
ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕರಾದ
ಶ್ರೀ ಪಿಳ್ಳ ಮುನಿಶಾಮಪ್ಪನವರು ನಿನ್ನೆ ಚೀನಾ ದೇಶದಿಂದ ಕರೆ ಮಾಡಿದ್ದರು. ಹಾಂಕಾಂಗ್ ಮತ್ತು ಚೀನಾ ಪ್ರವಾಸದಲ್ಲಿರುವ ಅವರು ಚೀನಾದ ಸುತ್ತಾಟದಲ್ಲಿ ತಮಗಾದ ಕೆಲವು ಅನುಭವಗಳನ್ನು ಹಂಚಿಕೊಳ್ಳುತ್ತಾ ಭಾವುಕರಾದರು.
ಚೀನಾದ ಆ ಅದ್ಭುತ ರಸ್ತೆಗಳು, ಚೀನಾದ ಜನರ ಸೌಮ್ಯ ಸ್ವಭಾವ, ಅಲ್ಲಿನ ಗಿಡಮರಗಳನ್ನು, ಸಸಿಗಳನ್ನು ಮಕ್ಕಳಂತೆ ನೋಡಿಕೊಳ್ಳುವ ಅವರ ಪರಿಸರ ಪ್ರೀತಿ, ಹೋಟೆಲ್ ಮತ್ತು ವಾಹನ ಚಾಲಕರ ನಾಗರಿಕ ವರ್ತನೆ ಇತ್ಯಾದಿ ಇತ್ಯಾದಿ ವಿವರಣೆಗಳನ್ನು ನೀಡುತ್ತಾ, ನಮ್ಮ ದೇಶದ ಕೆಲವು ಜನರ ವರ್ತನೆಗಳ ಬಗ್ಗೆಯೂ ಹೋಲಿಕೆ ಮಾಡುತ್ತಾ, ನಮ್ಮ ಸಮಾಜದಲ್ಲಿ, ನಮ್ಮ ಸಂಸ್ಕೃತಿಯಲ್ಲಿ, ನಮ್ಮ ನಾಗರಿಕತೆಯಲ್ಲಿ ಮಾಡಿಕೊಳ್ಳಬಹುದಾದ ಕೆಲವು ಬದಲಾವಣೆ ಮತ್ತು ಪರಿವರ್ತನೆಗಳನ್ನು ಕುರಿತು ಚರ್ಚೆ ಮಾಡಿದರು.
ಸಾಮಾನ್ಯವಾಗಿ ವಿದೇಶ ಯಾತ್ರೆ ಮಾಡುವ ಮುಖ್ಯವಾಗಿ ಚೀನಾ, ಜಪಾನ್, ಕೊರಿಯಾ, ವಿಯೆಟ್ನಾಂ, ಭೂತಾನ್ ಅದರಲ್ಲೂ ಯುರೋಪಿನ ಸ್ಕ್ಯಾಂಡಿನೇವಿಯಾ ದೇಶಗಳಾದ ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಐಸ್ಲ್ಯಾಂಡ್, ಗ್ರೀನ್ಲ್ಯಾಂಡ್, ಫಿನ್ಲೆಂಡ್ ಮುಂತಾದ ದೇಶಗಳು, ಜೊತೆಗೆ ನ್ಯೂಜಿಲೆಂಡ್ ಆಸ್ಟ್ರೇಲಿಯಾದಂತ ದೇಶಗಳನ್ನು ಸುತ್ತಿ ಬರುವವರಲ್ಲಿ, ಅಮೆರಿಕಾದ ಅತ್ಯಂತ ಶ್ರೀಮಂತಿಕೆ ನೋಡಿರುವವರು, ಯುನೈಟೆಡ್ ಅರಬ್ ಎಮಿರೇಟ್ಸ್ ಸುತ್ತಾಡಿರುವವರು ಅಲ್ಲಿನ ಪ್ರಾಕೃತಿಕ ಸೌಂದರ್ಯ, ಶ್ರೀಮಂತಿಕೆ, ಜನರ ಶಿಸ್ತು, ನಾಗರೀಕ ವರ್ತನೆಗಳನ್ನು ಕಂಡು ಅದನ್ನು ಭಾರತದ ಸ್ಥಳೀಯತೆಗೆ ಹೋಲಿಸಿಕೊಂಡು ಒಂದಷ್ಟು ಬೇಸರ ವ್ಯಕ್ತಪಡಿಸುವುದು ಸದಾ ಕಾಲ ಗಮನಿಸಬಹುದು.
ಹಾಗೆಂದು ಅದು ಭಾರತದ ದೂಷಣೆಯಲ್ಲ, ಭಾರತದ ಮೇಲಿನ ಪ್ರೀತಿ. ಅಂದರೆ ನಮ್ಮ ದೇಶವೂ ಸಹ ಆ ರೀತಿಯ ನಾಗರಿಕ ವರ್ತನೆ ತೋರಿಸಿದರೆ ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿ ಹೊಂದಿ ನೆಮ್ಮದಿಯಾಗಿ ಬದುಕಬಹುದು ಎನ್ನುವ ಆಸೆಯನ್ನು ಅವರ ಮಾತುಗಳಲ್ಲಿ ಗ್ರಹಿಸಬಹುದು.
ನಾನು ಕೂಡ ವಿಶ್ವದ ಎಲ್ಲಾ ದೇಶಗಳನ್ನು, ಎಲ್ಲಾ ಕಾಲದಲ್ಲೂ ಸದಾ ಸುತ್ತುವ ಟೂರ್ ಮ್ಯಾನೇಜರ್ ಗಳನ್ನು ಈ ವಿಷಯದಲ್ಲಿ ಆಗಾಗ ಮಾತನಾಡಿಸುತ್ತೇನೆ. ಯಾವ ದೇಶದ ಜನರ ನಡವಳಿಕೆಗಳು ಹೇಗಿರುತ್ತದೆ ಎಂದು ಪ್ರಶ್ನಿಸುತ್ತೇನೆ. ಅವರೆಲ್ಲರೂ ಹೇಳುವುದು ಸಾಮಾನ್ಯವಾಗಿ ವಿಶ್ವದ ಪ್ರವಾಸಿಗರಲ್ಲಿ ಅವರ ನಡೆ-ನುಡಿಗಳಲ್ಲಿ ಮೊದಲ ಸ್ಥಾನ ಚೀನಾ, ಜಪಾನ್ ಕೊರಿಯಾ ಮುಂತಾದ ದೇಶದ ಪ್ರವಾಸಿಗಳಿಗೆ ನೀಡುತ್ತಾರೆ. ಎರಡನೇ ಸ್ಥಾನವನ್ನು ಯುರೋಪಿನ ದೇಶಗಳಿಗೂ, ಮೂರನೆಯ ಸ್ಥಾನವನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಮೆರಿಕ ಮುಂತಾದ ದೇಶಗಳಿಗೂ ಕೊಡುತ್ತಾರೆ. ಕೊನೆಯ ಸ್ಥಾನವನ್ನು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ರಿಕಾದ ಕೆಲವು ದೇಶಗಳನ್ನು ಹೆಸರಿಸುತ್ತಾರೆ. ಈಗ ಒಂದಷ್ಟು ಭಾರತೀಯರ ಬಗ್ಗೆ ವಿದೇಶದಲ್ಲಿ ಬದಲಾವಣೆ ಆಗಿದೆ ಎಂದು ಹೇಳುತ್ತಾರಾದರೂ ಅಂತರಿಕವಾಗಿ ಭಾರತದ ಜನರ ಮನೋಭಾವವನ್ನು ಗಮನಿಸಿದಾಗ ಇನ್ನು ಸಾಕಷ್ಟು ಬದಲಾವಣೆ ಬರಬೇಕೆಂದು ಎಲ್ಲರಿಗೂ ಅನಿಸುತ್ತದೆ.
ಇಂದಿನ ಭಾರತದ ಒಟ್ಟು ವ್ಯವಸ್ಥೆಯಲ್ಲಿ ಯಾವ ವ್ಯಕ್ತಿಗಳು ಹೆಚ್ಚು ಪ್ರಸಿದ್ಧರಾಗಿದ್ದಾರೆ, ಯಾವ ರೀತಿಯ ವ್ಯಕ್ತಿಗಳು ಅಧಿಕಾರ ಹಿಡಿದಿದ್ದಾರೆ, ಯಾವ ರೀತಿಯ ವ್ಯಕ್ತಿಗಳು ಜನಪ್ರಿಯರಾಗಿದ್ದಾರೆ, ಯಾವ ರೀತಿಯ ವ್ಯಕ್ತಿತ್ವದವರು ಹಣ ಮಾಡಿದ್ದಾರೆ, ಯಾವ ರೀತಿಯ ಸಿನಿಮಾಗಳು, ಧಾರವಾಹಿಗಳು ಯಶಸ್ವಿಯಾಗುತ್ತಿವೆ, ಯಾವ ರೀತಿಯ ಯೂಟ್ಯೂಬ್ ಚಾನೆಲ್ ಗಳು ಅತಿ ಹೆಚ್ಚು ವೀಕ್ಷಕರನ್ನು ಆಕರ್ಷಿಸುತ್ತಿದೆ, ಯಾವ ರೀತಿಯ ರಿಯಾಲಿಟಿ ಶೋಗಳು ಜನಪ್ರಿಯತೆ ಪಡೆಯುತ್ತಿವೆ, ಯಾವ ರೀತಿಯ ಉದ್ಯಮಿಗಳು ಯಶಸ್ವಿಯಾಗುತ್ತಿದ್ದಾರೆ, ಯಾವ ಉದ್ಯೋಗ ಹೆಚ್ಚು ಲಾಭಗಳಿಸುತ್ತಿದೆ ಹೀಗೆ ಇಡೀ ವ್ಯವಸ್ಥೆಯನ್ನು ಒಮ್ಮೆ ಅವಲೋಕಿಸಿ ನೋಡಿ ನಿಜಕ್ಕೂ ಹೆಚ್ಚು ನಿರಾಶೆಯಾಗುವುದು ಮಾತ್ರವಲ್ಲದೆ ಬೇಸರವಾಗುತ್ತದೆ ಸಹ.
ನಿಜವಾದ ಈ ದೇಶದ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಹೊಂದಿರುವವರು ಬಹುತೇಕ ಮೂಲೆಗುಂಪಾಗಿರುತ್ತಾರೆ. ಒಳ್ಳೆಯವರು ಒಳ್ಳೆಯವರಾಗಿಯೇ ಬದುಕಲು ಸಹ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಗಳೇ ಇರಲಿ, ಸರ್ಕಾರಿ ಅಧಿಕಾರಿಗಳೇ ಇರಲಿ, ಧಾರ್ಮಿಕ ಮುಖಂಡರೇ ಆಗಿರಲಿ, ಜಾತಿ ಸಂಘಟನೆಗಳೇ ಇರಲಿ, ಭ್ರಷ್ಟಾಚಾರವೇ ಇರಲಿ ಎಲ್ಲವೂ ಕೂಡ ಇಂದು ಉಡಾಫೆ ವ್ಯಕ್ತಿತ್ವದ, ಭ್ರಷ್ಟ ಮನಸ್ಥಿತಿಯ ಜನರೇ ಹೆಚ್ಚು ಹೆಚ್ಚು ಮುಖ್ಯ ವಾಹಿನಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕೆಟ್ಟ ಸಿನಿಮಾಗಳು, ಭಾರತದ ಮೌಲ್ಯಗಳಿಗೆ ವಿರುದ್ಧ ಚಿಂತನೆಯ ಕಥೆಗಳು ಯಶಸ್ವಿಯಾಗುತ್ತಿವೆ. ಹಿಂಸೆ, ಕ್ರೌರ್ಯ ವಿಜೃಂಭಿಸುತ್ತಿದೆ. ಜನರ ಆರೋಗ್ಯ ಕುಸಿಯುತ್ತಿದೆ. ಮಾನಸಿಕ ನೆಮ್ಮದಿ ಕಾಣೆಯಾಗಿದೆ. ನಾಗರೀಕ ಲಕ್ಷಣಗಳು ತುಂಬಾ ಕಡಿಮೆಯಾಗಿದೆ. ಎಲ್ಲಾ ಕಡೆಯೂ ಸ್ವಚ್ಛತೆ ಕಾಣೆಯಾಗಿದೆ. ಪರಿಸರ ಮಾಲಿನ್ಯ ಅಧೋಗತಿ ತಲುಪಿದೆ. ಆಹಾರ ಕಲಬೆರಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ. ಶಿಕ್ಷಣ ಮತ್ತು ಮೆಡಿಕಲ್ ಮಾಫಿಯಾ ಉತ್ತುಂಗದಲ್ಲಿದೆ. ರಾಜಕೀಯ ಕೆಸರಾಟ ತನ್ನ ಮೌಲ್ಯ ಕಳೆದುಕೊಂಡಿದೆ.
ಹೀಗಿರುವಾಗ ಖಂಡಿತವಾಗಲೂ
ಆತ್ಮವಂಚನೆ ಮಾಡಿಕೊಂಡು ಈ ದೇಶದ ಇಲ್ಲದ ಮೌಲ್ಯಗಳನ್ನು ಎತ್ತಿ ಹೇಳಿ ವಿಜೃಂಭಿಸುವುದು ಎಷ್ಟರಮಟ್ಟಿಗೆ ಸರಿ. ಹಾಗೆಂದು ಈ ದೇಶ ಸಂಪೂರ್ಣ ಹಾಳಾಗಿದೆ ಎಂದು ಹೇಳುತ್ತಿಲ್ಲ. ನಮ್ಮ ಸಾಂಸ್ಕೃತಿಕ ಮೌಲ್ಯಗಳು ಅತ್ಯುತ್ತಮ ನಿಜ, ಆದರೆ ಅವು ವಿನಾಶದ ಹಾದಿಯಲ್ಲಿ ಸಾಗುತ್ತಿದೆ.
ಆದಷ್ಟು ಬೇಗ ನಾವೆಲ್ಲರೂ ಈ ನಿಟ್ಟಿನಲ್ಲಿ ಎಚ್ಚರಗೊಂಡು ಮಾನವೀಯ ಮೌಲ್ಯಗಳು, ನಾಗರಿಕ ಲಕ್ಷಣಗಳು, ಭಾರತೀಯ ಪ್ರಗತಿಪರ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.
ಸಾಮಾನ್ಯವಾಗಿ ಪ್ರತಿ ಕುಟುಂಬದಲ್ಲೂ ಒಂದಲ್ಲ ಒಂದು ಒಡಕು ಮೂಡಿ ಅನೇಕ ರೀತಿಯ ಗಲಾಟೆಗಳಾಗುತ್ತಿವೆ. ಅದನ್ನು ನಿಯಂತ್ರಣಕ್ಕೆ ತರಲೇಬೇಕಿದೆ. ಕೌಟುಂಬಿಕ ವ್ಯವಸ್ಥೆಯು ಸಂಪೂರ್ಣ ಅವನತಿಯ ಹಾದಿಯಲ್ಲಿದೆ. ಅದರ ಪರಿಣಾಮ ಸಮಾಜದ ಮೇಲೂ ಆಗುತ್ತಿದೆ. ಆದ್ದರಿಂದ ಇದೊಂದು ಎಚ್ಚರಿಕೆಯ ಗಂಟೆಯಾಗಿ ಕನಿಷ್ಠ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳ ಮೂಲಕವಾದರೂ ಒಂದಷ್ಟು ಜಾಗೃತ ಚಳುವಳಿಗಳು ಪ್ರಾರಂಭವಾಗಲಿ ಎಂಬ ಉದ್ದೇಶದಿಂದ ಶ್ರೀ ಪಿಳ್ಳ ಮುನಿಶಾಮಪ್ಪನವರ ಕಾಳಜಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..