂದಷ್ಟು ಹೆಚ್ಚಾಗುತ್ತಿರುವುದು ನಿಜ.

ಈಗಲೂ ಕೂಡ ಕುಟುಂಬವೆಂದರೆ ಕೇವಲ ಮಕ್ಕಳನ್ನು ಪಡೆಯುವುದು ಮಾತ್ರವಲ್ಲ ಅದೊಂದು ಅದ್ಭುತ ಜೀವನಾನುಭವ. ಗಂಡು ಹೆಣ್ಣಿನ ಪ್ರೀತಿ, ಪ್ರೇಮ, ಪ್ರಣಯಗಳ ಸಮ್ಮಿಲನ. ಬದುಕಿನ ಅನಿವಾರ್ಯತೆಯ ಅನುಸಂಧಾನ. ಅದು ಸಹಜವಾಗಿ ಚಿಗುರೊಡೆದ ಒಂದು ಪ್ರಾಕೃತಿಕ, ಸಾಮಾಜಿಕ, ಆರ್ಥಿಕ, ದೈಹಿಕ, ಮಾನಸಿಕ ವ್ಯವಸ್ಥೆ. ಅದು ಅಷ್ಟು ಸುಲಭವಾಗಿ ಶಿಥಿಲವಾಗುವುದಿಲ್ಲ.

ಇಂತಹ ಸಂದರ್ಭದಲ್ಲಿ ಭಾವನಾ ರಾಮಣ್ಣ ಎನ್ನುವ ಸಿನಿಮಾ ನಟಿ ಮದುವೆಯಾಗದೆ ಐವಿಎಫ್ ವಿಧಾನದ ಮೂಲಕ ಮಗುವನ್ನು ಪಡೆಯುವ ಕ್ರಿಯೆಯನ್ನು ವಿರೋಧ ಮಾಡುವುದು ಅಥವಾ ಸಮರ್ಥಿಸುವುದು ಎರಡೂ ಅಷ್ಟು ಒಳ್ಳೆಯ ನಡೆಯಲ್ಲ. ಏಕೆಂದರೆ ಒಂದು ವೇಳೆ ಐವಿಎಫ್ ಅಥವಾ ಮದುವೆಯಾಗದೆ ಮಹಿಳೆಯೊಬ್ಬಳು ಮಕ್ಕಳನ್ನು ಹೊಂದುವುದನ್ನು ವಿರೋಧಿಸಿದರೆ, ಅದರಿಂದ ಕೌಟುಂಬಿಕ, ಸಾಮಾಜಿಕ ವ್ಯವಸ್ಥೆ ಹಾಳಾಗುತ್ತದೆ ಎನ್ನುವ ಭಯದಿಂದ ಅದನ್ನು ಟೀಕಿಸಿದರೆ ವ್ಯಕ್ತಿ ಸ್ವಾತಂತ್ರ್ಯದ, ಮಹಿಳಾ ಸ್ವಾತಂತ್ರ್ಯದ ಸಂವಿಧಾನಾತ್ಮಕ ಮತ್ತು ಪ್ರಾಕೃತಿಕ ಹಕ್ಕನ್ನು ನಿರಾಕರಿಸಿದಂತಾಗುತ್ತದೆ.

ತಾನು ಹೇಗೆ ಕಾನೂನಾತ್ಮಕವಾಗಿ ಮಕ್ಕಳನ್ನು ಪಡೆಯಬೇಕು ಎಂಬುದು ಮಹಿಳೆಯ ಸ್ವಾತಂತ್ರ್ಯ. ಅದನ್ನು ಪ್ರಶ್ನಿಸುವುದು ಸರಿಯಲ್ಲ. ಕಾನೂನು ಸಹ ಅದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಯಾರೋ ತೀರಾ ತೀರಾ ತೀರಾ ಅಪರೂಪದಲ್ಲಿ ಕೆಲವರು ಆ ರೀತಿಯ ಮಕ್ಕಳನ್ನು ಪಡೆದರೆ, ನಾವು ಅದು ಅವರ ಸ್ವಂತ ಇಚ್ಛೆಯೆಂದು, ಅವರಿಗೆ ಏನೋ ಅನಿವಾರ್ಯತೆ ಇರಬಹುದೆಂದು, ಅವರಿಗೆ ಒಳ್ಳೆಯದಾಗಲಿ ಎಂದು
ನಿರ್ಲಕ್ಷಿಸುವುದು ಉತ್ತಮ ನಡೆ.

ಹಾಗೆಯೇ ಅದನ್ನು ಸಮರ್ಥಿಸುವುದು ಅಥವಾ ಪ್ರೋತ್ಸಾಹಿಸುವುದು ಕೂಡ ಅಷ್ಟು ಒಳ್ಳೆಯ ನಡೆಯಲ್ಲ. ಏಕೆಂದರೆ ಎಲ್ಲಾ ಶೋಷಣೆ, ದೌರ್ಜನ್ಯ, ವಿರೋಧಗಳ ನಡುವೆಯೂ ಗಂಡು ಹೆಣ್ಣು ಎನ್ನುವ ಆಕರ್ಷಣೆ, ಕುಟುಂಬ ಎನ್ನುವ ಒಂದು ಪರಿಕಲ್ಪನೆ ಮತ್ತು ಅದರಿಂದಾಗಿ ನಡೆಯುತ್ತಿರುವ ಸಾಮಾಜಿಕ ವ್ಯವಸ್ಥೆ ನಿಜಕ್ಕೂ ಅತ್ಯುತ್ತಮವಾದದ್ದು. ಈಗಲೂ ಭಾರತದಂತ ದೇಶದಲ್ಲಿ ನಡೆಯುವ ಬಹುತೇಕ ಕೊಲೆ ಹಿಂಸೆಗಳು ಗಂಡು ಹೆಣ್ಣಿನ ಪ್ರೀತಿಗಾಗಿಯೇ ಎಂದರೆ ಅದರಲ್ಲಿ ತುಂಬಾ ತುಂಬಾ ಆಕರ್ಷಣೆ ಇದೆ ಎಂದೇ ಅರ್ಥ. ಅದು ಖಂಡಿತವಾಗಲೂ ಮನುಷ್ಯ ಎಷ್ಟೇ ಮುಂದುವರಿದರೂ ನಾಶವಾಗುವುದಿಲ್ಲ. ಕುಟುಂಬ ವ್ಯವಸ್ಥೆ ತನ್ನ ಘನತೆಯನ್ನು ಉಳಿಸಿಕೊಳ್ಳುತ್ತದೆ. ಯಾರೋ ಅಪರೂಪದಲ್ಲಿ ಐವಿಎಫ್ ವಿಧಾನದ ಮೂಲಕ ಮಕ್ಕಳು ಪಡೆಯುವುದರಿಂದ ಸಾಮಾನ್ಯ ಜನ ಆತಂಕ ಪಡಬೇಕಾಗಿಲ್ಲ. ಅದು ಜನಪ್ರಿಯತೆ ಪಡೆಯುವುದೂ ಇಲ್ಲ. ಏಕೆಂದರೆ ಅದು ಅಸಹಜ ಕ್ರಿಯೆ. ಆದರೆ ಕೆಲವರ ಅನಿವಾರ್ಯತೆಯೂ ಆಗಿರಬಹುದು. ಅದು ಅವರ ಹಕ್ಕು ಮತ್ತು ಸ್ವಾತಂತ್ರ್ಯ.

ಆದ್ದರಿಂದ ಅನಾವಶ್ಯಕವಾಗಿ, ಎಲ್ಲೋ ಕೆಲವರು ಅನಿವಾರ್ಯತೆಗಾಗಿ ಮಾಡಿಕೊಳ್ಳುವ ಐವಿಎಫ್ ವಿಧಾನವನ್ನು ವಿರೋಧಿಸುವ ಅಥವಾ ಬೆಂಬಲಿಸುವ ಪ್ರತಿಕ್ರಿಯೆ ನೀಡುವುದು ಉಚಿತವಲ್ಲ. ಸಮಾಜ ಯಾವಾಗಲು ಎರಡು ಮುಖಗಳನ್ನು ಹೊಂದಿರುತ್ತದೆ. ಎರಡನ್ನು ಸಮಾನಾಂತರವಾಗಿ ನಾವು ತೆಗೆದುಕೊಂಡು ಹೋಗಬೇಕು. ನಮ್ಮ ವೈಯಕ್ತಿಕ ಇಚ್ಚೆಗೆ ತಕ್ಕಂತೆ ಸಮಾಜದ ನಡವಳಿಕೆಯನ್ನು ನಿರೀಕ್ಷಿಲಾಗದು. ಸಮಗ್ರವಾಗಿ ಯೋಚಿಸಬೇಕು.

ಇಲ್ಲಿ ಮಗು ಪಡೆಯುವ ಮಹಿಳೆಯ ಹಕ್ಕನ್ನು ಗೌರವಿಸುತ್ತೇವೆ. ಆದರೆ ಈ ವಿಧಾನ ನಮಗೆ ಅಷ್ಟು ಒಪ್ಪಿತವಲ್ಲ. ನಮ್ಮ ಒಪ್ಪಿಗೆ ಅವರಿಗೆ ಬೇಕಾಗಿಯೂ ಇಲ್ಲ ಎಂಬ ಪ್ರಜ್ಞೆ ನಮಗೂ ಇರಬೇಕು. ಗಂಡು ಹೆಣ್ಣಿನ ಕೌಟುಂಬಿಕ ವ್ಯವಸ್ಥೆಯೇ ಒಂಟಿತನಕಿಂತ ಉತ್ತಮ ಎಂಬುದು ಸಾರ್ವತ್ರಿಕ ಮತ್ತು ನಾಗರಿಕ ಸಮಾಜದ ಯಶಸ್ವಿ ಅನುಭವ ಮತ್ತು ಅಭಿಪ್ರಾಯ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451..Watsapp)
9844013068……

error: No Copying!