Spread the love

ಉಡುಪಿ:  ದಿನಾಂಕ:01-07-2025(ಹಾಯ್ ಉಡುಪಿ ನ್ಯೂಸ್) ಸಾಣೂರು ಗ್ರಾಮದ ನಿವಾಸಿಯೋರ್ವರಿಗೆ ಯೂನಿಯನ್ ಬ್ಯಾಂಕ್ ಸಿಬ್ಬಂದಿಯೆಂದು ಕರೆ ಮಾಡಿ ನಂಬಿಸಿ 5.2 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾನೆಂದು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಾರ್ಕಳ ತಾಲೂಕು ಸಾಣೂರು ಗ್ರಾಮದ ನಿವಾಸಿ ಪ್ರೇಮ ಲತಾ (58) ಎಂಬವರು ಕೆ.ಎಮ್‌.ಸಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡಿಕೊಂಡಿದ್ದು, ಕಳೆದ ಮೇ ತಿಂಗಳಲ್ಲಿ ನಿವೃತ್ತಿ ಹೊಂದಿ ಮನೆಯಲ್ಲಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರೇಮ ಲತಾರವರು ಯೂನಿಯನ್‌ ಬ್ಯಾಂಕ್‌ ನಲ್ಲಿ  ಖಾತೆ ಹೊಂದಿದ್ದು, ದಿನಾಂಕ 26/06/2025 ರಂದು ಪ್ರೇಮ ಲತಾರವರು ಮುಂಬೈಗೆ  ಟ್ರೈನ್‌ನಲ್ಲಿ ಹೋಗುತ್ತಿರುವಾಗ ಸಂಜೆ ಹೊತ್ತಿಗೆ 7076260938 ನಂಬರ್‌ನಿಂದ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಕಾರ್ಕಳ ಸಾಣೂರು ಬ್ರಾಂಚ್‌ ಯುನಿಯನ್‌ ಬ್ಯಾಂಕ್‌ನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ನಿಮ್ಮ ಕೆವೈಸಿ ಅಪ್‌ಡೇಟ್‌ ಮಾಡಲು ಇದೆ ನಿಮ್ಮ ಅಕೌಂಟ್‌ ನಂಬ್ರ ಹೇಳಿ ಎಂದು ಕೇಳಿದ್ದು, ಪ್ರೇಮ ಲತಾರವರು  ತನಗೆ ಅಕೌಂಟ್‌ ನಂಬ್ರ ನೆನಪಿಲ್ಲ ಎಂದು ಹೇಳಿದಾಗ ಡೆಬೀಟ್‌ ಕಾರ್ಡ್‌ ನಂಬ್ರ ಹೇಳುವಂತೆ ತಿಳಿಸಿದ್ದು, ಪ್ರೇಮಲತಾರವರು ಆ ವ್ಯಕ್ತಿ ಬ್ಯಾಂಕ್‌ನಿಂದ ಮಾತನಾಡುವುದೆಂದು ನಂಬಿ ತನ್ನ ಡೆಬಿಟ್‌ ಕಾರ್ಡ್‌ ನಂಬ್ರ ಹೇಳಿರುತ್ತಾರೆ. ನಂತರ ಪುನಃ ಅದೇ ನಂಬರ್‌ನಿಂದ ಅದೇ ವ್ಯಕ್ತಿ ಕರೆ ಮಾಡಿ ಕೆವೈಸಿ ಅಪ್‌ಡೇಟ್‌ ಆಗಿರುವುದಾಗಿ ತಿಳಿಸಿದ್ದು, ದಿನಾಂಕ 26/06/2025 ರಂದು ರಾತ್ರಿಗೆ ಪ್ರೇಮಲತಾರವರ ಯೂನಿಯನ್‌ ಬ್ಯಾಂಕ್‌ ಖಾತೆಯಿಂದ 2,50,000/- , 8.24 ಗಂಟೆಗೆ 2,50,000/- ಹಾಗೂ ರಾತ್ರಿ 9:00 ಗಂಟೆಗೆ 19,000/- ಒಟ್ಟು 5,19,000/- ಹಣ ಕಡಿತಗೊಂಡಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಯಾರೋ ಅಪರಿಚಿತ ವ್ಯಕ್ತಿ ಯೂನಿಯನ್‌ ಬ್ಯಾಂಕ್‌ನಿಂದ ಮಾತನಾಡುವುದಾಗಿ ನಂಬಿಸಿ ಪ್ರೇಮಲತಾರವರಿಂದ ಡೆಬಿಟ್‌ ಕಾರ್ಡ್‌ ನಂಬ್ರ ಪಡೆದುಕೊಂಡು ಪ್ರೇಮಲತಾರವರ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಸೆನ್‌ ಠಾಣೆಯಲ್ಲಿ ಕಲಂ: 66(ಸಿ), 66(ಡಿ)ಐ.ಟಿ. ಆಕ್ಟ್‌ ಮತ್ತು 318(4)ಬಿಎನ್‌ಎಸ್‌ ರಂತೆ ಪ್ರಕರಣ ದಾಖಲಾಗಿದೆ.

error: No Copying!