
ಉಡುಪಿ: ದಿನಾಂಕ:23-06-2025(ಹಾಯ್ ಉಡುಪಿ ನ್ಯೂಸ್) ಡಯಾಗ್ನೋಸ್ಟಿಕ್ ಸೆಂಟರ್ ನ ತಪ್ಪು ವೈದ್ಯಕೀಯ ವರದಿಯಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಕಳೆದುಕೊಂಡಿರುವ ಉಡುಪಿಯ ಹಿರಿಯ ನರ್ಸ್ ಒಬ್ಬರಿಗೆ 13.49 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಉಡುಪಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಹಿರಿಯ ಸ್ಟಾಫ್ ನರ್ಸ್ ಆಗಿರುವ 43 ವರ್ಷದ ಶಿವಕುಮಾರ್ ಶೆಟ್ಟಿಗಾರ್ ಎಂಬವರು ಇದೇ ಫೆಬ್ರವರಿಯಲ್ಲಿ ಗಲ್ಫ್ ರಾಷ್ಟ್ರದ ಯುನೈಟೆಡ್ ಮೆಡಿಕಲ್ ರೆಸ್ಪಾನ್ಸ್ ಕಂಪನಿಯಲ್ಲಿ ಇಂಡಸ್ಟ್ರಿಯಲ್ ನರ್ಸ್ ಆಗಿ ಆಯ್ಕೆಯಾಗಿದ್ದರು.
ಉದ್ಯೋಗ ಪ್ರಕ್ರಿಯೆ ನಿಮಿತ್ತ ಮಂಗಳೂರಿನ ರಾಷ್ಟ್ರೀಯ ಸಿಟಿ ಸ್ಕ್ಯಾನರ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ನಡೆಸಲಾದ ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಹೆಪಟೈಟಿಸ್ ಸಿ ಪಾಸಿಟಿವ್ ಇದೆ ಎಂದು ತಪ್ಪಾಗಿ ವರದಿ ನೀಡಲಾಗಿತ್ತು. ಇದು ಗಲ್ಫ್ ಸಹಕಾರ ಮಂಡಳಿ(GCC) ವೈದ್ಯಕೀಯ ಮಾನದಂಡಗಳ ಅಡಿಯಲ್ಲಿ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಕಾರಣವಾಗಿತ್ತು ಎನ್ನಲಾಗಿದೆ.
ತಪ್ಪಾಗಿ ನೀಡಿದ ವೈದ್ಯಕೀಯ ವರದಿಯಿಂದ ವಿದೇಶಕ್ಕೆ ಹೋಗಲು ಸಾಧ್ಯವಾಗದ ಶೆಟ್ಟಿಗಾರ್ ಅವರು, ಮಣಿಪಾಲದ ಖಾಸಗಿ ಪ್ರಯೋಗಾಲಯದಲ್ಲಿ ಮತ್ತು ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಫಾಲೋ-ಅಪ್ ಪರೀಕ್ಷೆಗೆ ಒಳಗಾದರು, ಇವೆರಡೂ ಪರೀಕ್ಷೆಯಲ್ಲಿ ಅವರಿಗೆ ಹೆಪಟೈಟಿಸ್ ಸಿ ನೆಗಟಿವ್ ದೃಢಪಟ್ಟಿತ್ತು.
ಬಳಿಕ ತಪ್ಪು ವರದಿ ನೀಡಿದ ಮಂಗಳೂರಿನ ರಾಷ್ಟ್ರೀಯ ಸಿಟಿ ಸ್ಕ್ಯಾನರ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್ ವಿರುದ್ಧ ಶೆಟ್ಟಿಗಾರ್ ಅವರು ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿ, ಪ್ರಯೋಗಾಲಯದ ತಪ್ಪು ವರದಿಯಿಂದ ತಮ್ಮ ಕೆಲಸಕ್ಕೆ ಮಾತ್ರವಲ್ಲದೆ, ಭಾವನಾತ್ಮಕ ಮತ್ತು ಆರ್ಥಿಕ ಸಂಕಷ್ಟಕ್ಕೂ ಕಾರಣವಾಯಿತು ಎಂದು ವಾದಿಸಿದ್ದರು.
ನ್ಯಾಯಾಲಯವು ಸಾಕ್ಷ್ಯಗಳನ್ನು ಪರಿಶೀಲಿಸಿ, ಎರಡೂ ಕಡೆಯ ವಾದ, ಪ್ರತಿವಾದ ಆಲಿಸಿದ ನಂತರ ಶಿವಕುಮಾರ್ ಶೆಟ್ಟಿಗಾರ್ ಪರವಾಗಿ ತೀರ್ಪು ನೀಡಿದೆ. ಡಯಾಗ್ನೋಸ್ಟಿಕ್ ಸೆಂಟರ್, ನರ್ಸ್ ಗೆ 45 ದಿನಗಳಲ್ಲಿ 13.49 ಲಕ್ಷ ರೂ.ಗಳನ್ನು ಪಾವತಿಸಲು ಸೂಚಿಸಿದೆ ಮತ್ತು ತಪ್ಪಿದಲ್ಲಿ ವಾರ್ಷಿಕ ಶೇ. 6 ರಷ್ಟು ಬಡ್ಡಿ ಅನ್ವಯಿಸುವುದಾಗಿ ಹೇಳಿದೆ.