Spread the love

ಉಡುಪಿ: ದಿನಾಂಕ:20-06-2025(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ಮೋಸದಿಂದ ತನ್ನ ಚಿನ್ನಾಭರಣಗಳನ್ನು ಪಡೆದು ವಂಚನೆ ಮಾಡಿರುವುದಲ್ಲದೆ ಇದೀಗ ಗಂಡನು ತಲಾಕ್ ಹೇಳಿ ಇನ್ನೊಂದು ಮದುವೆಯಾಗಿ ಮೋಸ ಮಾಡಿದ್ದಾನೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಂಗಳೂರು ನಿವಾಸಿ ಅಮ್ರೀನ್ ಮತ್ತು 1 ನೇ ಆರೋಪಿ ಆದಿಲ್‌ ಇಬ್ರಾಹಿಂ ಎಂಬವರ ಮದುವೆ ದಿನಾಂಕ 04/09/2013 ರಂದು ಮಂಗಳೂರು ಬೋಳಾರ್‌ ಶಾದಿ ಮಹಲ್‌ ಎಂಬಲ್ಲಿ ಇಸ್ಲಾಂ ಷರಿಯತ್‌ ಪ್ರಕಾರ ನಡೆದಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ  ಅಮ್ರೀನ್ ತಿಳಿಸಿದ್ದಾರೆ

ಮದುವೆ ಸಮಯದಲ್ಲಿ  ಅಮ್ರೀನ್ ರವರ ಮನೆಯವರು 60 ಪವನ್‌ ಚಿನ್ನದ ಆಭರಣ ಮತ್ತು ಗೃಹ ಉಪಯೋಗಿ ಸಲಕರಣೆಗಳನ್ನು ನೀಡಿ ಅದ್ದೂರಿ ಮದುವೆ ಮಾಡಿಕೊಟ್ಟಿದ್ದು, ಉಡುಗೊರೆಯಾಗಿ ಸುಮಾರು 10 ಪವನ್‌ ಚಿನ್ನವನ್ನು ಕೊಟ್ಟಿದ್ದು, ಮದುವೆಯ ಸಂಪೂರ್ಣ ಖರ್ಚು ರೂಪಾಯಿ 8,00,000/- ವನ್ನು ಅಮ್ರೀನ್ ರವರ ತಂದೆ ಭರಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮದುವೆಯಾದ ನಂತರ ಅಮ್ರೀನ್ ರವರು 1ನೇ ಆರೋಪಿ ಗಂಡ ಆದಿಲ್ ಇಬ್ರಾಹಿಂ ಜೊತೆಯಲ್ಲಿ ಬ್ರಹ್ಮಾವರ ಆಕಾಶವಾಣಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಸಂಸಾರ ಮಾಡುತ್ತಿದ್ದು, ಮದುವೆಯಾದ 4ನೇ ದಿವಸದಲ್ಲಿ ಆರೋಪಿತರಾದ 1. ಆದಿಲ್‌ ಇಬ್ರಾಹಿಂ, 2. ಹೆಚ್‌ ಇಬ್ರಾಹಿಂ ಸಾಹಿಬ್, 3. ಇರ್ಷಾದ್‌ ಬಾನು, 4. ಅಲ್‌ಫಿಯಾ,5. ಜಾಫರ್‌ ಇವರು ನಮಗೆ ಸಾಲ ಇದೆ ಅದನ್ನು ತೀರಿಸಲು ನಿನ್ನಲ್ಲಿರುವ ಬಂಗಾರವನ್ನು ಕೊಡು ಎಂದು ತಿಳಿಸಿದ್ದು, ಅಮ್ರೀನ್ ರವರು ಅವರ ನಯವಾದ ಮಾತನ್ನು ನಂಬಿ ಅವರ 10 ಪವನ್‌ ಚಿನ್ನಾಭರಣವನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಸಾಲ ತೀರಿಸಲು ಪಡೆದುಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪುನಃ 2 ತಿಂಗಳಲ್ಲಿ 10 ಪವನ್‌ ನ ನೆಕ್ಲೆಸ್‌‌ ಅಡವಿರಿಸಿ ಹಣ ಪಡೆದುಕೊಂಡಿರುತ್ತಾರೆ. ಆರೋಪಿ 4 ಅಲ್ ಫಿಯಾ ಮತ್ತು 5ನೇ ಜಾಫರ್ ರವರು ಅವರ ಸಾಲಗಾರರನ್ನು  ಅಮ್ರೀನ್ ರವರು ವಾಸವಿರುವ ಮನೆಗೆ ಕಳುಹಿಸಿ ಮಾನಸಿಕ ಕಿರುಕುಳ ಕೊಟ್ಟಿರುವುದಲ್ಲದೇ ಮೋಸದಿಂದ 40 ಗ್ರಾಂ ಚಿನ್ನ ಮತ್ತು 2,50,000/- ಹಣ ಪಡೆದುಕೊಂಡಿದ್ದು, ಈವರೆಗೆ ಹಿಂತಿರುಗಿಸಿರುವುದಿಲ್ಲ ಎಂದಿದ್ದಾರೆ. ಇದಾದ 8 ತಿಂಗಳ ನಂತರ 1ನೇ ಆರೋಪಿ ಆದಿಲ್ ಇಬ್ರಾಹಿಂನು ಅಮ್ರೀನ್ ರ ಕೆಲವು ಚಿನ್ನಾಭರಣವನ್ನು ಮಾರಾಟ ಮಾಡಿ ಹಾಗೂ ಅಮ್ರೀನ್ ರವರ ಅಕ್ಕನ 120 ಗ್ರಾಂ ಚಿನ್ನವನ್ನು ಅಡವಿರಿಸಿ ಬ್ರಹ್ಮಾವರದ ಮೀನಾ ಅನ್‌ಮೊಲ್‌ ಎಂಬಲ್ಲಿ ಮನೆ ಖರೀದಿ ಮಾಡಿದ್ದು, ಮನೆಯು ಅಮ್ರೀನ್ ರ ಮತ್ತು 1ನೇ ಆರೋಪಿತನ ಹೆಸರಿನಲ್ಲಿದ್ದುರಿಂದ 3ನೇ ಆರೋಪಿ ಇರ್ಷಾದ್ ಬಾನು ಅವರು ಅಮ್ರೀನ್ ರವರನ್ನು ದ್ವೇಷ ಮಾಡಲು ಪ್ರಾರಂಭಿಸಿ 1ನೇ ಆರೋಪಿ ಆದಿಲ್ ಇಬ್ರಾಹಿಂನಿಂದ ಸಂಬಂಧವನ್ನು ಮುರಿಯಲು ಪ್ರಯತ್ನಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಮ್ರೀನ್ ರವರು 1ನೇ ಆರೋಪಿ ಗಂಡ ಆದಿಲ್ ಇಬ್ರಾಹಿಂನ ಬೇಡಿಕೆಯಂತೆ ಸ್ನೇಹಿತರಿಂದ ಮತ್ತು ಸಂಬಂಧಿಕರಿಂದ ಸುಮಾರು 8 ಲಕ್ಷ ಹಣವನ್ನು 1ನೇ ಆರೋಪಿತನಿಗೆ ನೀಡಿರುತ್ತಾರೆ ಎಂದಿದ್ದಾರೆ. ಹೀಗಿರುತ್ತಾ 1ನೇ ಆರೋಪಿ ಆದಿಲ್ ಇಬ್ರಾಹಿಂನು ಅಮ್ರೀನ್ ರವರ ಗಮನಕ್ಕೆ ಬಾರದಂತೆ ಮೋಸದಿಂದ ದಿನಾಂಕ 03/01/2025 ರಂದು 2ನೇ ಮದುವೆ ಆಗಿ ದಿನಾಂಕ 04/01/2025 ರಂದು 2ನೇ ಹೆಂಡತಿಯೊಂದಿಗೆ ದುಬೈಗೆ ಹೋಗಿರುವುದಾಗಿ ಅಮ್ರೀನ್ ರವರಿಗೆ ತಿಳಿದು ಬಂದಿದ್ದು, ಈ ಬಗ್ಗೆ  ಅಮ್ರೀನ್ ರವರು 1ನೇ ಆರೋಪಿತ ಆದಿಲ್ ಇಬ್ರಾಹಿಂನಿಗೆ ಕರೆ ಮಾಡಿ ಕೇಳಿದಾಗ ನಾನು ಮದುವೆ ಆಗಿರುತ್ತೇನೆ ನಿನಗೆ ನಾನು ತಲಾಕ್‌ ನೀಡುತ್ತೇನೆ ಎಂದು ಹೇಳಿ ಮೂರು ಬಾರಿ ತಲಾಕ್‌ ಉಚ್ಚರಿಸಿರುವುದಾಗಿ ಅಮ್ರೀನ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ  ಕಲಂ: 85, 318(2), 3(5) BNS & 3, 4 D.P Act & 3, 4 The Muslim Women (Protection of Rights on Marriage) Act 2019 ರಂತೆ ಪ್ರಕರಣ ದಾಖಲಾಗಿದೆ.

error: No Copying!