Spread the love

ದಿನಾಂಕ:30-06-2025(ಹಾಯ್ ಉಡುಪಿ ನ್ಯೂಸ್)

ಬೆಂಗಳೂರು: ಆಡಳಿತ ಪಕ್ಷದೊಳಗಿನ ಅತೃಪ್ತಿ ಮತ್ತು ನಾಯಕತ್ವ ಬದಲಾವಣೆಯ ಬಗ್ಗೆ ಕರ್ನಾಟಕ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ಬೆಂಗಳೂರಿನಲ್ಲಿ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದರು.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲಾ ಅವರು, ಮಾಧ್ಯಮದಲ್ಲಿ ಬರುತ್ತಿರುವ ನಾಯಕತ್ವ ಬದಲಾವಣೆ ಕೇವಲ ಊಹಾಪೋಹಗಳು, ಅದೆಲ್ಲವೂ ನಿಮ್ಮ ಕಲ್ಪನೆ ಮಾತ್ರ ಎಂದರು.

ಪಕ್ಷದ ಶಾಸಕರ ಭೇಟಿ ನಿರಂತರ ಪ್ರಕ್ರಿಯೆ. ಇದು ಒಂದು ತಿಂಗಳು ಅಥವಾ ಒಂದೂವರೆ ತಿಂಗಳು ನಡೆಯಲಿದೆ. ಈ ಸಮಯದಲ್ಲಿ ಪಕ್ಷದ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖ್ಯಸ್ಥರನ್ನು ಭೇಟಿ ಮಾಡುತ್ತೇನೆ. ಬಳಿಕ ಸಿಎಂ ಹಾಗೂ ಡಿಸಿಎಂ ಜೊತೆಗೂ ಅಭಿವೃದ್ಧಿ ವಿಚಾರವಾಗಿ ಮಾತನಾಡುತ್ತೇವೆ ಎಂದರು.

ರಾಜ್ಯ ಸರ್ಕಾರ ಎರಡು ವರ್ಷಗಳನ್ನು ಪೂರೈಸಿರುವುದರಿಂದ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಶಾಸಕರಿಂದ ಮಾಹಿತಿ ಪಡೆಯುತ್ತಿದ್ದೇವೆ. ಕಾಂಗ್ರೆಸ್ ಸಂಘಟನೆ ಅವರವರ ಕ್ಷೇತ್ರದಲ್ಲಿ ಹೇಗಿದೆ ಎಂಬ ವರದಿ ಪಡೆಯುತ್ತಿದ್ದೇವೆ. ಮುಂಚೂಣಿ ಘಟಕಗಳು ಹೇಗೆ ಕೆಲಸ ಮಾಡುತ್ತಿವೆ ಎಂಬ ರಿವ್ಯೂ ಮಾಡುತ್ತಿದ್ದೇವೆ. ಎಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿವೆ ಅನ್ನೋದರ ಬಗ್ಗೆ ಮಾಹಿತಿ ಪಡೆಯುತ್ತೇವೆ.‌ ಸಿಎಂ ಹಾಗೂ ಸಚಿವರಿಗೆ ಇದರಿಂದ ಮಾಹಿತಿ ನೀಡಲು ಹಾಗೂ ಅರ್ಥ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಶಾಸಕರಿಂದ ಮಾಹಿತಿ ಪಡೆಯುತ್ತಿದ್ದೇವೆ. ಇದು ಸಂಘಟನಾತ್ಮಕ ಚಟುವಟಿಕೆಯಾಗಿದ್ದು, ಎಐಸಿಸಿ ಕೆಪಿಸಿಸಿ ಜಂಟಿಯಾಗಿ ಮಾಡಬೇಕಿದೆ. ಎಂಎಲ್ಎಗಳು ಪಕ್ಷ ಸಂಘಟನೆಗೆ ಕೆಲಸ ಮಾಡುತ್ತಿದ್ದಾರೆ. ಒಂದೇ ಒಂದು ರಾಜ್ಯ ಇಡೀ ದೇಶದಲ್ಲಿ 52 ಸಾವಿರ ಕೋಟಿ ನೇರವಾಗಿ ಜನರ ಖಾತೆಗೆ ಹಾಕುತ್ತಿದೆ. ಗೃಹ ಲಕ್ಷ್ಮಿಯರ ಖಾತೆಗೆ ವಾರ್ಷಿಕ 24 ಸಾವಿರ ಹಣವನ್ನು ಖಾತೆಗೆ ಹಾಕುತ್ತಿದ್ದೇವೆ. ಮೋದಿ ಹಾಗೂ ಬಿಜೆಪಿ ಸೃಷ್ಟಿ ಮಾಡಿದ ಹಣದುಬ್ಬರಕ್ಕೆ ಪರಿಹಾರ ನಾವು ಒದಗಿಸಿದ್ದೇವೆ. 4 ಕೋಟಿ ಜನರಿಗೆ ಅಕ್ಕಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಈ ಮಧ್ಯೆ, ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವರು ಶಾಸಕರ ಅಭಿಪ್ರಾಯವನ್ನು ಪಡೆಯುತ್ತಾರೆ. ಅವರ ಕಳವಳಗಳನ್ನು ಕೇಳುತ್ತಾರೆ ಮತ್ತು ಸಂಘಟನೆಯನ್ನು ಬಲಪಡಿಸಲು ಏನು ಮಾಡಬೇಕೆಂದು ನಿರ್ಣಯಿಸುತ್ತಾರೆ. ಅವರು ತಮ್ಮ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದರು .

error: No Copying!