
ಬ್ರೇಕಿಂಗ್ ನ್ಯೂಸ್ ಗಳು ಮತ್ತಷ್ಟು ರೋಚಕವಾದಾಗ…..
ರೋಚಕತೆಯ ಹಿಂದೆ ಬಿದ್ದ ಮಾಧ್ಯಮಗಳು ಬಹುತೇಕ ಪರಮಾಣು ಯುದ್ದದಂತ ರೋಚಕತೆಯ ಉತ್ತುಂಗ ಸ್ಥಿತಿಯನ್ನು ನೋಡುವ ಬಯಕೆ ಹೊಂದಿದಂತೆ ಕಾಣುತ್ತಿದೆ.
ಕೊಲೆಗಳು, ಅಪಘಾತಗಳು, ಆತ್ಮಹತ್ಯೆಗಳು, ಅತ್ಯಾಚಾರಗಳು, ಭ್ರಷ್ಟಾಚಾರಗಳು, ಜೈಲುವಾಸಗಳು, ಹೃದಯಾಘಾತ ಗಳು, ಸುನಾಮಿ, ಭೂಕಂಪ, ಮೇಘಸ್ಪೋಟ, ಅಗ್ನಿ ಅವಘಡಗಳಂತ ಪ್ರಾಕೃತಿಕ ವಿಕೋಪಗಳು, ಕೋವಿಡ್ ವೈರಸ್ ನಂತ ಭೀಕರ ಸಾಂಕ್ರಾಮಿಕ ರೋಗಗಳು ಎಲ್ಲವೂ ಬ್ರೇಕಿಂಗ್ ನ್ಯೂಸ್ ಗಳಾಗಿ ಇತ್ತೀಚೆಗೆ ಆ ಸುದ್ದಿಗಳು ಸಹ ಸಹಜವಾಗುತ್ತಾ ಕುತೂಹಲ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಯುದ್ಧವಷ್ಟೇ ಸಾಕಾಗುತ್ತಿಲ್ಲ, ಪರಮಾಣು ಯುದ್ಧಗಳು, ಲಕ್ಷಾಂತರ ಜನರ ಸಾವು ನೋವುಗಳು ಬೇಕಾಗಿದೆ ಎಂದು ಅನಿಸುವ ಮಟ್ಟಿಗೆ ಫಿನಿಶ್, ಮಟಾಶ್, ಉಡೀಸ್, ಬರ್ಬಾದ್, ಮುಂತಾದ ಪದಗಳು ಅವರ ಬಾಯಿಯಿಂದ ಉದುರುತ್ತಿವೆ.
ಬಹುತೇಕ ಮಾಧ್ಯಮಗಳ ಎಲ್ಲಾ ಸುದ್ದಿಗಳು, ಚರ್ಚೆಗಳು ಬಾಂಬು, ಬಂದೂಕು, ಮಿಸೈಲ್, ದ್ರೋಣ್, ಏರ್ಕ್ರಾಫ್ಟ್ ಮುಂತಾದವುಗಳ ವರ್ಣನೆಯಲ್ಲಿ ಮುಗಿಯುತ್ತಿದೆ. ಸೇಡು, ಪ್ರತೀಕಾರ ಎಂಬ ಪದ ಪದೇ ಪದೇ ಕೇಳಿ ಬರುತ್ತಿದೆ.
ಇದು ಕೇವಲ ಭಾರತದ ಮಾಧ್ಯಮಗಳಿಗಷ್ಟೇ ಸೀಮಿತವಾಗಿಲ್ಲ. ಪಾಕಿಸ್ತಾನದ ಮಾಧ್ಯಮಗಳಲ್ಲೂ ಇದೇ ರೀತಿಯ ಚರ್ಚೆಗಳು. ಒಬ್ಬರ ವಿನಾಶವನ್ನು ಇನ್ನೊಬ್ಬರು ಬಯಸುವುದೇ ಆಗಿದೆ. ಅದನ್ನು ಅತ್ಯಂತ ಅಮಾನವೀಯವಾಗಿ ವರ್ಣಿಸಿ ಸಂಭ್ರಮಿಸಲಾಗುತ್ತಿದೆ.
ಮಾಧ್ಯಮಗಳು ಸುದ್ದಿವಾಹಕಗಳು ನಿಜ, ಆ ಕೆಲಸವನ್ನು ಅವರು ಮಾಡಲೇಬೇಕಾಗುತ್ತದೆ. ಅದನ್ನು ಮೀರಿ ಸಾಧ್ಯವಾದರೆ ಸಂಧಾನಕಾರರ ಪಾತ್ರವನ್ನು, ಶಾಂತಿ ಸ್ಥಾಪನೆಯ ಪ್ರಯತ್ನವನ್ನು, ಮಾತುಕತೆಯ ಬಾಗಿಲುಗಳನ್ನು ತೆರೆದಿಡುವ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಬೇಕಾಗುತ್ತದೆ. ಸಮಸ್ಯೆ ಬಗೆಹರಿಸಲು ಇರಬಹುದಾದ ಎಲ್ಲಾ ಅವಕಾಶಗಳ ಚರ್ಚೆಯನ್ನು ಇಡೀ ದೇಶದಲ್ಲಿ ಹುಟ್ಟು ಹಾಕಬೇಕಾಗುತ್ತದೆ.
ಏಕೆಂದರೆ, ಪರಿಸ್ಥಿತಿ ನಿಭಾಯಿಸಲು ಹೇಗಿದ್ದರು ಸರ್ಕಾರವಿದೆ, ಸೈನ್ಯವಿದೆ. ಅನಿವಾರ್ಯವಾದರೆ ಯುದ್ಧ ಮಾಡುತ್ತಾರೆ. ಆದರೆ ಮಾಧ್ಯಮಗಳೇ ಯುದ್ಧವನ್ನು ಬಯಸುವ ಹಂತಕ್ಕೆ ಪತ್ರಕರ್ತರು ಬಂದಿದ್ದಾರೆಂದರೆ ನಿಜಕ್ಕೂ ಮನುಷ್ಯತ್ವದ, ಪ್ರಜಾಪ್ರಭುತ್ವದ, ಮಾಧ್ಯಮ ಕ್ಷೇತ್ರದ ಮೌಲ್ಯಗಳು ಎಷ್ಟರ ಮಟ್ಟಿಗೆ ಇಂದು ಅಧೋಗತಿಗೆ ಇಳಿದಿದೆ ಎಂದು ಯೋಚಿಸಿದರೆ ವಿಷಾದವಾಗುತ್ತದೆ. ಆ ಮೌಲ್ಯಗಳು ಪತನವಾಗುವುದಿರಲಿ, ಅದಕ್ಕೆ ವಿರುದ್ಧ ಮೌಲ್ಯಗಳೇ ಹೆಚ್ಚು ಹೆಚ್ಚು ಮಾನ್ಯತೆ ಪಡೆಯುತ್ತಿವೆ.
ಮುಖ್ಯ ವಾಹಿನಿಯ, ಮುಖ್ಯ ಪತ್ರಕರ್ತರ ಬಹುತೇಕ ಚರ್ಚೆಗಳು ಮಾತುಗಳನ್ನು ಗಮನಿಸಿದರೆ ಏನು ರೋಷ, ಏನು ಕಿಚ್ಚು. ಈ ಕದನ ವಿರಾಮ ಅವರನ್ನು ತೀರಾ ನಿರಾಸೆಗೊಳಿಸಿದಂತಿದೆ. ಅವರ ಅಚ್ಚುಮೆಚ್ಚಿನ ಡಾರ್ಲಿಂಗ್ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಈ ವಿಷಯದಲ್ಲಿ ಮೊದಲ ಬಾರಿಗೆ ಟೀಕಿಸಲಾಗುತ್ತಿದೆ. ಅಷ್ಟು ಹತಾಶೆಗೆ ಒಳಗಾಗಿದ್ದಾರೆ.
ಮೊದಲು ತಮ್ಮೆಲ್ಲ ಕ್ರೋಧವನ್ನು ತಮ್ಮ ಭಾಷೆಯ ಎಲ್ಲಾ ಕೆಟ್ಟ ಪದಗಳ ಮೂಲಕ ಪಾಕಿಸ್ತಾನದ ಮೇಲೆ ತೀರಿಸಿಕೊಂಡವರು. ಇದೀಗ ಅಮೆರಿಕ ಅಧ್ಯಕ್ಷರನ್ನು ಸಹ ಯಕಶ್ಚಿತ್ ವ್ಯಕ್ತಿ ಎಂಬಂತೆ ಚಿತ್ರಿಸುತ್ತಿದ್ದಾರೆ.
ಇದೇ ಮಾಧ್ಯಮಗಳು ಒಂದು ಕಾಲದಲ್ಲಿ ” ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ” ಎಂಬ ಘೋಷಣೆಯನ್ನು ಬೆಂಬಲಿಸಿದ್ದವು. ಆತನ ಅನೈತಿಕತೆ, ವ್ಯಕ್ತಿತ್ವ, ವ್ಯವಹಾರ, ತಿಕ್ಕಲುತನ ಎಲ್ಲವನ್ನು ಗಮನಿಸಿಯೂ ಸಹ ಆತನ ಬೆಂಬಲಕ್ಕೆ ನಿಂತಿದ್ದವು. ಆತನನ್ನು ವಿರೋಧಿಸಬೇಕು ಎಂಬ ವಿವೇಚನೆಯನ್ನು ಕಳೆದುಕೊಂಡಿದ್ದವು.
ಈಗ ಅದೇ ವ್ಯಕ್ತಿಯ ಬಗ್ಗೆ ತೀರಾ ಕ್ಷುಲ್ಲಕವಾಗಿ ಮಾತನಾಡುತ್ತಿವೆ. ಹೇಗೆ ಪಾಕಿಸ್ತಾನ ಬೇವು ಬಿತ್ತಿ ಬೇವಿನ ಕಹಿಯನ್ನು ಅನುಭವಿಸುತ್ತಿದೆಯೋ ಅದೇ ಇಲ್ಲಿನ ಪತ್ರಕರ್ತರಿಗೂ ಅನ್ವಯಿಸುತ್ತದೆ. ಭಾರತ ಎಂಬುದು ಈ ಮಣ್ಣಿನ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸೃಷ್ಟಿಯಾಗಿದೆ. ಅದನ್ನು ಗೌರವಿಸಬೇಕಾಗಿರುವುದು ಪತ್ರಕರ್ತರು ಎಂಬ ಅತಿ ಬುದ್ಧಿವಂತ ವ್ಯಕ್ತಿಗಳ ಮುಖ್ಯ ಗುರಿಯಾಗಿರಬೇಕು. ಟಿಆರ್ಪಿಗಾಗಿಯೋ, ಜನಪ್ರಿಯತೆಗಾಗಿಯೋ, ಹುಚ್ಚು ಅಭಿಮಾನವೋ ಜನರಲ್ಲಿ ಧರ್ಮವನ್ನು, ರಾಷ್ಟ್ರೀಯತೆಯನ್ನು ಉನ್ಮಾದಗೊಳಿಸಿ ಒಂದು ರೀತಿ ಜನಾಭಿಪ್ರಾಯವನ್ನೇ ಕೆಡಿಸುವ ಹಂತಕ್ಕೆ ಮಾಧ್ಯಮಗಳು ತಲುಪಿರುವುದು ಬೇಸರದ ಸಂಗತಿ.
ಭಾರತೀಯ ಸೈನಿಕರು ಯುದ್ಧ ವಿಮಾನಗಳ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದ ಒಳನುಗ್ಗಿ ದಾಳಿ ಮಾಡಿ ಒಂದಷ್ಟು ಭಯೋತ್ಪಾದಕರನ್ನು ಕೊಂದ ದಿನ ರಾಷ್ಟ್ರೀಯ ಇಂಗ್ಲೀಷ್ ಚಾನಲ್ ನಲ್ಲಿ ದೀರ್ಘ ಚರ್ಚೆ ನಡೆಯುತ್ತಿತ್ತು. ಭಾರತದ ವಿಷಯತಜ್ಞರಲ್ಲದೆ, ಪಾಕಿಸ್ತಾನ ಸೈನ್ಯದ ವಕ್ತಾರರು ಮತ್ತು ಒಬ್ಬ ಪತ್ರಕರ್ತ ಕೂಡ ಇಸ್ಲಾಂಮಾಬಾದ್ ನಿಂದ ನೇರ ಪ್ರಸಾರದ ಚರ್ಚೆಯಲ್ಲಿ ಭಾಗವಹಿಸಿದ್ದ.
ಒಂದಷ್ಟು ಚರ್ಚೆಯ ನಂತರ ವಾಹಿನಿಯ ಮುಖ್ಯ ನಿರೂಪಕ ಪಾಕಿಸ್ತಾನದ ಪತ್ರಕರ್ತನಿಗೆ ತುಂಬಾ ಆಕ್ರೋಶ ಮತ್ತು ಆಕ್ರಮಣಕಾರಿಯಾಗಿ ಕೇಳುತ್ತಾನೆ
” ನಿಮ್ಮ ದೇಶ ಒಂದು ಭಯೋತ್ಪಾದಕ ದೇಶ. ಅದಕ್ಕೆ ಹುಚ್ಚು ಹಿಡಿದಿದೆ. ಇಡೀ ವಿಶ್ವಕ್ಕೆ ಭಯೋತ್ಪಾದನೆಯನ್ನು ಸರಬರಾಜು ಮಾಡುತ್ತಿದೆ. ನಾಲ್ಕು ಯುದ್ಧಗಳಲ್ಲಿ ನಾವು ಕೊಟ್ಟ ಹೊಡೆತ ಸಾಲದೆ. ಮತ್ತೆ ಮತ್ತೆ ನಮ್ಮನ್ನು ಕೆಣಕುತ್ತಲೇ ಇರುವಿರಿ. ಈಗ ಭಾರತದಲ್ಲಿ ಇರುವುದು ಮೋದಿಯವರ ಸರ್ಕಾರ. ನಿಮಗೆ ಸರಿಯಾಗಿ ಪಾಠ ಕಲಿಸುತ್ತೇವೆ ಎಚ್ಚರಿಕೆ ” ಎಂದು ಪ್ರಶ್ನೆ ರೂಪದ ಧಮಕಿ ಕೊಡುತ್ತಾನೆ.
ಆಗ ಪಾಕಿಸ್ತಾನದ ಆ ಪತ್ರಕರ್ತ ಉತ್ತರಿಸಿದ್ದು ಹೀಗೆ
” ಸನ್ಮಾನ್ಯರೆ, ಪಾಕಿಸ್ತಾನದ ಭಯೋತ್ಪಾದಕರ ಮೇಲೆ ನಡೆದ ನಿರ್ಧಿಷ್ಟ ದಾಳಿಯ ಬಗ್ಗೆ ಭಾರತೀಯ ಸೈನ್ಯ, ಸಾಮಾನ್ಯ ಜನರು ಮತ್ತು ಆಡಳಿತದ ರಾಜಕಾರಣಿಗಳು ಸಂಭ್ರಮಿಸುವುದು ಸಹಜ ಮತ್ತು ನ್ಯಾಯಯುತವಾದುದು. ಅವರಿಗೆ ಪೆಹಲ್ಗಾಮ್ ಘಟನೆ ತುಂಬಾ ನೋವುಂಟು ಮಾಡಿದೆ. ಆದರೆ ಇಡೀ ಚರ್ಚೆಯಲ್ಲಿ ಜವಾಬ್ದಾರಿಯುತವಾಗಿ ಮತ್ತು ವಿವೇಚನೆಯಿಂದ ವರ್ತಿಸಬೇಕಾದ ಪತ್ರಕರ್ತರಾದ ನೀವು ಮಾತನಾಡುತ್ತಿರುವುದು ಮತ್ತು ಸಂಭ್ರಮಿಸುತ್ತಿರುವುದು ಅತ್ಯಂತ ಅಸಹ್ಯ ಮತ್ತು ಪತ್ರಿಕಾ ಧರ್ಮಕ್ಕೆ ಎಸಗುತ್ತಿರುವ ದ್ರೋಹ. ಯುಧ್ಧವೆಂಬುದು ಯಾವ ಕಾರಣಕ್ಕೇ ಆಗಲಿ, ಸೋಲು ಗೆಲುವು ಯಾರದೇ ಆಗಲಿ, ಅದೊಂದು ಮಾನವ ಜನಾಂಗದ ಅಮಾನುಷ ಮತ್ತು ಅವಸಾನದ ಪ್ರಕ್ರಿಯೆ. ಅದು ನೋವನ್ನು ಉಂಟು ಮಾಡಬೇಕೆ ಹೊರತು ಸಂಭ್ರಮವನ್ನಲ್ಲ. ಅದರಲ್ಲೂ ಪತ್ರಕರ್ತರಾದವರು ಸಾಧ್ಯವಾದಷ್ಟು ಅದನ್ನು ತಡೆಯುವ ಮತ್ತು ಸಾಮಾನ್ಯ ಜನರ ಪ್ರಾಣ ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆ ಹೊರತು ಜನರನ್ನು ಉದ್ರೇಕಿಸುವುದಲ್ಲ. ನಾನು ಪಾಕಿಸ್ತಾನದ ಪ್ರಜೆ ಮತ್ತು ಇಸ್ಲಾಂ ಧರ್ಮದ ಅನುಯಾಯಿ. ಆದರೂ ನನಗೆ ಪಾಕಿಸ್ತಾನಕ್ಕಿಂತ ಭಾರತವೇ ಇಷ್ಟ. ಇಡೀ ವಿಶ್ವದಲ್ಲಿ ಶಾಂತಿ, ಅಹಿಂಸೆಯ ವಿಷಯದಲ್ಲಿ ನಾಯಕತ್ವ ವಹಿಸುವ ಶಕ್ತಿ ಭಾರತಕ್ಕಿದೆ. ಅಲ್ಲಿನ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸಾಮಾನ್ಯ ಜನರ ಸೌಹಾರ್ದ ಗುಣ ಎಲ್ಲರಿಗೂ ಮಾದರಿ. ಪಾಕಿಸ್ತಾನ ಒಂದು ಧರ್ಮದ ಆಧಾರದಲ್ಲಿ ರಚನೆಯಾಗಿ ಇಂದು ವಿನಾಶದತ್ತ ಸಾಗುತ್ತಿದೆ. ಆದರೆ ಭಾರತ ಜಾತ್ಯಾತೀತ ರಾಷ್ಟ್ರವಾಗಿ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. 25 ಕೋಟಿಗೂ ಹೆಚ್ಚು ಜನ ಮುಸ್ಲೀಮರು ಭಾರತದಲ್ಲಿ ಹೆಚ್ಚು ಕಡಿಮೆ ಸುರಕ್ಷಿತವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತೀಯ ಪತ್ರಕರ್ತರು ಹೆಚ್ಚು ಜವಾಬ್ದಾರಿ ಮತ್ತು ವಿವೇಚನೆಯಿಂದ ವರ್ತಿಸಬೇಕೆ ಹೊರತು ತೋಳೇರಿಸಿ, ಆಕ್ರೋಶ ವ್ಯಕ್ತಪಡಿಸಿ ಜನರನ್ನು ಪ್ರಚೋದಿಸುವುದಲ್ಲ. ನಾನು ಇತ್ತೀಚೆಗೆ ಚೀನಾ ಪ್ರವಾಸ ಮಾಡಿದೆ. ಅಲ್ಲಿಯೂ ಕೂಡ ಸಾಮಾನ್ಯ ಭಾರತೀಯರ ಆದರ್ಶ ಮತ್ತು ಜೀವನ ಕ್ರಮವನ್ನು ಪ್ರಶಂಸಿಸಲಾಗುತ್ತದೆ. ಆದರೆ ಭಾರತೀಯ ಮಾಧ್ಯಮಗಳ ನಡವಳಿಕೆಯ ಬಗ್ಗೆ ಕೆಟ್ಟ ಅಭಿಪ್ರಾಯವಿದೆ. ಅತ್ಯಂತ ಜನಪ್ರಿಯ ಮಾಧ್ಯಮವಾದ ಪತ್ರಿಕಾರಂಗ ತಮ್ಮ ನೆಲದ ಮೂಲ ಗುಣವನ್ನು ಎತ್ತಿ ಹಿಡಿಯಬೇಕೆ ಹೊರತು ಯುದ್ದೋತ್ಸಾಹವನ್ನಲ್ಲ.
ಇತ್ತೀಚೆಗೆ ಭಾರತ ಧರ್ಮಾಂಧತೆಯತ್ತ ಸಾಗುತ್ತಿದೆ. ಅಲ್ಲಿನ ಮಾಧ್ಯಮಗಳು ಅದಕ್ಕೆ ಪೂರಕವಾಗಿ ವರ್ತಿಸಿ ಸತ್ಯ ಮರೆಮಾಚುತ್ತಿವೆ. ಜನಪ್ರಿಯತೆ ಮತ್ತು ಹಣಗಳಿಸುವ ಅಡ್ಡದಾರಿ ಹಿಡಿದಿವೆ. ಇದು ಅತ್ಯಂತ ಕಳವಳಕಾರಿ. ಇದನ್ನು ಭಾರತದ ಮೇಲಿನ ಪ್ರೀತಿಯಿಂದ ಹೇಳುತ್ತಿದ್ದೇನೆ. ಪಾಕಿಸ್ತಾನದ ವಿನಾಶವನ್ನು ಕಣ್ಣಾರೆ ಕಂಡು ಹೇಳುತ್ತಿದ್ದೇನೆ. ಪತ್ರಕರ್ತರಾದ ನೀವು ಹೆಚ್ಚು ಸಂಯಮದಿಂದ ಮತ್ತು ಮಾನವೀಯತೆಯಿಂದ ವರ್ತಿಸಿ.”
ಭಾರತೀಯ ಪತ್ರಕರ್ತರೇ ಒಳ್ಳೆಯ ವಿಷಯ ಎಲ್ಲಿಂದಲೇ ಬರಲಿ. ಅದನ್ನು ಮುಕ್ತವಾಗಿ ಸ್ವೀಕರಿಸಿ. ಭಾರತದ ಶಕ್ತಿ ಅಡಗಿರುವುದು ಇಲ್ಲಿನ ಸತ್ಯ, ಅಹಿಂಸೆ, ಜನರ ಸೌಹಾರ್ದ ಮನೋಭಾವದಲ್ಲಿಯೇ ಹೊರತು ನಿಮ್ಮಂತ ಯುದ್ಧೋತ್ಸಾಹಿ ಅವಿವೇಕಿಗಳ ಅಸಂಬದ್ಧ ಮಾತುಗಳಿಂದ ಅಲ್ಲ. ದೇಶದ ರಕ್ಷಣೆಯ ಹೊಣೆ ನಮ್ಮನ್ನಾಳುವ ಸರ್ಕಾರಕ್ಕೆ ತಿಳಿದಿದೆ. ಅದು ಅವರ ಜವಾಬ್ದಾರಿ. ನೀವು ನಿಮ್ಮ ಪತ್ರಿಕಾ ಧರ್ಮದ ಜವಾಬ್ದಾರಿ ಸರಿಯಾಗಿ ನಿರ್ವಹಿಸಿ ಎಂಬುದು ಸಾಮಾನ್ಯ ನಾಗರಿಕರ ಕಳಕಳಿಯ ಮನವಿ,
ಧನ್ಯವಾದಗಳು……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….