
ದಿನಾಂಕ:09-05-2025( ಹಾಯ್ ಉಡುಪಿ ನ್ಯೂಸ್)
ನವದೆಹಲಿ: ಜಮ್ಮು ವಿಮಾನ ನಿಲ್ದಾಣದ ಮೇಲೆ ಪಾಕ್ ಉದ್ದೇಶಿತ ದಾಳಿಯನ್ನು ವಿಫಲಗೊಳಿಸಿದ ನಂತರ ಭಾರತ ಲಾಹೋರ್ ಹಾಗೂ ಇಸ್ಲಾಮಾಬಾದ್ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಜಮ್ಮು ವಿಮಾನನಿಲ್ದಾಣವು ಭಾರತೀಯ ವಾಯುಪಡೆಯ ನಿಲ್ದಾಣವನ್ನೂ ಸಹ ಹೊಂದಿದೆ.
ಪಾಕಿಸ್ತಾನ ವಾಯುದಾಳಿ ಯತ್ನ ವಿಫಲಗೊಳಿಸಿರುವ ಭಾರತ ಈಗ ಉಗ್ರ ಹಫೀಜ್ ಸಯೀದ್ ಕೋಟೆ ಇರುವ ಲಾಹೋರ್ ನನ್ನೇ ಗುರಿಯಾಗಿಸಿ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಮೇಲೂ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಸಿಯಾಲ್ ಕೋಟ್, ಕರಾಚಿ ಸೇರಿದಂತೆ ಪಾಕಿಸ್ತಾನದ ವಿವಿಧೆಡೆ ಭಾರತ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದ್ದು, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸ ಮಾಡಿದೆ ಎಂದು ವಿವಿಧ ವರದಿಗಳು ತಿಳಿಸಿವೆ.
ಸ್ಫೋಟಗಳನ್ನು ಹೋಲುವ ಶಬ್ದಗಳು ಜಮ್ಮುವಿನಲ್ಲಿ ಭೀತಿಯನ್ನು ಉಂಟುಮಾಡಿವೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ. ಜಮ್ಮು ವಿಮಾನ ನಿಲ್ದಾಣದ ಹೊರಗೆ ಡ್ರೋನ್ ಬೀಳುತ್ತಿರುವುದನ್ನು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನ ದಾಳಿ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಕಂಪ್ಲೀಟ್ ಬ್ಲ್ಯಾಕ್ ಔಟ್ ಮಾಡಲಾಗಿದೆ. ರಾತ್ರಿಯಿಡೀ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಉರಿ ಸೆಕ್ಟರ್ ನಲ್ಲಿ ಪಾಕ್ ಸೈನಿಕರು ಶೆಲ್ ದಾಳಿ ನಡೆಸಿದ್ದು ಇದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನದ ಸೈನಿಕರು ಶೆಲ್ ದಾಳಿಯನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ. ಕುಪ್ವಾರ ಜಿಲ್ಲೆಯ ತಂಗ್ಧರ್ ಸೆಕ್ಟರ್ ಮತ್ತು ಬಾರಾಮುಲ್ಲಾದ ಬೋನಿಯಾರ್ ಸೆಕ್ಟರ್ ಪಾಕಿಸ್ತಾನದ ಗುಂಡಿನ ದಾಳಿಗೆ ಒಳಗಾಗಿದೆ.