Spread the love

ನವದೆಹಲಿ: ದಿನಾಂಕ:22-04-2025(ಹಾಯ್ ಉಡುಪಿ ನ್ಯೂಸ್) ಯೋಗ ಗುರು ಬಾಬಾ ರಾಮ್‌ದೇವ್ ಅವರು ಇತ್ತೀಚೆಗೆ ಹಮ್‌ದರ್ದ್ ಅವರ ರೂಹ್ ಅಫ್ಜಾ ಪಾನೀಯದ ಕುರಿತು ನೀಡಿದ್ದ ‘ಶರಬತ್ ಜಿಹಾದ್’ ಹೇಳಿಕೆಯು ‘ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡಿದೆ’ ಮತ್ತು ಇಂತಹ ಹೇಳಿಕೆಗಳು ಸಮರ್ಥನೀಯವಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಹಮ್‌ದರ್ದ್ ನ್ಯಾಷನಲ್ ಫೌಂಡೇಶನ್ ಇಂಡಿಯಾ ರಾಮ್‌ದೇವ್ ಅವರ ಪತಂಜಲಿ ಫುಡ್ಸ್ ಲಿಮಿಟೆಡ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್, ‘ಈ ಹೇಳಿಕೆಯು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಆಘಾತಗೊಳಿಸುವಂತಿದೆ. ಇಂತಹ ಹೇಳಿಕೆಗಳು ಸಮರ್ಥನೀಯವಲ್ಲ. ಈ ರೀತಿ ಮಾತನಾಡುವಾಗ ಗಮನವಿಟ್ಟುಕೊಳ್ಳುವಂತೆ ನಿಮ್ಮ ಕಕ್ಷಿದಾರರಿಗೆ ಹೇಳಿ. ಇಲ್ಲದಿದ್ದರೆ, ನ್ಯಾಯಾಲಯದಿಂದ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ರಾಮ್‌ದೇವ್ ಪರ ವಕೀಲರಿಗೆ ಸೂಚಿಸಿದೆ.

ಇತ್ತೀಚೆಗಷ್ಟೇ ಪತಂಜಲಿಯ ಗುಲಾಬ್ ಶರಬತ್ ಪ್ರಚಾರದ ವೇಳೆ, ಹಮ್‌ದರ್ದ್ ಅವರ ರೂಹ್ ಅಫ್ಜಾದಿಂದ ಗಳಿಸಿದ ಹಣವನ್ನು ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸಲಾಗಿದೆ ಎಂದು ರಾಮದೇವ್ ಹೇಳಿದ್ದರು. ನಂತರ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ರಾಮದೇವ್, ತಾವು ಯಾವುದೇ ಬ್ರ್ಯಾಂಡ್ ಅಥವಾ ಸಮುದಾಯವನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ ಎಂದಿದ್ದರು.

error: No Copying!