
ಜಮಖಂಡಿ: ದಿನಾಂಕ:25-06-2025 (ಹಾಯ್ ಉಡುಪಿ ನ್ಯೂಸ್) ಅನುಭವ ಮಂಟಪದ ಅಸ್ತಿತ್ವವನ್ನು ಪ್ರಶ್ನಿಸಿ ನಾಡಿನ ಲಿಂಗಾಯತ ಸಮಾಜವನ್ನು ಪ್ರಚೋದಿಸಿದ್ದ ವೈದಿಕ ಧರ್ಮ ಪ್ರಚಾರಕಿ ವೀಣಾ ಬನ್ನಂಜೆಗೆ ಜಮಖಂಡಿ ಗ್ರಾಮೀಣ ಪೊಲೀಸ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ವೀಣಾ ಬನ್ನಂಜೆಯ ವಿರುದ್ಧ ದೂರು ನೀಡಿದ್ದ ಜಮಖಂಡಿಯ ನ್ಯಾಯವಾದಿ ರವಿ ಯಡಹಳ್ಳಿ ಅವರಿಗೆ ಜಮಖಂಡಿ ಪೊಲೀಸರು ಜೂನ್ 20ರಂದು ಲಿಖಿತ ಮಾಹಿತಿ ನೀಡಿದ್ದಾರೆ.
ಇನ್ನೊಮ್ಮೆ ಲಿಂಗಾಯತ ಧರ್ಮದ ಬಗ್ಗೆ, ಶರಣರ ಬಗ್ಗೆ ಅವಮಾನಕರವಾಗಿ ಮಾತಾಡಿದರೆ ನಿಮ್ಮ ಮೇಲೆ ಉಗ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವೀಣಾ ಬನ್ನಂಜೆಗೆ ಜಮಖಂಡಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬನ್ನಂಜೆಯವರ ನಾಲ್ಕೈದು ಮಂದಿ ಸ್ಥಳೀಯ ಅನುಯಾಯಿಗಳಿಗೂ ಎಚ್ಚರಿಕೆ ನೀಡಲಾಗಿದೆ, ಎಂದು ಯಡಹಳ್ಳಿ ಹೇಳಿದರು.
ಜಮಖಂಡಿ ಬಳಿಯ ಕಲ್ಲಹಳ್ಳಿಯಲ್ಲಿರುವ ಸತ್ಯಕಾಮ ಪ್ರತಿಷ್ಠಾನದ ಅಧ್ಯಕ್ಷೆಯಾಗಿ ವೀಣಾ ಬನ್ನಂಜೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬನ್ನಂಜೆಯವರ ಚಲನವಲನದ ಮೇಲೆ ಗಮನವಿಟ್ಟಿರುವುದಾಗಿ ಮತ್ತು ಅವರು ಶರಣರ ಬಗ್ಗೆ ಮತ್ತೆ ಹಗುರವಾಗಿ ಮಾತನಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಮಖಂಡಿ ಗ್ರಾಮೀಣ ಪೊಲೀಸರಿಂದ ಲಿಖಿತ ಹೇಳಿಕೆ ಬಂದಿದೆ. ಇದಕ್ಕೆ ಪ್ರತಿಯಾಗಿ ಮುಂದೆ ಈ ರೀತಿ ಮಾಡುವುದಿಲ್ಲವೆಂದು ಬನ್ನಂಜೆ ಭರವಸೆ ಕೊಟ್ಟಿದ್ದಾರೆ, ಎಂದು ಯಡಹಳ್ಳಿ ಹೇಳಿದರು.
ಹಲವಾರು ವರ್ಷಗಳಿಂದ ವೀಣಾ ಬನ್ನಂಜೆ ವಚನಗಳು ವೇದ, ಉಪನಿಷತ್ತುಗಳ ಸರಳ ಅನುವಾದ, ಲಿಂಗಾಯತರೆಲ್ಲ ಸನಾತನಿ ಹಿಂದೂಗಳ ಭಾಗವೆಂದು ಹೇಳಿಕೊಂಡು ಬಂದಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಯೂ ಟ್ಯೂಬಿನಲ್ಲಿ ಹಂಚಿಕೊಂಡಿದ್ದ ವಿಡಿಯೋದಲ್ಲಿ ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವೇ ಇರಲಿಲ್ಲ ಎಂದು ಹೇಳಿ ಬನ್ನಂಜೆ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ಎಸ್ ಎಂ ಜಾಮದಾರ್ ಸೇರಿದಂತೆ ಹಲವಾರು ಚಿಂತಕರು ಶರಣ ಸಮಾಜದ ಪರವಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.
ಬಸವ ಕೇಂದ್ರದ ಕಾರ್ಯದರ್ಶಿ ಅಣ್ಣಪ್ಪ ಜಗದೇವ ಅವರ ನೇತೃತ್ವದಲ್ಲಿ ಬನ್ನಂಜೆ ವಿರುದ್ಧ ಜಮಖಂಡಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಆದರೆ ಅವರು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗದಾಗ ಬಸವ ಕೇಂದ್ರದ ಸದಸ್ಯರು ಮುಖ್ಯಮಂತ್ರಿ, ಗೃಹ ಮಂತ್ರಿ, ಗೃಹ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳಿಗೆ ಬಸವ ಧರ್ಮಕ್ಕೆ ಅಪಮಾನ ಮಾಡಿರುವ ಬನ್ನಂಜೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಪತ್ರ ನೀಡಿದ್ದರು. ಅವರ ಒತ್ತಡದಿಂದ ಪೊಲೀಸರು ಬನ್ನಂಜೆಯವರನ್ನು ಸಂಪರ್ಕಿಸಿದರೆಂದು ತಿಳಿದು ಬಂದಿದೆ.
“ಇಂತಹ ಪ್ರಚೋದನೆಗಳು ಬಂದಾಗ ಬಸವ ಸಂಘಟನೆಗಳು ಪೋಲೀಸರ ಮೂಲಕ ಕಾನೂನಾತ್ಮಕ ಕ್ರಮ ಜರುಗಿಸಲು ಮುಂದಾಗಬೇಕು,” ಎಂದು ಯಡಹಳ್ಳಿ ಹೇಳಿದರು.
“ಸತ್ಯಕಾಮ ಪ್ರತಿಷ್ಠಾನದ ಹೆಸರಿನಲ್ಲಿ ಪ್ರತಿ ವರ್ಷ ಸರಕಾರದಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವೈದಿಕತೆ ಬಿತ್ತುವ ಕಾರ್ಯಕ್ರಮಗಳನ್ನು ಬನ್ನಂಜೆ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸಿ ಸರಕಾರ ವೈಚಾರಿಕತೆ ಬಿತ್ತುವ ಕಾರ್ಯಗಳನ್ನು ಪ್ರೋತ್ಸಾಹಿಸಬೇಕು, ಎಂದು ಅವರು ಹೇಳಿದರು.